ಮಂಗಳವಾರ, ನವೆಂಬರ್ 19, 2019
26 °C

ನಗರಸಭೆ ಚುನಾವಣೆ ಸುಸೂತ್ರವಾಗಿ ನಡೆಸಿ: ಜಿಲ್ಲಾಧಿಕಾರಿ ಸೂಚನೆ

Published:
Updated:
Prajavani

ಕೋಲಾರ: ‘ಜಿಲ್ಲೆಯ ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್ ನಗರಸಭೆ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವುದು ಅಧಿಕಾರಿಗಳ ಜವಾಬ್ದಾರಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ನಗರಸಭೆ ಚುನಾವಣಾ ಸಿದ್ಧತೆ ಮತ್ತು ಚುನಾವಣಾ ನೀತಿಸಂಹಿತೆ ಪಾಲನೆ ಕುರಿತು ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಹಣ, ಮದ್ಯ ಹಂಚಿಕೆ ಸೇರಿದಂತೆ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ನಗರಗಳ ಪ್ರವೇಶ ಭಾಗದಲ್ಲಿ ಚೆಕ್‌ಪೋಸ್ಟ್‌ ತೆರೆಯಬೇಕು’ ಎಂದು ಹೇಳಿದರು.

‘ನಗರದ ಹೊರ ಭಾಗದಲ್ಲಿ ಮದ್ಯ ಸಂಗ್ರಹಿಸಿ ನಂತರ ಮತದಾನದ ಸಂದರ್ಭದಲ್ಲಿ ಹಂಚುವ ಸಾಧ್ಯತೆ ಇದೆ. ಈ ಬಗ್ಗೆ ಅಬಕಾರಿ ಇಲಾಖೆ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಹಣ ಅಥವಾ ಉಡುಗೊರೆ ಹಂಚಿಕೆ ಬಗ್ಗೆ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು ನಿಗಾ ಇಡಬೇಕು’ ಎಂದು ಸೂಚಿಸಿದರು.

‘ಪ್ರತಿ ನಗರಸಭೆಗೆ ತಲಾ ೩ ಮಾದರಿ ನೀತಿಸಂಹಿತೆ ತಂಡ ರಚಿಸಲಾಗಿದೆ. ಈ ತಂಡಗಳಲ್ಲಿನ ಸಿಬ್ಬಂದಿಯು ೩ ಪಾಳಿಯಲ್ಲಿ ದಿನದ 24 ತಾಸೂ ಕಾರ್ಯ ನಿರ್ವಹಿಸುತ್ತಾರೆ, ಅಭ್ಯರ್ಥಿಗಳು ಪೋಸ್ಟರ್, ಬ್ಯಾನರ್ ಹಾಕಲು ಅಥವಾ ಪ್ರಚಾರ ಸಾಮಗ್ರಿ ಹಂಚಲು ಅನುಮತಿ ಪಡೆಯಬೇಕು. ಪ್ರಚಾರ ಸಾಮಗ್ರಿಗಳ ಖರ್ಚನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು’ ಎಂದು ವಿವರಿಸಿದರು.

‘ಚುನಾವಣಾ ಅಧಿಕಾರಿಗಳು ಮತ್ತು ಸೆಕ್ಟರ್ ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶೌಚಾಲಯ, ಫ್ಯಾನ್‌, ಗಾಳಿ, ಬೆಳಕಿನ ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ಕ್ರಮ ವಹಿಸಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮತದಾರರಾಗಿರುವ ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗುವುದು’ ಎಂದರು.

ಚುನಾವಣಾ ಸಾಮಾನ್ಯ ವೀಕ್ಷಕರಾದ ಎಂ.ವಿ ಚಂದ್ರಕಾಂತ್, ಜಿ.ವಿ.ನಾಗರಾಜ್, ವೆಚ್ಚ ವೀಕ್ಷಕರಾದ ಎಂ.ವಿ.ಗುರುಬಸವೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಕೆಜಿಎಫ್ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಮಹಮ್ಮದ್‌ ಸುಜೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)