ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಕಡಿಮೆ ಫಲಿತಾಂಶ: 16 ಕಾಲೇಜುಗಳ ಮೇಲೆ ಶಿಸ್ತುಕ್ರಮದ ತೂಗುಗತ್ತಿ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 40ಕ್ಕಿಂತ ಕಡಿಮೆ ಫಲಿತಾಂಶ ಸಾಧನೆ
Last Updated 27 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಅಂಕಿ ಅಂಶ

* 13,463 ವಿದ್ಯಾರ್ಥಿಗಳು

* 8,777 ಮಂದಿ ಉತ್ತೀರ್ಣ

* 4,686 ಮಂದಿ ಅನುತ್ತೀರ್ಣ

* ಶೇ 65.19 ಫಲಿತಾಂಶ ಸಾಧನೆ

ಕೋಲಾರ: 2018–19ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 40ಕ್ಕಿಂತ ಕಡಿಮೆ ಫಲಿತಾಂಶ ಸಾಧನೆ ಮಾಡಿರುವ ಜಿಲ್ಲೆಯ 16 ಪದವಿ ಪೂರ್ವ ಕಾಲೇಜುಗಳ ಮೇಲೆ ಶಿಸ್ತುಕ್ರಮದ ತೂಗುಗತ್ತಿ ತೂಗುತ್ತಿದೆ.

ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಯ ಸರಾಸರಿ ಫಲಿತಾಂಶ ಶೇ 61.73 ಮತ್ತು ಜಿಲ್ಲೆಯ ಸರಾಸರಿ ಫಲಿತಾಂಶ ಶೇ 65.19 ಇದೆ. ಈ ಪ್ರಮಾಣಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕಾಲೇಜುಗಳು ಹಾಗೂ ಉಪನ್ಯಾಸಕರಿಗೆ ಶಿಸ್ತುಕ್ರಮದ ಬಿಸಿ ಮುಟ್ಟಿಸಲು ಮುಂದಾಗಿದೆ.

ಈ ಸಂಬಂಧ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಆದೇಶ ಕಳುಹಿಸಿರುವ ಇಲಾಖೆ ನಿರ್ದೇಶಕಿ ಸಿ.ಶಿಖಾ ಅವರು ಕಡಿಮೆ ಫಲಿತಾಂಶ ಸಾಧನೆ ಮಾಡಿರುವ ಕಾಲೇಜುಗಳಿಗೆ ನೋಟಿಸ್‌ ಜಾರಿ ಮಾಡಿ ಫಲಿತಾಂಶ ಕುಸಿತಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿವರಣೆ ಪಡೆಯುವಂತೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ 113 ಪದವಿ ಪೂರ್ವ ಕಾಲೇಜುಗಳಿವೆ. ಈ ಪೈಕಿ 32 ಸರ್ಕಾರಿ, 10 ಅನುದಾನಿತ ಹಾಗೂ 71 ಖಾಸಗಿ ಕಾಲೇಜುಗಳಾಗಿವೆ. ಇದರಲ್ಲಿ 16 ಕಾಲೇಜುಗಳಲ್ಲಿ ಶೇ 40ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. 6 ಸರ್ಕಾರಿ, 3 ಅನುದಾನಿತ ಹಾಗೂ 7 ಖಾಸಗಿ ಕಾಲೇಜುಗಳ ಫಲಿತಾಂಶ ಶೇ 40ಕ್ಕಿಂತ ಕೆಳಗೆ ಕುಸಿದಿದೆ.

ಮುಳಬಾಗಿಲು ತಾಲ್ಲೂಕಿನ ಪತ್ತಿಮಿಟ್ಟೆ ರಾಜೇಂದ್ರಹಳ್ಳಿಯ ಜನತಾ ವಿದ್ಯಾದತ್ತಿ ಪದವಿ ಪೂರ್ವ ಕಾಲೇಜು ಹಾಗೂ ಕೆಜಿಎಫ್‌ನ ವಿನಾಯಕ ಪದವಿ ಪೂರ್ವ ಕಾಲೇಜಿಗೆ ಶೂನ್ಯ ಫಲಿತಾಂಶ ಬಂದಿದೆ. ಮಾಲೂರು ತಾಲ್ಲೂಕಿನ ಮೆರೇಟ್‌ ಪದವಿ ಪೂರ್ವ ಕಾಲೇಜು ಹಾಗೂ ಕೋಲಾರ ತಾಲ್ಲೂಕಿನ ಸಂಗೊಂಡಹಳ್ಳಿಯ ಶಾಹಿನ್‌ ಪದವಿ ಪೂರ್ವ ಕಾಲೇಜು ಶೇ 100ರಷ್ಟು ಫಲಿತಾಂಶ ಸಾಧನೆ ಮಾಡಿವೆ.

ಶೇ 1.32 ಇಳಿಕೆ: 2017–18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಶೇ 66.51 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ 18ನೇ ಸ್ಥಾನದಲ್ಲಿತ್ತು. ಈ ಬಾರಿ ಜಿಲ್ಲೆಯು ಶೇ 65.19 ಫಲಿತಾಂಶ ಪಡೆಯುವುದರೊಂದಿಗೆ ಅದೇ ಸ್ಥಾನ ಕಾಯ್ದುಕೊಂಡಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಶೇ 1.32ರಷ್ಟು ಫಲಿತಾಂಶ ಇಳಿಕೆಯಾಗಿದೆ.

ಸರ್ಕಾರಿ ಕಾಲೇಜುಗಳ ಪೈಕಿ ಕೆಜಿಎಫ್‌ ತಾಲ್ಲೂಕಿನ ಸುಂದರಪಾಳ್ಯ ಕಾಲೇಜು ಶೇ 93 ಫಲಿತಾಂಶ ಸಾಧನೆಯೊಂದಿಗೆ ಪ್ರಥಮ, ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಕಾಲೇಜು ಶೇ 88 ಫಲಿತಾಂಶ ಗಳಿಸುವುದರೊಂದಿಗೆ ದ್ವಿತೀಯ ಹಾಗೂ ಮಾಲೂರು ತಾಲ್ಲೂಕಿನ ಡಿ.ಎನ್‌.ದೊಡ್ಡಿ ಕಾಲೇಜು ಶೇ 83.60 ಫಲಿತಾಂಶ ಸಾಧನೆಯೊಂದಿಗೆ ತೃತೀಯ ಸ್ಥಾನಕ್ಕೇರಿವೆ.

ಅದೇ ರೀತಿ ಅನುದಾನಿತ ಕಾಲೇಜುಗಳ ಪೈಕಿ ಕೋಲಾರದ ಆಲ್‌ ಅಮೀನ್‌ ಕಾಲೇಜು ಶೇ 85.39 ಫಲಿತಾಂಶದೊಂದಿಗೆ ಪ್ರಥಮ, ಮಾಲೂರಿನ ಜೆಎಸ್‌ಎಸ್‌ ಕಾಲೇಜು ಶೇ 80.68 ಫಲಿತಾಂಶ ಗಳಿಸುವುದರೊಂದಿಗೆ ದ್ವಿತೀಯ ಮತ್ತು ಮುಳಬಾಗಿಲಿನ ಶಾರದಾ ಮಹಿಳಾ ಕಾಲೇಜು ಶೇ 80 ಫಲಿತಾಂಶ ಗಳಿಸಿ ತೃತೀಯ ಸ್ಥಾನಕ್ಕೇರಿವೆ.

ಖಾಸಗಿ ಕಾಲೇಜುಗಳ ಪೈಕಿ ಮಾಲೂರಿನ ಮೆರೇಟ್‌ ಕಾಲೇಜು ಮತ್ತು ಕೋಲಾರದ ಸಂಗೊಂಡಹಳ್ಳಿಯ ಶಾಹಿನ್‌ ಕಾಲೇಜು ತಲಾ ಶೇ 100ರಷ್ಟು ಫಲಿತಾಂಶ ಸಾಧನೆ ಮಾಡಿ ಪ್ರಥಮ, ಕೋಲಾರದ ಎಸ್‌ಡಿಸಿ ಕಾಲೇಜು ಹಾಗೂ ಮಾಲೂರು ತಾಲ್ಲೂಕಿನ ಆಲಂಬಾಡಿಯ ಕ್ರೈಸ್ಟ್‌ ಕಾಲೇಜು ತಲಾ ಶೇ 98 ಫಲಿತಾಂಶ ಗಳಿಸಿ ದ್ವಿತೀಯ, ಕೋಲಾರದ ಸಹ್ಯಾದ್ರಿ ಕಾಲೇಜು ಶೇ 97 ಫಲಿತಾಂಶ ಸಾಧನೆಯೊಂದಿಗೆ ತೃತೀಯ ಸ್ಥಾನ ಪಡೆದಿವೆ.

ಬಾಲಕಿಯರ ಮೇಲುಗೈ: ಜಿಲ್ಲೆಯಿಂದ ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ 13,463 ವಿದ್ಯಾರ್ಥಿಗಳ ಪೈಕಿ 8,777 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಕುಳಿತಿದ್ದ 8,075 ಬಾಲಕರ ಪೈಕಿ 4,281 ಮಂದಿ ತೇರ್ಗಡೆಯಾಗಿದ್ದು, ಶೇ 53.02 ಫಲಿತಾಂಶ ಬಂದಿದೆ. ಅದೇ ರೀತಿ 8,320 ಬಾಲಕಿಯರ ಪೈಕಿ 5,292 ಮಂದಿ ಉತ್ತೀರ್ಣರಾಗಿದ್ದು, ಶೇ 63.61 ಫಲಿತಾಂಶ ಬಂದಿದೆ. ಇದರೊಂದಿಗೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ನಗರ ಪ್ರದೇಶಕ್ಕೆ ಹೋಲಿಸಿದರೆ ಈ ಬಾರಿ ಗ್ರಾಮೀಣ ಭಾಗದಲ್ಲಿ ಫಲಿತಾಂಶ ಸಾಧನೆ ಉತ್ತಮವಾಗಿದೆ. ನಗರ ಪ್ರದೇಶದ ಫಲಿತಾಂಶ ಶೇ 64.54 ಇದ್ದರೆ ಗ್ರಾಮೀಣ ಭಾಗದಲ್ಲಿ ಶೇ 67.58 ಫಲಿತಾಂಶ ಬಂದಿದೆ.

ನೋಟಿಸ್‌ಗೆ ಸಿದ್ಧತೆ: ಶೇ 100ರಷ್ಟು ಫಲಿತಾಂಶ ಸಾಧನೆ ಮಾಡಿರುವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಇಲಾಖೆಯಿಂದ ಪ್ರಶಂಸನಾಪತ್ರ ನೀಡಲು ನಿರ್ಧರಿಸಲಾಗಿದೆ. ಈ ಕಾಲೇಜುಗಳಲ್ಲಿ ಫಲಿತಾಂಶ ಸುಧಾರಣೆಗೆ ಅನುಸರಿಸಿದ ಕ್ರಮಗಳನ್ನು ಇತರ ಕಾಲೇಜುಗಳಲ್ಲೂ ಅಳವಡಿಸಲು ತೀರ್ಮಾನಿಸಲಾಗಿದೆ.

ಶಿಖಾ ಅವರ ಆದೇಶದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ವೆಂಕಟಸ್ವಾಮಿ ಅವರು ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ನೋಟಿಸ್‌ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ.

ಕಡಿಮೆ ಫಲಿತಾಂಶ ಬಂದಿರುವ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಉಪನ್ಯಾಸಕರ ವಾರ್ಷಿಕ ವೇತನ ಹೆಚ್ಚಳ ತಡೆ ಹಿಡಿಯಲು ಇಲಾಖೆಗೆ ಅವಕಾಶವಿದೆ. ಅಲ್ಲದೇ, ಅನುದಾನಿತ ಕಾಲೇಜುಗಳಿಗೆ ಅನುದಾನ ನಿಲ್ಲಿಸಬಹುದು ಹಾಗೂ ಖಾಸಗಿ ಕಾಲೇಜುಗಳ ಮುಂದುವರಿಕೆ ಅನುಮತಿ ಹಿಂಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT