ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್‌ನೆಸ್‌ ಚಾಲೆಂಜ್‌: ಪ್ರಧಾನಿಗೆ ಸವಾಲುಗಳ ಸುರಿಮಳೆ

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಕಿದ ‘ಫಿಟ್‌ನೆಸ್‌ ಚಾಲೆಂಜ್‌’ ರಾಜಕೀಯ ಬಣ್ಣ ಪಡೆದುಕೊಂಡಿದೆ.

ಈಗ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ತೈಲ ಬೆಲೆ ಏರಿಕೆ, ಕೃಷಿ ಸಂಕಷ್ಟ, ರಾಷ್ಟ್ರೀಯ ಭದ್ರತೆಯಿಂದ ಹಿಡಿದು ಪ್ರತಿ ಭಾರತೀಯನ ಬ್ಯಾಂಕ್‌ ಖಾತೆಗೆ ₹15 ಲಕ್ಷ ಜಮೆ ಮಾಡುವವರೆಗೆ ವಿವಿಧ ಸವಾಲು ಸ್ವೀಕರಿಸುವಂತೆ ವಿರೋಧ ಪಕ್ಷಗಳ ಮುಖಂಡರು ಪ್ರಧಾನಿಗೆ ಸವಾಲು ಒಡ್ಡಿದ್ದಾರೆ.

‘ಮಾಧ್ಯಮ ಚಮತ್ಕಾರಗಳನ್ನು ನಿಲ್ಲಿಸಿ, ಆಡಳಿತದ ಸವಾಲುಗಳನ್ನು ಸ್ವೀಕರಿಸಿ’ ಎಂದು ಕಾಂಗ್ರೆಸ್‌ ಮುಖಂಡ ರಣದೀಪ್‌ ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.

ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಅವರೂ ಪ್ರಧಾನಿಗೆ ಸವಾಲು ಒಡ್ಡಿದ್ದಾರೆ. ಈ ಸವಾಲನ್ನು ಪ್ರಧಾನಿ ಸ್ವೀಕರಿಸಲಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನ ವಕ್ತಾರ ಸಂಜಯ ಝಾ ಅವರು ಟ್ವಿಟರ್‌ನಲ್ಲಿ ತಮ್ಮ ಪದವಿ ಪ್ರಮಾಣಪತ್ರವನ್ನು ಪ್ರಕಟಿಸಿದ್ದಾರೆ. ಮೋದಿ ಅವರು ತಮ್ಮ ಪದವಿ ಪ್ರಮಾಣಪತ್ರ ಪ್ರಕಟಿಸುವಂತೆ ಝಾ ಸವಾಲು ಒಡ್ಡಿದ್ದಾರೆ.

ವಿದೇಶದಲ್ಲಿನ ಕಪ್ಪುಹಣ ತಂದು ಪ್ರತಿ ಭಾರತೀಯನ ಬ್ಯಾಂಕ್‌ ಖಾತೆಗೆ ₹15 ಲಕ್ಷದಿಂದ ₹20 ಲಕ್ಷ ಜಮೆ ಮಾಡುವುದಾಗಿ ಮೋದಿ ಅವರು ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಜೆಡಿಯು ಬಂಡಾಯ ನಾಯಕ ಶರದ್‌ ಯಾದವ್‌ ನೆನಪಿಸಿದ್ದಾರೆ.

ತೂತ್ತುಕುಡಿಯಲ್ಲಿ ಪೊಲೀಸ್‌ ಗೋಲಿಬಾರ್‌ಗೆ 11 ಮಂದಿ ಬಲಿಯಾಗಿರುವುದನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ‘ಅನುಕಂಪದ ಸವಾಲು’ ಸ್ವೀಕರಿಸಿ ಎಂದಿದ್ದಾರೆ.

ಅಮೆರಿಕದ ಒರ್ಲಾಂಡೊದಲ್ಲಿ 2016ರಲ್ಲಿ ನಡೆದ ಶೂಟೌಟ್‌ ಬಗ್ಗೆ ಮೋದಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ತೂತ್ತುಕುಡಿಯ ಹಿಂಸಾಚಾರದ ಬಗ್ಗೆ ಮೌನವಾಗಿದ್ದಾರೆ ಎಂದು ತರೂರ್‌ ಹೇಳಿದ್ದಾರೆ.

**

ನಾಗಾಲೋಟದಲ್ಲಿರುವ ಪೆಟ್ರೋಲ್‌/ಡೀಸೆಲ್‌ ಬೆಲೆ ಇಳಿಸುವ ಮೂಲಕ ಜನರ ಆರ್ಥಿಕ ಫಿಟ್‌ನೆಸ್‌ ಮರುಸ್ಥಾಪಿಸಿ. ನಾಲ್ಕು ವರ್ಷಗಳಲ್ಲಿ ಎಕ್ಸೈಸ್‌ ಸುಂಕವನ್ನು 11 ಬಾರಿ ಏರಿಸುವ ಮೂಲಕ ₹10 ಲಕ್ಷ ಕೋಟಿ ವಸೂಲಿ ಮಾಡಿದ್ದೀರಿ.

–ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ಮುಖಂಡ

**

ವಿರಾಟ್‌ ಕೊಹ್ಲಿಯ ಫಿಟ್‌ನೆಸ್‌ ಸವಾಲು ಸ್ವೀಕರಿಸಿದ್ದಕ್ಕೆ ನಮ್ಮ ವಿರೋಧವೇನೂ ಇಲ್ಲ. ಯುವ ಜನರಿಗೆ ಉದ್ಯೋಗ, ರೈತರಿಗೆ ಪರಿಹಾರ, ದಲಿತರು ಮತ್ತು ಅಲ್ಪಸಂಖ್ಯಾತರ ವಿರುದ್ಧದ ಹಿಂಸೆ ತಡೆಯ ಭರವಸೆ ಈಡೇರಿಸುವ ಸವಾಲು ಸ್ವೀಕರಿಸಿ. ಈ ಸವಾಲು ಸ್ವೀಕರಿಸುವಿರಾ ಪ್ರಧಾನಿಯವರೇ?

–ತೇಜಸ್ವಿ ಯಾದವ್‌, ಆರ್‌ಜೆಡಿ ಮುಖಂಡ

**

ಏನಿದು ಚಾಲೆಂಜ್‌?

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ರಾಠೋಡ್‌ ಅವರು ಟ್ವಿಟರ್‌ನಲ್ಲಿ ‘ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌’ ಎಂಬ ಅಭಿಯಾನವನ್ನು ಆರಂಭಿಸಿದ್ದರು. ತಮ್ಮ ವ್ಯಾಯಾಮದ ವಿಡಿಯೊವನ್ನು ಪ್ರಕಟಿಸಿ, ವಿರಾಟ್‌ ಕೊಹ್ಲಿ ಅವರಿಗೆ ಇದೇ ಸವಾಲು ಒಡ್ಡಿದ್ದರು. ಈ ಸವಾಲನ್ನು ಕೊಹ್ಲಿ ಅವರು ತಮ್ಮ ಹೆಂಡತಿ ಮತ್ತು ನಟಿ ಅನುಷ್ಕಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರಿಕೆಟಿಗ ಮಹೇಂದ್ರ ಸಿಂಗ್‌ ದೋನಿ ಅವರಿಗೂ ವಿಸ್ತರಿಸಿದ್ದಾರೆ.

‘ಸವಾಲು ಸ್ವೀಕರಿಸಿದ್ದೇನೆ, ವಿರಾಟ್‌! ನನ್ನ ಫಿಟ್‌ನೆಸ್‌ ಚಾಲೆಂಜ್‌ ವಿಡಿಯೊವನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ’ ಎಂದು ಕೊಹ್ಲಿ ಸವಾಲಿಗೆ ಟ್ವಿಟರ್‌ನಲ್ಲಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT