ಬುಧವಾರ, ಆಗಸ್ಟ್ 4, 2021
27 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಹೇಳಿಕೆ

ಕಟ್ಟಡ ಕಾರ್ಮಿಕರಿಗೆ ₹ 800 ಕೋಟಿ ಪರಿಹಾರ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅಸಂಘಟಿತ ವಲಯದ 16 ಲಕ್ಷ ಮಂದಿ ಕಟ್ಟಡ ಕಾರ್ಮಿಕರಿಗೆ ಇಲಾಖೆಯಿಂದ ₹ 800 ಕೋಟಿಯನ್ನು ಪರಿಹಾರ ಧನವಾಗಿ ಪಾವತಿಸಲಾಗಿದೆ’ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್‌ ತಿಳಿಸಿದರು.

ಇಲ್ಲಿ ಸೋಮವಾರ ನಡೆದ ಕ್ಷೌರಿಕರು ಮತ್ತು ಅಗಸರ ಸಹಾಯಧನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಇಲಾಖೆ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ಫಲಾನುಭವಿಗಳಿಗೆ ತಲುಪಿಲ್ಲ. ಈ ಬಗ್ಗೆ ಸಾಕಷ್ಟು ದೂರು ಬಂದಿವೆ. ಬಡವರಿಗೆ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಇಚ್ಛಾಶಕ್ತಿಯಿರಬೇಕು’ ಎಂದು ಹೇಳಿದರು.

‘ಕ್ಷೌರಿಕ ಸಮುದಾಯದ 2.60 ಲಕ್ಷ ಮಂದಿ ಅಗಸ ಸಮುದಾಯದ 70 ಸಾವಿರ ಮಂದಿಗೆ ತಲಾ ₹ 5 ಸಾವಿರದಂತೆ ₹ 145 ಕೋಟಿ ಪರಿಹಾರಧನ ನೀಡುವ ಗುರಿಯಿದೆ. ರಾಜ್ಯದಲ್ಲಿ ಈವರೆಗೆ 56 ಸಾವಿರ ಅರ್ಜಿ ಮಾತ್ರ ಬಂದಿವೆ. ಆದ್ದರಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಜುಲೈ 10ರವರೆಗೆ ವಿಸ್ತರಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಈವರೆಗೆ 3,858 ಅರ್ಜಿ ಬಂದಿದ್ದು, ಈ ಪೈಕಿ 2,019 ಮಂದಿ ಕ್ಷೌರಿಕ ಸಮುದಾಯದವರು ಹೆಸರು ನೋಂದಾಯಿಸಿದ್ದಾರೆ. ಪಿಡಿಒಗಳು, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ನಗರಸಭೆ ಆಯುಕ್ತರು ಅರ್ಜಿಗಳನ್ನು ಶಿಫಾರಸು ಮಾಡಬೇಕು. ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಾರದೊಳಗೆ ಪರಿಶೀಲಿಸಿ ಪರಿಹಾರಧನ ಪಾವತಿಸಬೇಕು’ ಎಂದು ಸೂಚಿಸಿದರು.

‘ರಾಜ್ಯದ 22 ಲಕ್ಷ ಕಟ್ಟಡ ಕಾರ್ಮಿಕರಲ್ಲಿ 16 ಲಕ್ಷ ಮಂದಿಗೆ ಈಗಾಗಲೇ ಪರಿಹಾರ ಹಣ ಪಾವತಿಸಲಾಗಿದೆ. ಇದರಿಂದ ಕಾರ್ಮಿಕರ ಬದುಕಿಗೆ ಶಕ್ತಿ ದೊರೆತಿದೆ. ಗುರುತಿನ ಚೀಟಿ ನವೀಕರಣ ಆಗದೆ ಇರುವ ಕಟ್ಟಡ ಕಾರ್ಮಿಕರಿಗೂ ವಿಶೇಷ ಅನುಮತಿ ಪಡೆದು ಹಣ ಪಾವತಿಸಲಾಗಿದೆ’ ಎಂದು ವಿವರಿಸಿದರು.

ಇಎಸ್‌ಐ ಆಸ್ಪತ್ರೆ: ‘ಕೆಜಿಎಫ್‌ನ ಇಎಸ್ಐ ಆಸ್ಪತ್ರೆಗೆ ಇಬ್ಬರು ವೈದ್ಯರ ಅಗತ್ಯವಿದ್ದು, ವಾರದೊಳಗೆ ನೇಮಕ ಮಾಡುತ್ತೇವೆ. ರಾಜ್ಯದ ಎಲ್ಲಾ ಇಎಸ್‌ಐ ಆಸ್ಪತ್ರೆಗಳಿಗೆ ವೈದ್ಯರ ಅವಶ್ಯಕತೆಯಿದ್ದು, ಇತ್ತೀಚೆಗೆ 149 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳು ಹಾಗೂ ಕಾರ್ಮಿಕರು ಸಂಖ್ಯೆ ಹೆಚ್ಚಿರುವ ಕಾರಣ ಜಿಲ್ಲಾ ಕೇಂದ್ರದಲ್ಲೇ ಇಎಸ್ಐ ಆಸ್ಪತ್ರೆ ಸ್ಥಾಪಿಸುತ್ತೇವೆ’ ಎಂದು ಭರವಸೆ ನೀಡಿದರು.

ಕಲಾವಿದರಿಗೆ ಸಹಾಯಧನ: ‘ಜಿಲ್ಲೆಯಲ್ಲಿ ಸುಮಾರು 2 ಸಾವಿರ ಮಂದಿ ಕಲಾವಿದರಿದ್ದಾರೆ. ಜನಪದ ಮತ್ತು ರಂಗಭೂಮಿ ಕಲಾವಿದರಿಗೆ ಕೋವಿಡ್-19 ಹಿನ್ನೆಲೆಯಲ್ಲಿ ಮೂರ್ನಾಲ್ಕು ತಿಂಗಳಿಂದ ಆದಾಯ ಇಲ್ಲವಾಗಿದೆ. ಈ ಕಲಾವಿದರಿಗೆ ಸಹಾಯಧನ ನೀಡಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಸಚಿವರಿಗೆ ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಸ್ಥಾಪಿಸಿ ಮಹಿಳೆಯರಿಗೆ ಕೆಲಸ ಕೊಡಬೇಕು. ಮುಖ್ಯವಾಗಿ ಸಿದ್ಧ ಉಡುಪು ಕಾರ್ಖಾನೆಗಳನ್ನು ಸ್ಥಾಪಿಸಿದರೆ ಸುಮಾರು 4 ಸಾವಿರ ಮಹಿಳೆಯರಿಗೆ ಉದ್ಯೋಗಾವಕಾಶ ಸಿಗುತ್ತದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯರಾದ ನಸೀರ್ ಅಹಮ್ಮದ್‌, ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಮಹಮ್ಮದ್‌ ಸುಜಿತಾ, ಉಪ ವಿಭಾಗಾಧಿಕಾರಿ ಸೋಮಶೇಖರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು