ಸೋಮವಾರ, ಸೆಪ್ಟೆಂಬರ್ 16, 2019
21 °C

₹ 2 ಸಾವಿರ ಕೋಟಿ ಠೇವಣಿ ಗುರಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

Published:
Updated:
Prajavani

ಕೋಲಾರ: ‘ಮುಂದಿನ ಎರಡು ವರ್ಷದಲ್ಲಿ ₹ 2 ಸಾವಿರ ಕೋಟಿ ಠೇವಣಿ ಸಂಗ್ರಹಣೆ ಮತ್ತು ವಹಿವಾಟು ವಿಸ್ತರಣೆ ಗುರಿಯಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನ ಹಣಕಾಸು ವ್ಯವಹಾರ ಸಂಬಂಧ ಇಲ್ಲಿ ಶುಕ್ರವಾರ ನಡೆದ ನಬಾರ್ಡ್ ಹಾಗೂ ಅಫೆಕ್ಸ್ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್‌ನ ವಿರುದ್ಧ 6 ವರ್ಷಗಳಲ್ಲಿ ಒಂದೇ ಒಂದು ಅವ್ಯವಹಾರದ ಪ್ರಕರಣ ದಾಖಲಾಗಿಲ್ಲ. ಇದು ಬ್ಯಾಂಕ್‌ನ ಹೆಮ್ಮೆ’ ಎಂದರು.

‘ಬ್ಯಾಂಕ್‌ನ ಠೇವಣಿ ಈಗ ₹ 300 ಕೋಟಿ ಇದ್ದು, ಈ ಪ್ರಮಾಣ ₹ 2 ಸಾವಿರ ಕೋಟಿಗೆ ತಲುಪಬೇಕು. ದಿವಾಳಿಯಾಗಿದ್ದ ಬ್ಯಾಂಕ್‌ ಉಳಿಸಿ ಜನರ ನಡುವೆ ಗೌರವದಿಂದ ಇರುವ ಶಕ್ತಿ ತುಂಬಿದ್ದೇವೆ. ಬ್ಯಾಂಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಕೆಲ ಕಳ್ಳೆತ್ತುಗಳಿವೆ. ಅವರನ್ನು ಸರಿ ದಾರಿಗೆ ತರುವ ಪ್ರಯತ್ನ ನಡೆದಿದ್ದು, ಎಲ್ಲವೂ ಸರಿ ಹೋಗಲಿದೆ’ ಎಂದು ಹೇಳಿದರು.

ಸಂತಸ ತಂದಿದೆ: ‘ಬ್ಯಾಂಕ್‌ನ ಆರ್ಥಿಕ ಬೆಳವಣಿಗೆ ಸಂತಸ ತಂದಿದೆ. ಸರಳ ಬಡ್ಡಿ ಠೇವಣಿ ಶೇ 85ರಷ್ಟು ಹೆಚ್ಚಳವಾಗಿದೆ. ಸಾಲ ವಸೂಲಾತಿಯಲ್ಲೂ ಶೇ 94ರಷ್ಟು ಸಾಧನೆಯಾಗಿದೆ. ಬ್ಯಾಂಕ್‌ನ ಅಪಾಯದ ಆಸ್ತಿಗಳ ಎದುರು ಸ್ವಂತ ಬಂಡವಾಳ (ಸಿಆರ್‍ಎಆರ್) ಪ್ರಮಾಣ ರಿಸರ್ವ್ ಬ್ಯಾಂಕ್ ನಿಯಮದಂತೆ ಶೇ 9 ಇರಬೇಕಿದ್ದು, ಅದು ಶೇ 11.06 ರಷ್ಟಿದೆ’ ಎಂದು ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ನಟರಾಜನ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಬ್ಯಾಂಕ್‌ನ ನಿಷ್ಕ್ರಿಯ ಆಸ್ತಿ ಮೌಲ್ಯ ಶೇ 5ಕ್ಕಿಂತ ಕಡಿಮೆ ಇರಬೇಕು. ಈ ಬ್ಯಾಂಕ್‌ನ ನಿಷ್ಕ್ರಿಯ ಆಸ್ತಿ ಮೌಲ್ಯ ಶೇ 3.2 ರಷ್ಟಿರುವುದು ಉತ್ತಮ ಬೆಳವಣಿಗೆ. ಮುಂದೆ ಎನ್‌ಪಿಎ ಪ್ರಮಾಣವನ್ನು ಶೇ 3ಕ್ಕಿಂತ ಕಡಿಮೆ ಮಾಡುವ ಗುರಿಯೊಂದಿಗೆ ಕೆಲಸ ಮಾಡಿ. ಷೇರು ಬಂಡವಾಳ ಹೆಚ್ಚಿಸಿ ಮತ್ತು ವಹಿವಾಟು ವೃದ್ಧಿಗೆ ಕ್ರಮ ವಹಿಸಿ’ ಎಂದು ಸಲಹೆ ನೀಡಿದರು.

ಎಫ್‌ಪಿಒ ಸ್ಥಾಪಿಸಿ: ‘ನಿವ್ವಳ ಮೌಲ್ಯ ₹ 95 ಕೋಟಿಯಿದ್ದು, ಬ್ಯಾಂಕ್‌ನ ಆರ್ಥಿಕ ಬೆಳವಣಿಗೆಯಲ್ಲಿ ಉತ್ತಮ ಸಾಧನೆ. ಇದರೊಂದಿಗೆ ಹಲವು ಋಣಾತ್ಮಕ ಅಂಶಗಳಿದ್ದು, ಇವುಗಳನ್ನು ಸರಿಪಡಿಸಲು ಶ್ರಮಿಸಿ. ಸೊಸೈಟಿಗಳು ಸಾಲ ನೀಡಿಕೆಗೆ ಸೀಮಿತವಾಗದೆ ವ್ಯಾಪಾರ ವಹಿವಾಟು ವೃದ್ಧಿಗೂ ಕ್ರಮ ವಹಿಸಬೇಕು. ರೈತರ ಉತ್ಪನ್ನಗಳಿಗೆ ಮಾರಾಟ ವ್ಯವಸ್ಥೆ ಕಲ್ಪಿಸುವ ರೈತ ಉತ್ಪಾದಕರ ಸಂಸ್ಥೆ (ಎಫ್‌ಪಿಒ) ಸ್ಥಾಪಿಸಿ. ಸಾವಿರ ರೈತರಿಂದ ಕೂಡಿದ ಘಟಕ ಸ್ಥಾಪಿಸಿ ಅದರಿಂದ ಲಾಭ ಗಳಿಸಬಹುದು’ ಎಂದು ಕಿವಿಮಾತು ಹೇಳಿದರು.

‘ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲಿರುವಂತೆ ಸೊಸೈಟಿಗಳಲ್ಲೂ ಕಾಗದರಹಿತ ಆಡಳಿತಕ್ಕೆ ಒತ್ತು ನೀಡಿ. ಬ್ಯಾಂಕ್‌ನ ವಹಿವಾಟು ವೆಚ್ಚ ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ. ಕೇವಲ ಕೆಸಿಸಿ ಮತ್ತು ಮಹಿಳಾ ಸಂಘಗಳಿಗೆ ನೀಡುವ ಸಾಲಕ್ಕೆ ಸೀಮಿತವಾಗದೆ ವಾಹನ, ಚಿನ್ನಾಭರಣ ಸಾಲ ನೀಡಿ’ ಎಂದು ಸೂಚಿಸಿದರು.

ತರಬೇತಿ ಅಗತ್ಯ: ‘ಕಿಸಾನ್ ಕ್ರೆಡಿಟ್ ಕಾರ್ಡ್ ಸಲಕರಣೆಯಲ್ಲ, ಅದೊಂದು ವ್ಯವಸ್ಥೆ. ಇದನ್ನು 29 ಸಾವಿರ ರೈತರಿಗೆ ನೀಡಿದ್ದೀರಿ, ಮತ್ತಷ್ಟು ರೈತರಿಗೆ ತಲುಪಿಸಲು ಕ್ರಮ ಕೈಗೊಳ್ಳಿ. ಮಹಿಳಾ ಸಂಘಗಳಿಗೆ ಸಾಲ ನೀಡಿಕೆಗೆ ಸ್ವಯಂ ಸೇವಾ ಸಂಘಗಳ ಸಹಕಾರ ಪಡೆಯಲು ಸೂಚಿಸಿದ. ಸಿಬ್ಬಂದಿಗೆ ಕಾಲಕಾಲಕ್ಕೆ ತರಬೇತಿ ಅಗತ್ಯ’ ಎಂದು ಅಫೆಕ್ಸ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಹೇಳಿದರು.

ಸಹಕಾರ ಸಂಘಗಳ ಲೆಕ್ಕಪತ್ರ ಪರಿಶೋಧನಾ ಉಪನಿಬಂಧಕ ನೀಲಪ್ಪನವರ್, ಸಹಕಾರ ಸಂಘಗಳ ಇಲಾಖೆ ಸಹಾಯಕ ನಿಬಂಧಕ ನಾಗರಾಜಗೌಡ ಹಾಜರಿದ್ದರು.

Post Comments (+)