ಗುರುವಾರ , ನವೆಂಬರ್ 21, 2019
20 °C
ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

₹ 1 ಸಾವಿರ ಕೋಟಿ ಸಾಲ ಗುರಿ

Published:
Updated:
Prajavani

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ರೈತರು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ₹ 1 ಸಾವಿರ ಕೋಟಿ ಸಾಲ ನೀಡುವ ಗುರಿಯಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಇಲ್ಲಿ ಗುರುವಾರ ನಡೆದ ಡಿಸಿಸಿ ಬ್ಯಾಂಕ್‌ನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಸಾಲಕ್ಕೆ ನಬಾರ್ಡ್‌ನಿಂದ ₹ 70 ಕೋಟಿ ಮತ್ತು ಅಫೆಕ್ಸ್‌ ಬ್ಯಾಂಕ್‌ನಿಂದ ₹ 14 ಕೋಟಿ ಹಣಕಾಸು ನೆರವು ಸಿಕ್ಕಿದ್ದು, ಉಳಿದ ಸಾಲದ ಮೊತ್ತವನ್ನು ಡಿಸಿಸಿ ಬ್ಯಾಂಕ್ ಭರಿಸಲಿದೆ’ ಎಂದರು.

‘6 ವರ್ಷದ ಹಿಂದೆ ₹ 34.90 ಲಕ್ಷ ನಷ್ಟದಲ್ಲಿದ್ದ ಬ್ಯಾಂಕ್‌ ಈಗ ₹ 42.90 ಲಕ್ಷ ಲಾಭ ಗಳಿಸಿದೆ. ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಬ್ಯಾಂಕ್‌ನಲ್ಲಿ ₹ 326 ಕೋಟಿ ಸಾಲ ಮನ್ನಾ ಆಗಿದೆ. ಬ್ಯಾಂಕ್‌ ವ್ಯಾಪ್ತಿಯಲ್ಲಿ 200 ಸೊಸೈಟಿಗಳಿದ್ದು, ತಲಾ ₹ 1 ಕೋಟಿ ಠೇವಣಿ ಸಂಗ್ರಹಿಸಿದರೆ ₹ 1 ಸಾವಿರ ಕೋಟಿವರೆಗೆ ಸಾಲ ನೀಡಬಹುದು’ ಎಂದು ಹೇಳಿದರು.

‘ಜನರು ಡಿಸಿಸಿ ಬ್ಯಾಂಕ್‌ನಲ್ಲಿ ಬಡ್ಡಿರಹಿತ ಸಾಲ ಪಡೆದು ಆ ಹಣವನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಿರುವುದು ವಿಷಾದಕರ. ಎಲ್ಲರೂ ಸಹಕಾರ ನೀಡಿದರೆ ಮಾತ್ರ ಬ್ಯಾಂಕ್ ಉಳಿಯುತ್ತದೆ’ ಎಂದು ಕಿವಿಮಾತು ಹೇಳಿದರು.

ಸಾಲ ಮನ್ನಾ ಮಾಡಲಿಲ್ಲ: ‘ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಮುಖ್ಯಮಂತ್ರಿಗಳು ಸಾಲ ಮನ್ನಾ ಮಾಡಲಿಲ್ಲ. ಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ. ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಬ್ಯಾಂಕ್‌ನ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಆಡಳಿತ ಮಂಡಳಿ ಬದಲಾವಣೆಯಾದಾಗ ಸಣ್ಣ ಪುಟ್ಟ ಗೊಂದಲ, ಲೋಪ ಸಹಜ. ಕಾಲಕ್ರಮೇಣ ಎಲ್ಲಾ ಗೊಂದಲ ನಿವಾರಿಸುತ್ತವೆ’ ಎಂದು ಭರವಸೆ ನೀಡಿದರು.

ಬೆಳೆ ಸಾಲ ಕೊಡಿ: ‘ಚಿಂತಾಮಣಿ ಬ್ಯಾಂಕ್‌ನಲ್ಲಿ ಅಡಮಾನವಿಲ್ಲದೆ ಸಾಲ ನೀಡುತ್ತಿಲ್ಲ. ಅಧಿಕಾರಿಗಳು ಸಾಲ ನೀಡಲು ರೈತರನ್ನು ಅಲೆಸುತ್ತಿದ್ದಾರೆ. ಆದರೆ, ಸ್ತ್ರೀಶಕ್ತಿ ಸಂಘಗಳಿಗೆ ಬೇಗ ಸಾಲ ಮಂಜೂರು ಮಾಡುತ್ತಾರೆ. ರೈತರಿಗೆ ಶೀಘ್ರವಾಗಿ ಬೆಳೆ ಸಾಲ ಕೊಡಬೇಕು’ ಎಂದು ಚಿಂತಾಮಣಿ ತಾಲ್ಲೂಕಿನ ಕೈವಾರ ಸೊಸೈಟಿ ಸದಸ್ಯ ಶ್ರೀರಾಮರೆಡ್ಡಿ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಸೋಮಣ್ಣ, ಎಂ.ಎಲ್‌.ಅನಿಲ್‌ಕುಮಾರ್, ನೀಲಕಂಠೇಗೌಡ, ಹನುಮಂತರೆಡ್ಡಿ, ನಾರಾಯಣರೆಡ್ಡಿ, ನರಸಂಹರೆಡ್ಡಿ, ಗೋವಿಂದರಾಜು, ಚನ್ನರಾಯಪ್ಪ, ಸೊಣ್ಣೇಗೌಡ, ಬಿ.ವಿ.ವೆಂಕಟರೆಡ್ಡಿ, ನಾಗಿಗೆಡ್ಡಿ, ವೇದಾ, ವೆಂಕಟಶಿವಾರೆಡ್ಡಿ, ಕೆ.ಎಸ್.ದ್ಯಾವಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)