ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: 27 ಗ್ರಾಮಗಳಲ್ಲಿ ನೀರಿಗೆ ತತ್ವಾರ

ನೀರಿನ ಅಭಾವದಿಂದಾಗಿ ರಾಸುಗಳ ಪಾಲನೆಗೆ ಮತ್ತಷ್ಟು ಸಮಸ್ಯೆ
Last Updated 5 ಮೇ 2020, 10:29 IST
ಅಕ್ಷರ ಗಾತ್ರ

ಬಂಗಾರಪೇಟೆ: ಬಿಸಿಲಿನ ತಾಪ ಏರುತ್ತಿದ್ದಂತೆ ತಾಲ್ಲೂಕಿನ 9 ಪಂಚಾಯಿತಿಗಳಲ್ಲಿ ನೀರಿಗೆ ತತ್ವಾರ ಶುರುವಾಗಿದೆ.

21 ಪಂಚಾಯಿತಿ ಪೈಕಿ ಕಸಾಬ ವ್ಯಾಪ್ತಿಯ 18 ಗ್ರಾಮ, ಬೂದಿಕೋಟೆ ಹೋಬಳಿಯ 7 ಗ್ರಾಮ, ಕಾಮಮಸಮುದ್ರ ಹೋಬಳಿಯ 2 ಗ್ರಾಮ ಸೇರಿದಂತೆ 27 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಬಹುತೇಕ ಗ್ರಾಮಗಳಲ್ಲಿ ರೈತರು ಜೀವನಕ್ಕಾಗಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ನೀರಿನ ಅಭಾವದಿಂದಾಗಿ ರಾಸುಗಳ ಪಾಲನೆ ಮತ್ತಷ್ಟು ಸಮಸ್ಯೆಯಾಗಿದೆ.

ಕಾಮಸಮುದ್ರ ಹೋಬಳಿ ದೋಣಿಮೊಡಗು ಪಂಚಾಯಿತಿಯ ತೆನಿಮೊಡಗು ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಸಾಕರಸನಹಳ್ಳಿ ಗ್ರಾಮದಲ್ಲಿ 8 ತಿಂಗಳ ಹಿಂದೆಯೇ ಕೊಳವೆ ಬಾವಿ ಬತ್ತಿಹೋಗಿದೆ. ಐದಾರು ತಿಂಗಳಿಂದ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಆಲಂಬಾಡಿ ಜೋತೇನಹಳ್ಳಿ ಪಂಚಾಯಿತಿಯ ಗಾಜಗ ಗ್ರಾಮದಲ್ಲಿ ಮೂರು ತಿಂಗಳಿಂದ ನೀರಿನ ಅಭಾವ ಉಂಟಾಗಿದೆ. ಪ್ರಸ್ತುತ ನಿತ್ಯ 5 ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ಪಂಚಾಯಿತಿಯ ಹಿರೇಕರಪನಹಳ್ಳಿಗೆ ಟ್ಯಾಂಕರ್ ಮೂಲಕ, ಕೊಮ್ಮೇನಹಳ್ಳಿ ನೆತ್ತಬೆಲೆ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ.

ಯಳೇಸಂದ್ರ ಪಂಚಾಯಿತಿಯ ಗರುಡಕೆಂಪನಹಳ್ಳಿ, ಅಂಬೇಡ್ಕರ್ ಕಾಲೋನಿ, ಕೋಡಗುರ್ಕಿ ದಿನ್ನಕೊತ್ತೂರು ಗ್ರಾಮಗಳಲ್ಲಿ ಇದ್ದ ಕೊಳವೆ ಬಾವಿಗಳು ಬತ್ತಿವೆ. ಸುಮಾರು ಒಂದೂವರೆ ತಿಂಗಳಿಂದ ಈ ಗ್ರಾಮಗಳಲ್ಲಿ ನೀರಿಗೆ ಅಭಾವವಿದ್ದು, ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಕೆಗೆ ಪಂಚಾಯಿತಿ ಕ್ರಮ ಕೈಗೊಂಡಿದೆ.

ತಾಲ್ಲೂಕಿನ 9 ಹಳ್ಳಿಗಳಿಗೆ ನಿತ್ಯ 26 ಟ್ಯಾಂಕರ್, 19 ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಟ್ಯಾಂಕರ್‌ಗೆ ₹ 600, ಖಾಸಗಿ ಕೊಳವೆ ಬಾವಿಗೆ ತಿಂಗಳಿಗೆ ₹ 18 ಸಾವಿರ ಪಾವತಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ್
ತಿಳಿಸಿದರು.

*

13 ದಿನವಾದರೂ ನೀರಿಲ್ಲ

ಬಂಗಾರಪೇಟೆ ಪಟ್ಟಣದಲ್ಲಿಯೂ ನೀರಿನ ಬವಣೆ ಹೆಚ್ಚಿದೆ. ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದ್ದ ಬಡಾವಣೆಗಳಲ್ಲಿ ಈಗ 13 ದಿನವಾದರೂ ನೀರಿಲ್ಲ. ಕೆಲವೆಡೆ 20 ದಿನಗಳಾದರೂ ನೀರು ಬಿಟ್ಟಿಲ್ಲ ಎನ್ನುವುದು ನಿವಾಸಿಗಳ ದೂರು.

27 ಬಡಾವಣೆಗಳ ಪೈಕಿ ದೇಶಹಳ್ಳಿ, ವಿಜಯನಗರ, ವಿವೇಕಾನಂದ ನಗರ ಸೇರಿದಂತೆ 8 ಬಡಾವಣೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಉಳ್ಳವರು ಟ್ಯಾಂಕರ್ ನೀರು ಖರೀದಿಸಿದರೆ, ಇಲ್ಲದವರು ಪುರಸಭೆ ನೀರಿಗೆ ಕಾಯುವ ಅನಿವಾರ್ಯ ಎದುರಾಗಿದೆ.

140 ಕೊಳವೆ ಬಾವಿ ಕೊರೆಸಿದ್ದು, ಪ್ರಸ್ತುತ 50ರಲ್ಲಿ ನೀರು ಪೂರೈಕೆ ಆಗುತ್ತಿದೆ. ಅದರಲ್ಲೂ ನೀರಿನ ಹರಿವು ಕ್ಷೀಣಿಸಿದೆ. ಹಾಗಾಗಿ 12 ಟ್ಯಾಂಕರ್ ಮೂಲಕ ನಿತ್ಯ 50 ಟ್ರಿಪ್ ನೀರು ಹೊಡಿಸಿಕೊಳ್ಳಲಾಗುತ್ತಿದೆ ಎಂದು ಪುರಸಭೆ ಕಿರಿಯ ಎಂಜಿನಿಯರ್ ರಾಜೇಂದ್ರನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT