ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 12 ಮಂದಿಗೆ ಸೋಂಕು

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸ್ಫೋಟ
Last Updated 1 ಜುಲೈ 2020, 17:34 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಬುಧವಾರ ಕೊರೊನಾ ಸೋಂಕಿನ ಸ್ಫೋಟವಾಗಿದ್ದು, ಒಂದೇ ದಿನ 12 ಮಂದಿಗೆ ಸೋಂಕು ತಗುಲಿದೆ.

ಕೋಲಾರ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, 6 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ ಬಡಾವಣೆಯಲ್ಲಿ ತಾಯಿ ಮತ್ತು ಮಗಳಿಗೆ ಸೋಂಕು ಹರಡಿದೆ. ಈ ಇಬ್ಬರು ನಗರದ ದರ್ಗಾ ಮೊಹಲ್ಲಾದ ಸೋಂಕಿತ ವ್ಯಕ್ತಿಯ ಸಂಬಂಧಿಕರು.

ದರ್ಗಾ ಮೊಹಲ್ಲಾದ 62 ವರ್ಷದ ಸೋಂಕಿತ ವ್ಯಕ್ತಿಯು ಜೂನ್ 26ರಂದು ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಶವದಿಂದ ಕಫಾ ಮಾದರಿ ಸಂಗ್ರಹಿಸಿ ಪರೀಕ್ಷಿಸಿದಾಗ ಸೋಂಕು ಇರುವುದು ಗೊತ್ತಾಗಿತ್ತು. ಆದರೆ, ಆ ವೇಳೆಗಾಗಲೇ ಆಸ್ಪತ್ರೆ ಸಿಬ್ಬಂದಿಯು ಕುಟುಂಬ ಸದಸ್ಯರಿಗೆ ಶವ ಹಸ್ತಾಂತರಿಸಿದ್ದರು. ಮಹಾಲಕ್ಷ್ಮಿ ಲೇಔಟ್‌ನ ಸೋಂಕಿತ ತಾಯಿ ಮತ್ತು ಮಗಳು ಈ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.

ಪೇಟೆಚಾಮನಹಳ್ಳಿಯ 49 ವರ್ಷದ ಪುರುಷರೊಬ್ಬರಿಗೆ ಸೋಂಕು ಹರಡಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಇವರು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಹೋಗಿ ಬಂದಿದ್ದರು. ಎಸ್‌ಎನ್‌ಆರ್‌ ಆಸ್ಪತ್ರೆ ಆವರಣದಲ್ಲಿನ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಕಂಪ್ಯೂಟರ್‌ ಆಪರೇಟರ್‌ ಒಬ್ಬರಿಗೆ ಸೋಂಕು ತಗುಲಿದೆ. ಇವರು ಕಾರಂಜಿಕಟ್ಟೆ ಬಡಾವಣೆಯಲ್ಲಿ ವಾಸವಿದ್ದಾರೆ.

ಕೋಲಾರದ ಕ್ಲಾಕ್‌ಟವರ್‌ ಬಳಿಯ ಎಸ್‌.ಎಸ್‌.ಮಖಾನ್‌ ಬಡಾವಣೆಯ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ಗೊತ್ತಾಗಿದೆ. ಇವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೋಲಾರ ತಾಲ್ಲೂಕಿನ ಕೂತಂಡಹಳ್ಳಿಯ 19 ವರ್ಷದ ಯುವತಿಗೆ ಸೋಂಕು ತಗುಲಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಕ್ಷಯ ರೋಗಿಗಳಿಗೆ ಸೋಂಕು: ಮುಳಬಾಗಿಲು ನಗರದ ರಹಮತ್‌ನಗರ ಬಡಾವಣೆಯಲ್ಲಿ ಪುರುಷ ಹಾಗೂ ಮಹಿಳೆ ಸೇರಿದಂತೆ ಇಬ್ಬರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ಈ ಪೈಕಿ ಮಹಿಳೆಯು ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಇದೇ ರೀತಿ ಮುಳಬಾಗಿಲಿನ ದರ್ಗಾ ಮೊಹಲ್ಲಾದ ಕ್ಷಯ ರೋಗಿಯೊಬ್ಬರಿಗೆ ಸೋಂಕು ತಗುಲಿದೆ. ಮುಳಬಾಗಿಲು ತಾಲ್ಲೂಕಿನ ನಾಗಮಂಗಲ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಬಾಲಕಿಗೆ ಸೋಂಕು: ಶ್ರೀನಿವಾಸಪುರ ಪಟ್ಟಣದ ಜಾಕೀರ್‌ ಹುಸೇನ್‌ ಬಡಾವಣೆಯಲ್ಲಿನ 11 ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಬಾಲಕಿ ಮತ್ತು ಆಕೆಯ ಪೋಷಕರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಬಂಧಿಕರ ಮದುವೆಗೆ ಹೋಗಿ ಬಂದಿದ್ದರು. ನಂತರ ಬಾಲಕಿಗೆ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಪೋಷಕರು ಬಾಲಕಿಯನ್ನು ಶ್ರೀನಿವಾಸಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಿದಾಗ ಸೋಂಕು ಇರುವುದು ಗೊತ್ತಾಗಿದೆ.

ಬಂಗಾರಪೇಟೆ ತಾಲ್ಲೂಕಿನ ಚಿಕ್ಕ ಅಂಕಂಡಹಳ್ಳಿ ಗ್ರಾಮದ ಗರ್ಭಿಣಿಗೆ ಸೋಂಕು ತಗುಲಿದ್ದು, ಕುಟುಂಬ ಸದಸ್ಯರು ಆತಂಕಗೊಂಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯು ಸೋಂಕಿತರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಿದ್ದಾರೆ. ಸೋಂಕಿತರನ್ನು ಜಿಲ್ಲಾ ಕೇಂದ್ರದ ಜಾಲಪ್ಪ ಆಸ್ಪತ್ರೆ ಹಾಗೂ ಎಸ್‌ಎನ್‌ಆರ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT