ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ಕ್ಕೆ ವಿಜಯಲಕ್ಷ್ಯ ವಿಶಿಷ್ಟ ಕಾರ್ಯಕ್ರಮ

ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ ಹೇಳಿಕೆ
Last Updated 9 ಫೆಬ್ರುವರಿ 2019, 14:15 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭೆ ಚುನಾವಣೆ ದಿಕ್ಸೂಚಿಯಾಗಿ ಪಕ್ಷದಿಂದ ನಗರದ ಮಿನಿ ಕ್ರೀಡಾಂಗಣದಲ್ಲಿ ಫೆ.12ರಂದು ವಿಜಯಲಕ್ಷ್ಯ ಎಂಬ 14 ಅಂಶಗಳ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವ ಮೂಲಕ ಜಾಗತಿಕವಾಗಿ ದೇಶದ ಘನತೆ ಹೆಚ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ಮಾಡುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.

‘ಸ್ವಾತಂತ್ರ್ಯ ಬಂದು 7 ದಶಕವಾದರೂ ದೇಶದಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಹಳ್ಳಿಗಳಲ್ಲಿ ಬೆಳಕು ತರಲು ಸಾಧ್ಯವಾಗಿರಲಿಲ್ಲ. ಆದರೆ, ಮೋದಿ ಆಡಳಿತದಲ್ಲಿ 18 ಸಾವಿರ ಕಗ್ಗತ್ತಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ’ ಎಂದರು.

‘ಮೋದಿಯವರು ಹಲವು ಅಭಿವೃದ್ಧಿ ಯೋಜನೆ ಜಾರಿಗೊಳಿಸುವ ಮೂಲಕ ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ 6ನೇ ಸ್ಥಾನಕ್ಕೇರುವಂತೆ ಮಾಡಿದ್ದಾರೆ. ಅವರ ವಿಶೇಷ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಯುವ ಜನರ ವಿಶೇಷ ತಂಡಗಳ ಸದಸ್ಯರು ಸ್ವಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಬಂಧ, ಕವಿತೆ, ಬೀದಿ ನಾಟಕ, ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆ ಮೂಲಕ ಮೋದಿ ಸಾಧನೆಗಳನ್ನು ಪ್ರಚುರಪಡಿಸುತ್ತಿದ್ದಾರೆ’ ಎಂದು ವಿವರಿಸಿದರು.

ಸಾಧನೆ ಶೂನ್ಯ: ‘ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 7 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ ಅವರ ಸಾಧನೆ ಶೂನ್ಯ. ಈವರೆಗೂ ವಿರೋಧ ಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಂತ್ರಗಾರಿಕೆಯಿಂದ ಗೆಲುತ್ತಿದ್ದ ಮುನಿಯಪ್ಪ ಅವರ ಕಪಟ ನಾಟಕಕ್ಕೆ ತೆರೆ ಎಳೆಯಲು ಜನ ಸಿದ್ಧರಾಗಿದ್ದು, ಚುನಾವಣೆ ಬಳಿಕ ಅವರು ಕ್ಷೇತ್ರ ಖಾಲಿ ಮಾಡುವುದು ನಿಶ್ಚಿತ’ ಎಂದು ವ್ಯಂಗ್ಯವಾಡಿದರು.

‘ರಾಜ್ಯದ 24 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿಯಿದೆ. ಈ ಪೈಕಿ ಕೋಲಾರ ಕ್ಷೇತ್ರವೂ ಸೇರಿದೆ. ಈಗಾಗಲೇ ಮುನಿಯಪ್ಪ ವಿರುದ್ಧ ಎದ್ದಿರುವ ಅಲೆ ಮತ್ತು ಮೋದಿ ಪರವಾದ ಅಲೆಯು ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ. ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ’ ಎಂದು ವಿವರಿಸಿದರು.

ಕೇಂದ್ರ ಬಿಂದು: ‘ಪಕ್ಷದ ಹೆಗ್ಗುರುತು ಸಂಸದ ಪ್ರತಾಪ್ ಸಿಂಹ ವಿಜಯಲಕ್ಷ್ಯ ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಲಿದ್ದಾರೆ. ಅವರೊಂದಿಗೆ ವಿಜಯೇಂದ್ರ ಮತ್ತು ರವೀಂದ್ರ, ಅರವಿಂದ ಲಿಂಬಾವಳಿ ಪಾಲ್ಗೊಳ್ಳುತ್ತಾರೆ. ಪ್ರತಿ ಬೂತ್‌ಗೆ ನಿಯೋಜಿತರಾಗಿರುವ 5 ಮಂದಿಯಂತೆ ಸುಮಾರು 5 ಸಾವಿರ ಮಂದಿ ಭಾಗವಹಿಸುತ್ತಾರೆ’ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಎನ್.ಶಿವಕುಮಾರ್ ಮಾಹಿತಿ ನೀಡಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಸಿ.ಡಿ.ರಾಮಚಂದ್ರ, ರಾಮಾಂಜಿ, ಶ್ರೀನಾಥ್, ಸುರೇಶ್, ಮೋಹನ್, ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT