ಶನಿವಾರ, ಡಿಸೆಂಬರ್ 7, 2019
22 °C
ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಪಾಕ್ಷಿಕ ಆಚರಣೆಗೆ ಚಾಲನೆ

2020ರೊಳಗೆ 1.5 ಲಕ್ಷ ಆರೋಗ್ಯ ಕೇಂದ್ರ ಸ್ಥಾಪನೆಯ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೇಶದಲ್ಲಿ ಆಯುಷ್ಮಾನ್ ಯೋಜನೆಯಡಿ 2020ರೊಳಗೆ 1.5 ಲಕ್ಷ ಆರೋಗ್ಯ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ’ ಎಂದು ಕೇಂದ್ರ ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು.

ನಗರದ ಆರೋಗ್ಯ ಇಲಾಖೆ ಕಚೇರಿ ಆವರಣದಲ್ಲಿ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ ಪಾಕ್ಷಿಕ ಆಚರಣೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ‘ದೇಶದಲ್ಲಿ ಜಾರಿಗೆ ತಂದಿರುವ ಆಯುಷ್ಮಾನ್ ಯೋಜನೆ ವಿಶ್ವಕ್ಕೆ ಮಾದರಿಯಾಗಿದ್ದು, ಜಾರಿಗೆ ತರಲು ಇತರೆ ದೇಶಗಳು ಮುಂದಾಗಿವೆ’ ಎಂದರು.

‘ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ 18,000 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಒಳಪಟ್ಟಿದ್ದು, ಒಂದು ವರ್ಷದ ಅವಧಿಯಲ್ಲಿ 15 ಲಕ್ಷ ಜನ ಚಿಕಿತ್ಸೆ ಪಡೆದಿದ್ದಾರೆ. 55 ಕೋಟಿ ಜನರಿಗೆ ಯೋಜನೆಯ ಪ್ರಯೋಜನ ಸಿಗಬೇಕೆಂದು ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ 10 ಕೋಟಿ ಜನರಿಗೆ ಹೆಲ್ತ್ ಕಾರ್ಡ್‌ ವಿತರಿಸಲಾಗಿದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ 2022ರ ವೇಳೆಗೆ ಭಾರತವನ್ನು 135 ಬಿಲಿಯನ್ ಜನತೆಗೆ ಸಮರ್ಪಿಸಲು ಉದ್ದೇಶಿಸಿದ್ದಾರೆ. ಇದರೊಳಗೆ ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆ ಪೂರ್ಣಗೊಳಿಸಬೇಕಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಈಗಾಗಲೇ 20,000 ಕೇಂದ್ರ ಸ್ಥಾಪಿಸಲಾಗಿದ್ದು, 2019ರ ಡಿಸೆಂಬರ್‌ಗೆ 40,000 ಕೇಂದ್ರಗಳನ್ನು ಸ್ಥಾಪಿಸಿ 2020ರ ಮಾರ್ಚ್ ಅಂತ್ಯದೊಳಗೆ ಎಲ್ಲ 1.5 ಲಕ್ಷ ಕೇಂದ್ರಗಳ ಸ್ಥಾಪನೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಸಾಂಕ್ರಾಮಿಕ ರೋಗ ತಡೆಯುವ, ಮಧುಮೇಹ, ರಕ್ತದೊತ್ತಡ, ಹೈಪರ್‍ಟೆನ್ಷನ್ ಇನ್ನಿತರೆ ಮಾರಕ ಕಾಯಿಲೆಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದ್ದು, ಆರೋಗ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ’ ಎಂದರು.

‘ಭಾರತ ಮತ್ತು ಇಡೀ ಜಗತ್ತು ಆಯುಷ್ಮಾನ್ ಭಾರತ್ ಯೋಜನೆಯನ್ನು ಮೆಚ್ಚಿದೆ. ನ್ಯೂಯಾರ್ಕ್‌ನ ಜನರಲ್ ಅಸೆಂಬ್ಲಿ ಯೋಜನೆಯನ್ನು ಪ್ರಸ್ತಾಪಿಸಿದೆ. ಸಂಯುಕ್ತ ರಾಷ್ಟ್ರಗಳ ಸಭೆಯಲ್ಲೂ ಪ್ರಸಂಶೆಗೆ ಭಾಜನವಾಗಿದೆ’ ಎಂದು ಸಂಸತಸ ವ್ಯಕ್ತಪಡಿಸಿದರು.

ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಉಪವಿಬಾಗಾಧಿಕಾರಿ ಸೋಮಶೇಖರ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಡಾ.ಎಸ್.ಎನ್.ವಿಜಯಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)