ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: 20,324 ಮಂದಿಗೆ ಪದವಿ ಪ್ರದಾನ

ಬೆಂಗಳೂರು ಉತ್ತರ ವಿ.ವಿ 3ನೇ ಘಟಿಕೋತ್ಸವ ನಾಳೆ; 44 ಮಂದಿಗೆ ಚಿನ್ನದ ಪದಕ
Published 2 ಜುಲೈ 2023, 15:58 IST
Last Updated 2 ಜುಲೈ 2023, 15:58 IST
ಅಕ್ಷರ ಗಾತ್ರ

ಕೋಲಾರ: ‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೂರನೇ ವಾರ್ಷಿಕ ಘಟಿಕೋತ್ಸವ ಮಂಗಳವಾರ ನಡೆಯಲಿದ್ದು, 20,324 ಅಭ್ಯರ್ಥಿಗಳಿಗೆ ಪದವಿ ಹಾಗೂ ವಿವಿಧ ವಿಭಾಗಗಳಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿರುವ 44 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.

‘ಘಟಿಕೋತ್ಸವವು ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.05ರವರೆಗೆ ನಡೆಯಲಿದ್ದು, ಆಹ್ವಾನಿತರು ಬೆಳಿಗ್ಗೆ 10ರೊಳಗೆ ಹಾಜರಿರಬೇಕು. ಆಹ್ವಾನಿತರಿಗೆ ಮಾತ್ರವೇ ಪ್ರವೇಶವಿದ್ದು, ಶಿಷ್ಟಾಚಾರ ಪಾಲಿಸಲಾಗುವುದು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ’ ಎಂದು ಭಾನುವಾರ ನಗರ ವಲಯದ ಟಮಕದಲ್ಲಿನ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ಬಾರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಈ ಬಾರಿ ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ (ಸಾಮಾಜಿಕ ಸೇವಾ ಕ್ಷೇತ್ರ), ಸೌರಶಕ್ತಿಯ ಮಹತ್ವ ಸಾರಿದ ಹರೀಶ್‌ ಹಂದೆ (ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ) ಹಾಗೂ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಸಾಂಸ್ಕೃತಿಕ ಕ್ಷೇತ್ರ) ಅವರನ್ನು ಗೌರವ ಡಾಕ್ಟರೇಟ್‌ ಪದವಿಗೆ ಆಯ್ಕೆ ಮಾಡಲಾಗಿದೆ. ಅವರಿಗೆ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು. ಪರಿಸರ ಮತ್ತು ಅಭಿವೃದ್ಧಿ ಪತ್ರಕರ್ತ ಪಿ.ಸಾಯಿನಾಥ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಪಾಲ್ಗೊಳ್ಳಲಿದ್ದಾರೆ’ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಡಿ.ಡಾಮಿನಿಕ್ ಮಾತನಾಡಿ, ‘8,252 ಪುರುಷರು ಹಾಗೂ 12,072 ಮಹಿಳೆಯರು ಪದವಿ ಸ್ವೀಕರಿಸಲಿದ್ದಾರೆ. ಸ್ನಾತಕ, ಬಿ.ಇಡಿ, ಬಿಪಿ.ಇಡಿ ಪದವಿಯಲ್ಲಿ 16 ಮಂದಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 28 ಮಂದಿ ಅಭ್ಯರ್ಥಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ’ ಎಂದು ಹೇಳಿದರು.

‘ಸ್ನಾತಕ ಪದವಿಯಲ್ಲಿ 10 ಮಂದಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 22 ಮಂದಿ ಸೇರಿ 32 ಯುವತಿಯರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಉಳಿದಂತೆ ಸ್ನಾತಕದಲ್ಲಿ 6 ಮತ್ತು ಸ್ನಾತಕೋತ್ತರದಲ್ಲಿ 6 ಸೇರಿ 12 ಮಂದಿ ಯುವಕರು ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ಕಳೆದ ವರ್ಷ ಜುಲೈ 15ರಂದು ಎರಡನೇ ಘಟಿಕೋತ್ಸವ ನಡೆದಿತ್ತು. ಕೋಲಾರ ಜಿಲ್ಲೆಗೆ 2018ರಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮಂಜೂರಾಗಿತ್ತು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಪ್ರೊ.ಎನ್.ನರಸಿಂಹಮೂರ್ತಿ (ಆಡಳಿತ), ಡಾ.ಡೊಮಿನಿಕ್‌.ಡಿ (ಪರೀಕ್ಷಾಂಗ), ಹಣಕಾಸು ಅಧಿಕಾರಿ ವಸಂತಕುಮಾರ್, ಸಿಂಡಿಕೇಟ್ ಸದಸ್ಯರಾದ ಪ್ರೊ.ಬಿ.ಆರ್‌.ಸುಪ್ರೀತ್‌ ಹಾಗೂ ಕೆ.ಬಿ.ಹನುಮಂತರಾಜು ಇದ್ದರು.

ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾಹಿತಿ ಚಿನ್ನದ ಪದಕ: ಯುವತಿಯೇ ಮೇಲುಗೈ ಘಟಿಕೋತ್ಸವ ಭಾಷಣ ಮಾಡಲಿರುವ ಸಾಯಿನಾಥ್‌

ಬೆಂಗಳೂರು ಉತ್ತರ ವಿ.ವಿ; ಪದವಿ ಸ್ವೀಕರಿಸುವವರು ವಿಭಾಗ; ಪುರುಷರು; ಮಹಿಳೆಯರು; ಒಟ್ಟು ಸ್ನಾತಕ (ಯುಜಿ); 6832; 8647; 15479 ಸ್ನಾತಕೋತ್ತರ (ಪಿಜಿ); 996; 1587; 2583 ಬಿ.ಇಡಿ; 323; 1795; 2118 ಬಿಪಿ.ಇಡಿ; 101; 43; 144 ಒಟ್ಟು; 8252; 12072; 20324

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT