ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಜಿನ ಮೂಲಕ ವಿಜ್ಞಾನದ ಆಟ

Last Updated 20 ಮೇ 2018, 19:30 IST
ಅಕ್ಷರ ಗಾತ್ರ

‘ಮಕ್ಕಳಿಗೆ ವಿಜ್ಞಾನವನ್ನು ಮೋಜಿನ ರೀತಿಯಲ್ಲಿ ಹೇಳಿಕೊಟ್ಟರೆ ಅವರಲ್ಲಿ ಕುತೂಹಲ ಮೂಡುತ್ತದೆ. ವಿಜ್ಞಾನ ಅಂದ್ರೆ ಅದ್ಭುತ, ವಿಜ್ಞಾನ ಅಂದ್ರೆ ತಮಾಷೆ’ ‘ಸೈನ್ಸ್‌ ಉತ್ಸವ’ ಸಂಸ್ಥೆಯ ಸಹಸ್ಥಾಪಕರಲ್ಲೊಬ್ಬರಾದ ಶಶಾಂಕ್‌ ಕರ್ಣಂ ಅವರು ವಿಜ್ಞಾನವನ್ನು ವ್ಯಾಖ್ಯಾನಿಸಿದ್ದು ಹೀಗೆ.

ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿ, ಅವರಲ್ಲಿ ಹೊಸ ವಿಚಾರಗಳ ಬಗ್ಗೆ ಆಸಕ್ತಿ ಮೂಡಿಸುವುದು, ಪ್ರಾಯೋಗಿಕ ಕಲಿಕೆ ಮೂಲಕ ವಿಜ್ಞಾನದ ಪ್ರಾಥಮಿಕ ತಿಳುವಳಿಕೆಯನ್ನು ತಿಳಿಸಿ, ಅದರ ಒಳಗಿನ ಬಗ್ಗೆ ಆಸಕ್ತಿ ಬೆಳೆಸುವುದು ‘ಸೈನ್ಸ್‌ ಉತ್ಸವ’ದ ಉದ್ದೇಶ. ವಿಜ್ಞಾನದ ಚಟುವಟಿಕೆಗಳಿಗಾಗಿ ಇರುವ ‘ಸೈನ್ಸ್‌ ಉತ್ಸವ’ವನ್ನು ಶಶಾಂಕ್‌ ಕರ್ಣಂ ಹಾಗೂ ಹರ್ಷ ಅತ್ರಿ ಕೆ.ಜಿ ಅವರು 2009ರಲ್ಲಿ ಆರಂಭಿಸಿದರು. ಕಾನ್ಪುರ, ಮಹಾರಾಷ್ಟ್ರ, ಬೆಳಗಾವಿ, ಮುಂಬೈ, ಬೆಂಗಳೂರು ಸೇರಿ ದೇಶದ 15 ನಗರಗಳಲ್ಲಿ ‘ಸೈನ್ಸ್‌ ಉತ್ಸವ’ ಶಾಖೆಗಳಿವೆ. ಇಲ್ಲಿಯವರೆಗೂ ಸುಮಾರು 1.5 ಲಕ್ಷ ಮಕ್ಕಳು ಇಲ್ಲಿ ಕಲಿತಿದ್ದು, 5ರಿಂದ 14 ವರ್ಷದೊಳಗಿನ ಮಕ್ಕಳು ಇಲ್ಲಿ ಸೇರಬಹುದು.

‘ಮಕ್ಕಳಲ್ಲಿ ಮೂಢನಂಬಿಕೆಗಳ ವಿರುದ್ಧ ಪ್ರಶ್ನೆ ಮಾಡುವುದನ್ನು ಕಲಿಸಬೇಕು. ನೈಜ ಅನುಭವಗಳನ್ನು ಅವರಿಗೆ ಕಟ್ಟಿಕೊಡಬೇಕು.  ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ವಿಜ್ಞಾನ ವಿಷಯವೇ ಕಷ್ಟಕರವಾಗಿರುತ್ತದೆ. ಅದರಲ್ಲಿನ ಪ್ರಯೋಗಗಳನ್ನು ಸೂಕ್ತ ರೀತಿಯಲ್ಲಿ ಅವರಿಗೆ ವಿವರಿಸಿದರೆ ಅವರಿಗೆ ವಿಜ್ಞಾನದ ಒಳನೋಟ ಅರಿವಾಗಿ ಅದರ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಸೈನ್ಸ್‌ ಉತ್ಸವವು ಮಕ್ಕಳಲ್ಲಿ ‘ಹೇಗೆ ಮತ್ತು ಯಾಕೆ’ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿ ಅವರನ್ನು ಕ್ರಿಯಾಶೀಲರನ್ನಾಗಿಸುತ್ತದೆ. ತಾವು ಕಂಡ ವಿಚಾರಗಳ ಬಗ್ಗೆ ತಾರ್ಕಿಕ ಕಾರಣಗಳನ್ನು ಹುಡುಕುವ ಮನೋಭಾವವನ್ನು ಗಟ್ಟಿ ಮಾಡುತ್ತದೆ’ ಎಂದು ಸಂಸ್ಥೆ ಕಾರ್ಯದ ಬಗ್ಗೆ ವಿವರಿಸುತ್ತಾರೆ ಶಶಾಂಕ್‌.

ಇಲ್ಲಿ ವಿವಿಧ ರಾಸಾಯನಿಕಗಳಿಂದ ಬಣ್ಣಗಳ ಪ್ರಯೋಗ, ಬಲ್ಬ್‌ ಹೇಗೆ ಕೆಲಸ ಮಾಡುತ್ತದೆ? ಬೇಸಿಗೆ ಮತ್ತು ಚಳಿಯಲ್ಲಿ ಏರ್‌ ಕಂಡಿಶನಿಂಗ್‌ ಕೆಲಸ, ಬೀದಿದೀಪಗಳ ಕಾರ್ಯವಿಧಾನ, ಅವುಗಳನ್ನು ಅಟೋಮ್ಯಾಟಿಕ್‌ ಆಗಿ ಹೇಗೆ ರಚಿಸಲಾಗಿದೆ? ಇಂತಹ ಅನೇಕ ವಿಚಾರಗಳ ಬಗ್ಗೆ ಇಲ್ಲಿ ನೇರ ಪ್ರಯೋಗದ ಮೂಲಕ ವಿವರಣೆ ನೀಡಲಾಗುತ್ತದೆ. ಮಕ್ಕಳೇ ಹೊಸ ಹೊಸ ಅನ್ವೇಷಣೆ ಮಾಡುವಂತೆ ಪ್ರೋತ್ಸಾಹಿಸುವುದು ಇಲ್ಲಿನ ವಿಶೇಷ. ಪ್ರಯೋಗಗಳು, ಮೋಜು, ಆಟಗಳು, ಫಜಲ್ಸ್‌ ಹಾಗೂ ಇನ್ನಿತರ ಮೂಲಕ ವಿಜ್ಞಾನವನ್ನು ಹೇಳಿಕೊಡಲಾಗುತ್ತದೆ.

ಸ್ಟೆಮ್‌ (steam)
ಸೈನ್ಸ್‌, ಟೆಕ್ನಾಲಜಿ, ಎಂಜಿನಿಯರಿಂಗ್‌, ಆರ್ಟ್‌, ಮ್ಯಾಥಮ್ಯಾಟಿಕ್ಸ್‌(ಗಣಿತ) ಎಂಬುದು ಸ್ಟೆಮ್‌ನ ವಿಸ್ಕೃತ ರೂಪ. ಸೈನ್ಸ್‌ ಉತ್ಸವದ ಪ್ರಮುಖ ಚಟುವಟಿಕೆ ‘ಸ್ಟೆಮ್‌’. ಯಾವುದೇ ಹೊಸ ಸಂಶೋಧನೆ ಅಥವಾ ಉಪಕರಣಗಳನ್ನು ಕಂಡುಹಿಡಿದಾಗ ಈ ಐದು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಆಹಾರ ಬಿಸಿ ಅಥವಾ ಹಾಳಾಗದಂತೆ ಸಂರಕ್ಷಿಸಿಡುವಂತೆ ಮೈಕ್ರೋವೇವ್‌ ಅನ್ನು ಹೇಗೆ ತಯಾರಿಸಲಾಗಿದೆ? ಮೊಬೈಲ್‌ ಮೂಲಕವೇ ಮನೆಯ ಸ್ವಿಚ್‌ಗಳನ್ನು ಹೇಗೆ ನಿರ್ವಹಣೆ ಮಾಡುವುದು? ಯಾವುದೇ ಉಪಕರಣಗಳನ್ನು ತಯಾರಿಸುವಾಗ ಅದರ ನೋಟ ಹೇಗೆ ವಿಶೇಷವಾಗಿ ಗ್ರಾಹಕರನ್ನು ಸೆಳೆಯಬೇಕು? ಗಣಿತವನ್ನು ಹೇಗೆ ಪ್ರಯೋಗಿಸಬೇಕು? ಎಂಬುದರ ಬಗ್ಗೆ ಇಲ್ಲಿ ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಇಲ್ಲಿ ಮಕ್ಕಳೇ ವಿಜ್ಞಾನಿಗಳು. ಸೈನ್ಸ್‌ ಉತ್ಸವದ ಉದ್ದೇಶ ‘ಪ್ರಯೋಗದಿಂದಲೇ ಎಲ್ಲವೂ’ ಎಂಬುದೇ ಆಗಿದೆ. ವಿನೋದಗಳ ಮೂಲಕ ಮಕ್ಕಳಿಗೆ ಹೇಳಿಕೊಡಲಾಗುತ್ತದೆ ಎಂದು ಶಶಾಂಕ್‌ ಕರ್ಣಂ ಹೇಳುತ್ತಾರೆ.

ರೊಬೊಟಿಕ್ಸ್‌, ಎಲೆಕ್ಟ್ರಾನಿಕ್ಸ್‌ ತರಬೇತಿ
ಮಕ್ಕಳಲ್ಲಿ ಕಲ್ಪನೆ ಹಾಗೂ ಶೋಧನೆ ಗುಣವನ್ನು ಉತ್ತೇಜಿಸುವ ಸಲುವಾಗಿ ರೊಬೊಟ್ ಹಾಗೂ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ರೂಪಿಸಲು ಇಲ್ಲಿ ಅವಕಾಶ ನೀಡಲಾಗುತ್ತದೆ. ಇಲ್ಲಿ ಮಕ್ಕಳೇ ಸಣ್ಣ ರೊಬೊಗಳನ್ನು ಮಾಡಿ ಮನೆಗೆ ಕೊಂಡೊಯ್ಯುತ್ತಾರೆ. ಹಾಗೆಯೇ ಎಲೆಕ್ಟ್ರಾನಿಕ್‌ ವಸ್ತುಗಳ ಕಾರ್ಯವಿಧಾನ ತಿಳಿಸಿ, ಅವುಗಳ ತಯಾರಿಕೆಯ ಬಗ್ಗೆಯೂ ಹೇಳಿಕೊಡಲಾಗುತ್ತದೆ ಎನ್ನುತ್ತಾರೆ ಶಶಾಂಕ್‌.

ಶಿಕ್ಷಣರಂಜನೆ (edutainment)
ಮಕ್ಕಳಿಗೆ ಹೊಸ ಹಾಗೂ ಅವರಲ್ಲಿ ಕುತೂಹಲ ಹೆಚ್ಚು ಮಾಡುವ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತದೆ. ವೈಜ್ಞಾನಿಕ ಪ್ರದರ್ಶನಗಳ ಮೂಲಕ ವಿಜ್ಞಾನದ ಅದ್ಭುತಗಳೊಂದಿಗೆ ಮಕ್ಕಳನ್ನು ಪ್ರೋತ್ಸಾಹಿಸಿ, ಅದರಲ್ಲೇ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತದೆ. ಪಠ್ಯದಲ್ಲಿರುವ ಕೆಲ ಪ್ರಯೋಗಗಳೂ ಸೇರಿ ಮಕ್ಕಳಿಗೆ ಸುಲಭವಾಗಿ ವಿಜ್ಞಾನ ವಿಷಯವನ್ನು ಅರ್ಥಮಾಡಿಸಲಾಗುತ್ತದೆ. ವಿಜ್ಞಾನದ ಆಟಗಳೊಂದಿಗೆ ಶಿಕ್ಷಣ ಎನ್ನುತ್ತಾರೆ ಶಶಾಂಕ್‌.

ವಿಜ್ಞಾನದ ಮೋಜಿನೊಂದಿಗೆ ಹುಟ್ಟುಹಬ್ಬ ಆಚರಣೆ
ಇಲ್ಲಿ ಮಕ್ಕಳ ಹುಟ್ಟುಹಬ್ಬದಂದು ಕೆಲ ವಿನೋದ ಆಟಗಳ ಮೂಲಕ ಹುಟ್ಟುಹಬ್ಬ ಆಚರಿಸಲಾಗುತ್ತದೆ. ನೈಟ್ರೋಜನ್‌ ತುಂಬಿಸಿ ಬಲೂನು ಆಟ, ಕೆಲ ರಾಸಾಯನಿಕಗಳ ಮಿಶ್ರಣ ಮಾಡಿ ಬಣ್ಣ ಬಣ್ಣದ ಹೊಗೆ ಮೂಲಕ ಮಗುವಿಗೆ ಶುಭಾಶಯ ತಿಳಿಸುವುದು, ಕೃತಕ ರಾಕೆಟ್‌ ಉಡಾವಣೆ, ಸುಗಂಧ ದ್ರವ್ಯಗಳ ತಯಾರಿಕೆ, ಮ್ಯಾಜಿಕ್‌ ವಿಜ್ಞಾನಗಳ ಮೂಲಕ ಮಗುವಿನ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಮಕ್ಕಳು ತಾವೇ ತಯಾರಿಸಿದ ವಿಜ್ಞಾನದ ವಸ್ತುಗಳನ್ನು ಉಡುಗೊರೆಯಾಗಿ ಮನೆಗೆ ಕೊಂಡೊಯ್ಯುತ್ತಾರೆ.

ಶಾಲೆಗಳಲ್ಲಿ ಕಾರ್ಯಕ್ರಮ
ಸೈನ್ಸ್ ಉತ್ಸವವು ನಗರದ ಬೇರೆ ಬೇರೆ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೂ ಸುಲಭ ಪ್ರಯೋಗಗಳ ಮೂಲಕ ವಿಜ್ಞಾನವನ್ನು ಹೇಳಿಕೊಡುತ್ತಾರೆ. ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿ ಲ್ಯಾಬೋರೇಟರಿ ಸರಿಪಡಿಸಿ, ಮಕ್ಕಳ ಮೂಲಕವೇ ಕೆಲ ವಿಜ್ಞಾನ ಮೋಜುಗಳನ್ನು ಹೇಳಿಕೊಡುತ್ತದೆ ಈ ತಂಡ.

ಕಾರ್ಪೋರೇಟ್‌ ಕಾರ್ಯಕ್ರಮ
ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳ ಮಕ್ಕಳಿಗಾಗಿ ವಿಜ್ಞಾನ ಶಿಬಿರಗಳನ್ನು ಆಯೋಜಿಸುತ್ತಾರೆ. ಅಲ್ಲಿ ಸೈನ್ಸ್‌ ಉತ್ಸವ ತಂಡವು ಮಕ್ಕಳಿಗೆ ವಿಜ್ಞಾನ ಶಿಬಿರಗಳನ್ನು ನಡೆಸುತ್ತದೆ. ಇಲ್ಲಿಯವರೆಗೂ ಇನ್ಫೋಸಿಸ್‌, ಎಚ್‌.ಪಿ ಮೊದಲಾದ ಕಂಪನಿಗಳಲ್ಲಿ ಇಂತಹ ಶಿಬಿರಗಳನ್ನು ನಡೆಸಿದೆ. ಇದಲ್ಲದೇ ಸೈನ್ಸ್‌ ಸ್ಟುಡಿಯೋಗೆ ಭೇಟಿ ಕಾರ್ಯಕ್ರಮ, ವಿಜ್ಞಾನ ಪ್ರದರ್ಶನಗಳನ್ನು ಸೈನ್ಸ್‌ ಉತ್ಸವ ಆಗಾಗ ನಡೆಸುತ್ತಿರುತ್ತದೆ

ಸೈನ್ಸ್‌ ಉತ್ಸವವು ಜೂನ್‌ನಿಂದ ಫೆಬ್ರುವರಿವರೆಗೆ ವಾರಾಂತ್ಯಗಳಲ್ಲಿ ಸಿ– ಸ್ಟೆಮ್‌ ಕಾರ್ಯಕ್ರಮಗಳನ್ನು ಹಾಗೂ ವಾರದ ದಿನಗಳಲ್ಲಿ ಸಂಜೆ ನಡೆಸುತ್ತದೆ. ಇದಲ್ಲದೇ ಬೇಸಿಗೆಯಲ್ಲಿ 10 ದಿನಗಳ ವಿಜ್ಞಾನ ಶಿಬಿರಗಳನ್ನು ನಗರದ ವಿವಿಧ ಭಾಗಗಳಲ್ಲಿ ನಡೆಸುತ್ತದೆ.

ಫ್ರೀ ಕೋಡಿಂಗ್‌ ಕಾರ್ಯಾಗಾರ
ಸೈನ್ಸ್‌ ಉತ್ಸವ ತಂಡವು ಎಚ್‌ಪಿ, ಮೈಕ್ರೋಸಾಫ್ಟ್‌ ಕಂಪೆನಿ ಪ್ರಾಯೋಜಕತ್ವದಲ್ಲಿ ಮೂರು ವಾರಗಳ ಕಾಲ ಸಾಫ್ಟ್‌ವೇರ್‌ ಕೋಡಿಂಗ್‌ ಉಚಿತ ಕಾರ್ಯಾಗಾರವನ್ನು ನಡೆಸುತ್ತಿದೆ. ವೈಟ್‌ಫೀಲ್ಡ್‌, ಎಚ್‌ಎಸ್‌ಆರ್‌ ಬಡಾವಣೆ, ಇಂದಿರಾನಗರ, ದೊಮ್ಮಲೂರು ಸೇರಿ ನಗರದ ನಾಲ್ಕು ಕಡೆಗಳಲ್ಲಿ ಕಾರ್ಯಾಗಾರ ನಡೆಯಲಿದೆ. 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಇಲ್ಲಿ ಅವಕಾಶವಿದೆ. ಸಂಪರ್ಕಕ್ಕೆ– 90352 16333

ವಿಳಾಸ: 42, ಮೊದಲ ಮಹಡಿ, ಪುಟ್ಟದಾಸ ಕಾಂಪ್ಲೆಕ್ಸ್‌, 7ನೇ ಬ್ಲಾಕ್‌, ಜಯನಗರ, ಕನಕಪುರ ಮುಖ್ಯರಸ್ತೆ.
ಇಮೇಲ್‌: info@scienceutsav.com.
ಸಂಪರ್ಕಕ್ಕೆ– 90352 16555 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT