ಕೋಲಾರ: ಶಾಸಕರ ಎದುರೇ ತಹಶೀಲ್ದಾರ್– ಪಿಡಿಒ ಜಟಾಪಟಿ

ಕೋಲಾರ: ತಾಲ್ಲೂಕಿನ ಕುರುಗಲ್ ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಸಂಬಂಧ ತಹಶೀಲ್ದಾರ್ ವಿಜಯಣ್ಣ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು ನಡುವೆ ಶಾಸಕರ ಸಮ್ಮುಖದಲ್ಲೇ ಗುರುವಾರ ಜಟಾಪಟಿ ನಡೆದಿದೆ.
ಗ್ರಾಮದಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ, ನಿವೇಶನ ಹಕ್ಕುಪತ್ರ ವಿತರಣೆ ಹಾಗೂ ಸಾರ್ವಜನಿಕರ ಕುಂದು ಕೊರತೆ ಪರಿಶೀಲನೆಗಾಗಿ ಶಾಸಕ ಕೆ.ಶ್ರೀನಿವಾಸಗೌಡ ಕುರುಗಲ್ನಲ್ಲಿ ಸಭೆ ಹಮ್ಮಿಕೊಂಡಿದ್ದರು.
ಸಭೆಯಲ್ಲಿ ಪಿಡಿಒ ಮುನಿರಾಜು, ‘ದಿವಂಗತ ಸಿ.ಬೈರೇಗೌಡರು ಶಾಸಕರಾಗಿದ್ದಾಗ 1994ರಲ್ಲಿ ಹಂಚಿಕೆ ಮಾಡಿದ್ದ ನಿವೇಶನಗಳ ಹಕ್ಕುಪತ್ರ ಸಂಬಂಧ ತಹಶೀಲ್ದಾರ್ ವಿಜಯಣ್ಣ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಇದರಿಂದ ಹಕ್ಕುಪತ್ರ ವಿತರಣೆ ವಿಳಂಬವಾಗಿದೆ’ ಎಂದು ದೂರಿದರು.
ಇದರಿಂದ ಅಸಮಾಧಾನಗೊಂಡ ತಹಶೀಲ್ದಾರ್ ವಿಜಯಣ್ಣ ಪಿಡಿಒ ವಿರುದ್ಧ ತಿರುಗಿಬಿದ್ದು, ‘ನನ್ನ ವಿರುದ್ಧ ಏಕೆ ಸುಳ್ಳು ಆರೋಪ ಮಾಡುತ್ತಿದ್ದೀರಿ. ಸಭೆಯಲ್ಲಿ ನನ್ನನ್ನು ಅವಮಾನಿಸುವ ಅಗತ್ಯವೇನಿದೆ?’ ಎಂದು ಕಿಡಿಕಾರಿದರು.
ಇದಕ್ಕೆ ತಿರುಗೇಟು ನೀಡಿದ ಮುನಿರಾಜು, ‘ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನಿಮ್ಮಿಂದಲೇ ಹಕ್ಕುಪತ್ರ ವಿತರಣೆ ವಿಳಂಬವಾಗಿದೆ’ ಎಂದು ಆರೋಪ ಸಮರ್ಥಿಸಿಕೊಂಡರು.
ಆಗ ವಿಜಯಣ್ಣ ಮತ್ತು ಮುನಿರಾಜು ನಡುವೆ ವಾಗ್ವಾದ ನಡೆದು ಸಭೆಯಲ್ಲಿ ಗದ್ದಲ ಸೃಷ್ಟಿಯಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರರ ಕೈ ಮಿಲಾಯಿಸುವ ಹಂತ ತಲುಪಿದರು. ಆಗ ಶಾಸಕರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಬಳಿಕ ಪರಿಸ್ಥಿತಿ ತಿಳಿಗೊಂಡಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.