ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಲ್ಲಿ ₹ 1.5 ಕೋಟಿ ಸಂಗ್ರಹ

ಆಸ್ತಿ ತೆರಿಗೆ ವಸೂಲಿ: ಚುರುಕುಗೊಳಿಸಲು ನಗರಸಭೆ ಕಸರತ್ತು
Last Updated 23 ಜೂನ್ 2022, 4:16 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ಪರಿಸ್ಥಿತಿ ಬಳಿಕ ಆಸ್ತಿ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಕಾಣಿಸುತ್ತಿದ್ದು, ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಮೂರು ತಿಂಗಳಲ್ಲಿ ₹ 1.5 ಕೋಟಿ ಕರ ಸಂಗ್ರಹವಾಗಿದೆ. ನಿಗದಿತ ಗುರಿ ತಲುಪಲು ಕಂದಾಯ ವಸೂಲಿ ಸಿಬ್ಬಂದಿ ಹಲವು ಕಸರತ್ತು ನಡೆಸಿದ್ದಾರೆ.

2022–23ನೇ ಸಾಲಿನಲ್ಲಿ ₹ 7.23 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ನಗರಸಭೆ ಹೊಂದಿದೆ. ಏಪ್ರಿಲ್‌ ತಿಂಗಳಿನಲ್ಲಿ ಶೇ 5 ರಿಯಾಯಿತಿ ಇದ್ದ ಕಾರಣ ಹೆಚ್ಚಿನವರು ಕರ ಪಾವತಿಸಿದ್ದಾರೆ. ಮೇ ತಿಂಗಳ ಅಂತ್ಯದವರೆಗೆ ಯಾವುದೇ ದಂಡ ಇರಲಿಲ್ಲ. ವಿಳಂಬದ ಅವಧಿಗೆ ಜೂನ್‌ 1ರಿಂದ ಮಾಸಿಕ ಶೇ 2ರಷ್ಟು ದಂಡ ವಿಧಿಸಲಾಗುತ್ತಿದೆ.

‘ಈ ಸಾಲಿನಲ್ಲಿ ಈ ವರೆಗೆ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಕಾಣಿಸಿದೆ. ಕರ ಸಂಗ್ರಹ ವಿಚಾರ ವಾಗಿಹಲವು ಕಾರ್ಯಕ್ರಮ ಹಮ್ಮಿಕೊಂಡಿ ದ್ದೇವೆ. ಕಳೆದ ಎರಡು ವರ್ಷ ಕೋವಿಡ್‌ ಕಾರಣ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಿ ಆಗಿರಲಿಲ್ಲ’ ಎಂದು ನಗರಸಭೆ ಪೌರಾ ಯುಕ್ತ ಎಸ್‌. ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲಾ ವಾರ್ಡ್‌ಗಳಲ್ಲಿ ಶಿಬಿರ ಆಯೋಜನೆ ಮೂಲಕ ಮನೆ ಮನೆಗೆ ತೆರಳಿ ಆಸ್ತಿ ವಸೂಲಿಗೆ ಕ್ರಮ ವಹಿಸಿದ್ದೇವೆ. ತೆರಿಗೆ ಮೊತ್ತದ ಚಲನ್‌ ಕೊಟ್ಟು ಬರುತ್ತಿದ್ದೇವೆ. ಬೇಗನೇ ಪಾವತಿ ಮಾಡುವಂತೆ ಆಟೊ ಮೂಲಕ ಮೈಕ್‌ನಲ್ಲಿ ಪ್ರಚಾರ ಮಾಡಲಾಗುತ್ತಿದೆ’ ಎಂದರು.

‘ಆಸ್ತಿ ತೆರಿಗೆಯಿಂದಲೇ ನಗರ ಸಭೆಯ ಹಲವು ಕೆಲಸಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಪೌರಕಾರ್ಮಿಕ ವೇತನಕ್ಕೂ ಈ ಹಣವನ್ನೇ ಬಳಸಲಾಗುತ್ತಿದೆ. ಬೋರ್‌ವೆಲ್‌ ನಿರ್ವಹಣೆ, ಕುಡಿಯುವ ನೀರಿನ ಟ್ಯಾಂಕರ್ ಹಾಗೂ ಇತರೆ ವಾಹನಗಳ ಚಾಲಕರ ವೇತನ ಹಾಗೂ ಡೀಸೆಲ್‌ ವೆಚ್ಚ ಭರಿಸಲಾಗುತ್ತಿದೆ. ಬೀದಿದೀಪಗಳ ನಿರ್ವಹಣೆ, ವಾರ್ಷಿಕ ನಿರ್ವಹಣೆಗೆ ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

2021–22ನೇ ಸಾಲಿನಲ್ಲಿ ₹ 6 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಅದರಲ್ಲಿ ಶೇ 90ರಷ್ಟು ವಸೂಲಿ ಆಗಿದೆ.ಹಿಂದಿನ ವರ್ಷಗಳ ತೆರಿಗೆಯೂ ಬಾಕಿ ಇದೆ.

‘ತೆರಿಗೆ ಸಂಗ್ರಹದಲ್ಲಿ ಈ ಬಾರಿ ನಿಗದಿತ ಗುರಿ ತಲುಪುವ ವಿಶ್ವಾಸವಿದೆ. ನಗರದ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಈ ಸಾಲಿನ ಆಸ್ತಿ ತೆರಿಗೆ ಹಾಗೂ ಹಿಂದಿನ ವರ್ಷಗಳ ಬಾಕಿ ಉಳಿಸಿಕೊಂಡವರು ಬೇಗನೇ ಪಾವತಿಸುವಂತೆ ಮನವಿ ಮಾಡುತ್ತೇನೆ’ ಎಂದರು.

ಆಸ್ತಿ ತೆರಿಗೆ ಅಲ್ಲದೇ; ನಗರಸಭೆಯ ಮಳಿಗೆಗಳ ಬಾಡಿಗೆಯಿಂದ ₹ 64.15 ಲಕ್ಷ, ನೀರು ಬಳಕೆದಾರರ ಶುಲ್ಕದಿಂದ ₹ 98.18 ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ ₹ 50 ಲಕ್ಷ, ಘನ ತ್ಯಾಜ್ಯ ನಿರ್ವಹಣೆ ಶುಲ್ಕದಿಂದ ₹ 55 ಲಕ್ಷ, ಜಾಹೀರಾತು ತೆರಿಗೆಯಿಂದ ₹ 7.68 ಲಕ್ಷ ಆದಾಯವನ್ನು ನಗರಸಭೆ ನಿರೀಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT