ಶುಕ್ರವಾರ, ಡಿಸೆಂಬರ್ 13, 2019
26 °C
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿಕೆ

ಕೋಲಾರದ ಮೂರು ನಗರಸಭೆ: ಕಾಗ್ರೆಸ್ ಅಧಿಕಾರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಮೂರು ನಗರಸಭೆ ಸದಸ್ಯರ ಸ್ಥಾನದ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ರಾತ್ರಿ ನೂತನ ನಗರಸಭೆ ಸದಸ್ಯರನ್ನು ಸನ್ಮಾನಿಸಿ ಮಾತನಾಡಿ, ‘ಮೂರು ಕಡೆ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಆದರೂ ನಮ್ಮ ಪಕ್ಷದವರೆ ಸುಲಭವಾಗಿ ಅಧಿಕಾರಕ್ಕೆ ಬರುತ್ತಾರೆ’ ಎಂದರು.

‘ಮೂರು ಕಡೆ ಯಾವ ಪಕ್ಷಕ್ಕೂ ಬಹುಮತ ದೊರೆತಿಲ್ಲ, ಸ್ಥಳೀಯ ಅಭಿವೃದ್ಧಿ ಕಾರಣಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅನಿವಾರ್ಯತೆಯಿದೆ. ಕೆಲ ಪಕ್ಷೇತರ ಸದಸ್ಯರು ಅಧ್ಯಕ್ಷರ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಎಲ್ಲೂ ಕುದುರೆ ವ್ಯಾಪಾರ ನಡೆಸುವುದಿಲ್ಲ’ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಪತನ: ‘ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರು ಪರಾಜಿತಗೊಂಡು ಬಿಜೆಪಿ ಸರ್ಕಾರಕ್ಕೂ ಕಾರಣರಾಗುತ್ತಾರೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಅನರ್ಹ ಶಾಸಕರು ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ದ್ರೋಹ ಮಾಡಿ ಪಕ್ಷಾಂತರ ಮಾಡಿದ್ದಾರೆ. ಅವರಿಗೆಲ್ಲ ಅವರ ಅವರ ಕ್ಷೇತ್ರದ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

‘ಉಪ ಚುನಾವಣೆಯಲ್ಲಿ ಕಾಂಗ್ರೆಸ್ ೧೫ ಸ್ಥಾನಗಳನ್ನು ಗೆಲ್ಲಲಿದ್ದು ಪಕ್ಷದಲ್ಲಿನ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಕ್ಷ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿಯಿದೆ’ ಎಂದರು.

‘ಸಿದ್ದರಾಮಯ್ಯ ಹಿರಿಯ ಕಾಂಗ್ರೆಸ್ಸಿಗರನ್ನು ಕಡೆಗಣನೆ ಮಾಡಿದ್ದಾರೆ ಎಂಬುದು ಸರಿಯಲ್ಲ. ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಲಿದ್ದು ಸಾರ್ವತ್ರಿಕ ಚುನಾವಣೆ ಯಾವಾಗ ಬಂದರೂ ಪಕ್ಷ ಸಿದ್ದವಾಗಿದೆ’ ಎಂದು ಹೇಳಿದರು.

‘ಸಂಸದ ಎಸ್.ಮುನಿಸ್ವಾಮಿ ಇನ್ನೂ ಬಿಬಿಎಂಪಿ ಕಾರ್ಪೋರೇಟರ್ ಮಟ್ಟದಲ್ಲೇ ಹೇಳಿಕೆಗಳನ್ನು ನೀಡುತ್ತಿದ್ದು ನನ್ನ ವಿರುದ್ಧದ ಆರೋಪಗಳಿಗೆ ಅವರ ಬಳಿ ಮಾಹಿತಿಯೇ ಇಲ್ಲ. ಅನುಭವದ ಕೊರತೆಯಿಂದಾಗಿ ಏನೇನೋ ಮಾತನಾಡುವ ಸಂಸದರ ಪ್ರಶ್ನೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ತಿರುಗೇಟು ನೀಡಿದರು.

ನಗರಸಭೆ ಸದಸ್ಯರಾದ ಪ್ರಸಾದಬಾಬು, ಬಿ.ಎಂ.ಮುಬಾರಕ್, ಮಹಮದ್ ಜಬೀವುಲ್ಲಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)