ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲಿನ ಎನ್‌ ಚಮಕಲಹಳ್ಳಿಯಲ್ಲಿ 15 ದಿನಗಳಲ್ಲಿ 11 ಮಂದಿ ಸಾವು: ತೀವ್ರ ಆತಂಕ

ಎನ್‌.ಚಮಕಲಹಳ್ಳಿಯಲ್ಲಿ ಘಟನೆ: ಗ್ರಾಮಸ್ಥರಲ್ಲಿ ಆತಂಕ
Last Updated 19 ನವೆಂಬರ್ 2019, 13:56 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎನ್‌.ಚಮಕಲಹಳ್ಳಿ ಗ್ರಾಮದಲ್ಲಿ 15 ದಿನಗಳಲ್ಲಿ 11 ಮಂದಿಯ ಸರಣಿ ಸಾವು ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮದ ಖಾದರ್‌ ಸಾಬ್‌ (45), ನಿಸಾರ್‌ (30), ಮೆಹಬೂಬ್‌ (60), ಷಾಹಿದಾ (18), ಅಕ್ಬರ್‌ ಬೇಗ್‌ (45), ಹೈದರ್‌ (40), ಮಂಜುನಾಥ್‌ (28), ಷೇಖ್‌ ಖಾದರ್‌ (35), ಷಾಫಿಯಾ (8), ಅಮಿನಾ ಬಾನು (65) ಹಾಗೂ ಫಯಾಜ್‌ (40) ಎಂಬುವರು 15 ದಿನದಲ್ಲಿ ಮೃತಪಟ್ಟಿದ್ದಾರೆ.

ಜಿಲ್ಲೆಯ ಗಡಿ ಭಾಗದ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್‌.ಚಮಕಲಹಳ್ಳಿಯಲ್ಲಿ 350 ಮನೆ ಹಾಗೂ 1,500 ಜನಸಂಖ್ಯೆಯಿದೆ. ಗ್ರಾಮದ ಮನೆಗಳಿಗೆ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತಿದ್ದು, ಈ ನೀರಿಗೆ ಚರಂಡಿಯ ಕೊಳಚೆ ನೀರು ಬೆರೆತಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮದ ಚರಂಡಿಗಳನ್ನು ಏಳೆಂಟು ತಿಂಗಳಿಂದ ಸ್ವಚ್ಛಗೊಳಿಸದ ಕಾರಣ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಕಲುಷಿತ ನೀರಿನ ಸೇವನೆ, ಸೊಳ್ಳೆ ಕಡಿತ ಮತ್ತು ನೈರ್ಮಲ್ಯ ಸಮಸ್ಯೆಯಿಂದಾಗಿ ಗ್ರಾಮದ ಸಾಕಷ್ಟು ಮಂದಿ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳು, ವಯೋವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರಲ್ಲೂ ಚಳಿ, ಜ್ವರ, ಶೀತ, ಹೊಟ್ಟೆ ನೋವಿನ ಲಕ್ಷಣ ಕಾಣಿಸಿಕೊಂಡಿದ್ದು, ಸಾವಿನ ಸರಣಿ ಮುಂದುವರಿದಿದೆ.

ಬೇಜವಾಬ್ದಾರಿ: ‘ಗ್ರಾಮದಲ್ಲಿ ಸ್ವಚ್ಛತೆಯಿಲ್ಲ ಮತ್ತು ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ನೀರಿನ ಸಂಪರ್ಕದ ಪೈಪ್‌ಲೈನ್ ಹಾಳಾಗಿದ್ದು, ಕುಡಿಯುವ ನೀರಿನ ಜತೆ ಚರಂಡಿ ನೀರು ಸೇರುತ್ತಿದೆ. ಗ್ರಾಮದ ಸಾಕಷ್ಟು ಮಂದಿ ಒಂದೂವರೆ ತಿಂಗಳಿನಿಂದ ಚಳಿ, ಜ್ವರ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಆದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿಲ್ಲ’ ಎಂದು ಗ್ರಾಮಸ್ಥ ಇನಾಯತ್‌ ಉಲ್ಲಾ ದೂರಿದರು.

‘ಗ್ರಾಮದ ಜನರ ಸಾವಿಗೆ ಆರೋಗ್ಯ ಇಲಾಖೆ ಬೇಜವಾಬ್ದಾರಿಯೇ ಕಾರಣ. ವೈದ್ಯರು ಸಕಾಲಕ್ಕೆ ಜನರ ಆರೋಗ್ಯ ಸಮಸ್ಯೆಗೆ ಸ್ಪಂದಿಸಲಿಲ್ಲ. 11 ಮಂದಿ ಮೃತಪಟ್ಟ ನಂತರ ಗ್ರಾಮಕ್ಕೆ ಬಂದು ಆರೋಗ್ಯ ಶಿಬಿರ ನಡೆಸಿದ್ದಾರೆ’ ಎಂದು ಗ್ರಾಮಸ್ಥ ಬದ್ರಿನಾರಾಯಣ್‌ ಆರೋಪಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT