ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ನಗರಸಭೆ ಸಿಬ್ಬಂದಿ ವಿರುದ್ಧ ಸರ್ಕಾರಕ್ಕೆ ವರದಿ

ಎಸಿಬಿಯಿಂದ ಅಹವಾಲು ಸ್ವೀಕಾರ
Last Updated 1 ಏಪ್ರಿಲ್ 2021, 7:40 IST
ಅಕ್ಷರ ಗಾತ್ರ

ಕೆಜಿಎಫ್‌: ರಾಬರ್ಟಸನ್‌ಪೇಟೆ ನಗರಸಭೆ ಮೇಲೆ ಈಚೆಗೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ಮಾಡಿದ ಸಂದರ್ಭದಲ್ಲಿ ನಗದು ಸಿಕ್ಕಿದ್ದು, ಈ ಸಂಬಂಧ ಹದಿನಾಲ್ಕು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಲಾಗಿದೆ ಎಂದು ಎಸಿಬಿ ಕೇಂದ್ರ ವಲಯದ ಎಸ್‌ಪಿ ಕಲಾಕೃಷ್ಣಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರಸಭೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು. ನಗರಸಭೆ ಪೌರಾಯುಕ್ತೆ ಸೇರಿದಂತೆ ಹಲವರ ಬಳಿ ಅನಧಿಕೃತ ಹಣ ಸಿಕ್ಕಿದ ಬಗ್ಗೆ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಹಣದ ಮೂಲ ತಿಳಿಸುವಂತೆ ಕೋರಲಾಗಿದೆ. ನಗರಸಭೆ ಮೇಲೆ ಕರ್ತವ್ಯಲೋಪದ ಬಗ್ಗೆ ದಾಳಿ ನಡೆದಿದೆ. ಅಲ್ಲಿ ಯಾರನ್ನೂ ಟ್ರಾಪ್‌ ಮಾಡಿಲ್ಲ. ಆದ್ದರಿಂದ ಯಾವುದೇ ಸಿಬ್ಬಂದಿಯನ್ನು ಬಂಧಿಸುವ ಪ್ರಮೇಯ ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.

ಎಸಿಬಿ ಕಾರ್ಯ ಜನರಿಗೆ ತಲುಪಬೇಕು. ಸರ್ಕಾರಿ ಕೆಲಸ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ತೊಂದರೆ ಇದ್ದಲ್ಲಿ ದೂರು ಕೊಡಬೇಕು. ಆಗ ಅಧಿಕಾರಿಗಳಿಗೂ ಭಯ ಬರುತ್ತದೆ. ದೂರಿನ ಹಿನ್ನೆಲೆಯಲ್ಲಿ ಸಂಸ್ಥೆ ದಾಳಿ ನಡೆಸುತ್ತದೆ. ಈ ರೀತಿ ಆದಾಗ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಂಚಕ್ಕಾಗಿ ಪೀಡಿಸುವುದು ತಪ್ಪುತ್ತದೆ. ಸಾರ್ವಜನಿಕರು ಕೂಡ ಲಂಚ ನೀಡದೆ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಇಚ್ಛೆ ಹೊಂದಬೇಕು ಎಂದು ಹೇಳಿದರು.

ಡಿವೈಎಸ್‌ಪಿ ಎಂ.ಎಲ್‌. ಪುರುಷೋತ್ತಮ ಮಾತನಾಡಿ, ನಗರಸಭೆಯಲ್ಲಿ ಖಾತೆ ಮಾಡಿಸಲು ಒಂದು ವರ್ಷ ಸತಾಯಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಅನೇಕ ಅಕ್ರಮಗಳ ದೂರುಗಳು ಬಂದಿದ್ದರಿಂದ ದಾಳಿ ನಡೆಸಬೇಕಾಯಿತು. ಸಾರ್ವಜನಿಕರು ದೂರು ನೀಡಿದರೆ ಎಷ್ಟೇ ದೊಡ್ಡ ಅಧಿಕಾರಿಯಾದರೂ ದಾಳಿ ಮಾಡುತ್ತೇವೆ. ಕೋಲಾರದ ಹಿರಿಯ ಭೂ ವಿಜ್ಞಾನಿಯನ್ನು ಟ್ರಾಪ್‌ ಮಾಡಲು ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆವಿಗೂ ಕಾದು ಕುಳಿತಿದ್ದೆವು. ಅದೇ ರೀತಿ ತಮ್ಮ ಆದಾಯಕ್ಕೂ ಮಿತಿ ಮೀರಿದ ಆಸ್ತಿ ಸಂಪಾದಿಸಿದ ಜಿಲ್ಲೆಯ ಆರೋಗ್ಯಾಧಿಕಾರಿ ಮೇಲೆ ಕೂಡ ದಾಳಿ ಮಾಡಿದ್ದು, ಎಸಿಬಿಯ ಕರ್ತವ್ಯಪ್ರಜ್ಞೆಗೆ ಸಾಕ್ಷಿ ಎಂದರು.

ಡಿಕೆ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ವಿ. ನಗರದಲ್ಲಿ ಆಟದ ಮೈದಾನವನ್ನು ಸರ್ಕಾರಿ ಕಚೇರಿಯ ಕಾನೂನು ಸಲಹೆಗಾರ್ತಿ ಪ್ರೇಮಲತಾ ಎಂಬುವರು ಅತಿಕ್ರಮಿಸಿಕೊಂಡಿದ್ದಾರೆ. ಈ ಹಿಂದೆ ಅಧಿಕಾರಿಗಳು ಒತ್ತುವರಿ ತೆರವು ಮಾಡಿದ್ದರೂ, ಪುನಃ ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಅವರು ಒತ್ತುವರಿ ತೆರವು ಮಾಡುವಂತೆ ತಾಲ್ಲೂಕು ಪಂಚಾಯಿತಿಗೆ ಪತ್ರ ಬರೆದಿದ್ದರು. ತಾ.ಪಂ ಆಡಳಿತ ಐದು ತಿಂಗಳ ಕಾಲ ಪತ್ರವನ್ನು ಮುಚ್ಚಿಕೊಂಡಿತ್ತು ಎಂದು ಎಂ.ವಿ. ನಗರದ ನಿವಾಸಿಗಳು ದೂರು ಸಲ್ಲಿಸಿದರು.

ಗೌಡನ ಕೆರೆ ಮತ್ತು ಮಸ್ಕಂನಲ್ಲಿ ಸಾರ್ವಜನಿಕ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಹಲವಾರು ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಒತ್ತುವರಿ ತೆರವು ಆಗಲಿಲ್ಲ ಎಂದು ಮಸ್ಕಂ ಕೋದಂರಾಮ ದೂರಿದರು.

ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿಯ ಬ್ಯಾಟರಾಯನಹಳ್ಳಿ ಸರ್ವೆ ನಂಬರ್‌ 1ರ ಬಿ1ರಲ್ಲಿ ಬಾಲಕೃಷ್ಣನಾಯ್ಡು ಎಂಬುವರಿಗೆ ಸೇರಿದ ಪವತಿ ಖಾತೆ ಮಾಡಲು ಕಾರ್ಯದರ್ಶಿ ಶಶಿಕಲಾ ನಿರಾಕರಿಸುತ್ತಿದ್ದಾರೆ ಎಂದು ಶಶಿಕಲಾ ಮನವಿ ಪತ್ರ ಸಲ್ಲಿಸಿದರು.

ರಾಬರ್ಟಸನ್‌ಪೇಟೆ ನಗರಸಭೆ ವ್ಯಾಪ್ತಿಯ ಗೌತಮನಗರದಲ್ಲಿ ನಿವೃತ್ತ ನಗರಸಭೆ ಪೌರಾಯುಕ್ತ ಎಲ್ಲಪ್ಪನ್‌ ಅವರಿಗೆ ಸೇರಿದ ಆಸ್ತಿಯನ್ನು ಅನ್ಯರಿಗೆ ವಿಲೇ ಮಾಡಲು ಪೌರಾಯುಕ್ತೆ ಸಹಕಾರ ಮಾಡುತ್ತಿದ್ದಾರೆ. ಎಲ್ಲಪ್ಪನ್ ಅವರಿಗೆ ಸರ್ಕಾರಿ ದಾಖಲೆ ಪ್ರಕಾರ ಮಕ್ಕಳಿಲ್ಲ. ಆದರೆ ನಕಲಿ ದಾಖಲೆ ಸೃಷ್ಟಿಸಿ ಅವರಿಗೆ ಮಗ ಇದ್ದಾನೆ ಎಂದು ನಿರೂಪಿಸಲು ನಗರಸಭೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಜಯಂತಿ ದೂರು ನೀಡಿದರು.

ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವೀರೇಂದ್ರಕುಮಾರ್‌ ಮತ್ತು ಫರೂಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT