ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ಮಾವಿನ ಹಣ್ಣಿನ ಘಮಲು

‘ವರದಾ ಗೋಲ್ಡ್‌’ ಮಾವು ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ
Last Updated 30 ಮೇ 2018, 12:47 IST
ಅಕ್ಷರ ಗಾತ್ರ

ಹಾವೇರಿ: ಕಣ್ಣ ನೋಟದಲ್ಲಿಯೇ ಮನಸೆಳೆಯುವ ಹಳದಿಕೆಂಪಿನ ಬಣ್ಣ, ಸ್ವಾದಿಷ್ಟ ರುಚಿ, ಎಲ್ಲೆಲ್ಲೂ ಅದರದ್ದೇ ಘಮಲು, ಒಪ್ಪವಾಗಿ ಜೋಡಿಸಿದ ಮಾವು...

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಗುರುಭವನದಲ್ಲಿ ಮಂಗಳವಾರ ನಡೆದ ವರದಾ ಗೋಲ್ಡ್‌ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಕಂಡು ಬಂದು ಚಿತ್ರಣವಿದು.

ಜಿಲ್ಲೆಯ ಮಾವು ಬೆಳೆಗಾರರಿಂದ ನೈಸರ್ಗಿಕ (ಕಾರ್ಬೈಡ್‌ ಮುಕ್ತ) ಮಾವು ನೇರವಾಗಿ ಗ್ರಾಹಕರಿಗೆ ತಲುಪಲಿ ಎಂಬ ಉದ್ದೇಶದಿಂದ, ಕಳೆದ ವರ್ಷದಿಂದ ಜಿಲ್ಲಾಮಟ್ಟದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ. ಮೇಳದಲ್ಲಿ ರೈತರೇ ತಾಜಾ ಹಣ್ಣುಗಳನ್ನು ಮಾರಾಟ ಮಾಡಿದರು.

‘ಮೇಳದಲ್ಲಿ ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಆಕರ್ಷಕ ದರದಲ್ಲಿ ನೈಸರ್ಗಿಕ, ಸ್ವಾದಿಷ್ಟ, ತಾಜಾ ಹಣ್ಣುಗಳನ್ನು ಒದಗಿಸುವ ಜೊತೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗಿದೆ. ಗ್ರಾಹಕರಿಗೂ ಉತ್ತಮ ಗುಣಮಟ್ಟದ ಮಾವು ದೊರೆತರೆ, ಇತ್ತ ರೈತರಿಗೂ ಉತ್ತಮ ಲಾಭ’ ಎಂದು ಬ್ಯಾಡಗಿ ತಾಲ್ಲೂಕಿನ ಮಾವು ಬೆಳೆಗಾರ ವೀರಭದ್ರಪ್ಪ ಚಂದ್ರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ನೈಸರ್ಗಿಕವಾಗಿ ಮಾಗಿದ 150 ಬಾಕ್ಸ್‌ ಮಾವಿನ ಹಣ್ಣನ್ನು ಈ ಬಾರಿಯ ಮಾರಾಟ ಮೇಳಕ್ಕೆ ತಂದಿದ್ದೆವು. ಆದರೆ, ಕಳೆದ ವರ್ಷದಷ್ಟು ವ್ಯಾಪಾರ ಜೋರಾಗಿಲ್ಲ ಎಂದು ತಾಲ್ಲೂಕಿನ ಬಸಾಪುರ ಗ್ರಾಮದ ಮಾವು ಬೆಳೆಗಾರ ಮಲ್ಲೇಶ ನಾಗಪ್ಪ ಮುದ್ದಿ ತಿಳಿಸಿದರು.

ಮಾವುಗಳ ಪ್ರದರ್ಶನ: ಆಪೂಸ್‌, ಕಲ್ಮಿ, ಬೇನಾಶಾನ್, ತೋತಾಪುರಿ, ಮಂಟಪ್ಪ, ಮಲಗೋವಾ, ಕೆಂಪು ಮೂತಿಯ ರಸಪುರಿ, ಗೇಣುದ್ದದ ಬಾದಾಮಿ, ನೀಲಂ, ರಾಜಗೀರ, ರತ್ನಗೀರಿ, ರಸಾಲು, ಸಕ್ಕರಗುತ್ತಿ, ಮಲ್ಲಿಕಾ, ಬೇನಿಷಾ (ಬೈಗಂಪಲ್ಲಿ), ಖಾದದ, ಪೈರಿ, ಜಾಹಂಗಿರ, ಸ್ವರ್ಣರೇಖಾ, ಅಂಜಲಿ ಸೇರಿದಂತೆ ಸುಮಾರು 365ಕ್ಕೂ ಅಧಿಕ ತಳಿಗಳನ್ನು ಪ್ರದರ್ಶನ ಮಾಡಲಾಯಿತು.

ಉದ್ಘಾಟನೆ: ಶಾಸಕ ನೆಹರು ಓಲೇಕಾರ ಮೇಳವನ್ನು ಉದ್ಘಾಟಿಸಿ ಮಾತನಾಡಿ, ‘ನಮ್ಮ ಹಿರಿಯರು ನಮಗಾಗಿ ಅಂದು ಮಾವಿನ ಸಸಿಗಳನ್ನು ನಾಟಿ ಮಾಡಿದ್ದರು. ಅವುಗಳಿಂದ ಇಂದು ನಾವು ಫಲ ಪಡೆಯುತ್ತಿದ್ದೇವೆ. ಅಂತೆಯೇ, ನಮ್ಮ ಮುಂದಿನ ಪೀಳಿಗೆಗಾಗಿ ನಾವು ಈಗ ಸಸಿಗಳನ್ನು ನೆಡಬೇಕು’ ಎಂದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ಮಾವಿನ ಸಸಿಗಳನ್ನು ಮೊದಲು ತನ್ನ ಮಕ್ಕಳು, ಮೊಮ್ಮಕ್ಕಳಿಗಾಗಿ ಬೆಳೆಸುತ್ತಿದ್ದರು. ಆದರೆ ಕಾಲ ಬದಲಾದಂತೆ ಅವುಗಳನ್ನು ಆದಾಯದ ಮೂಲವಾಗಿ ಬೆಳೆಯುತ್ತಿದ್ದಾರೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ., ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಸ್‌.ಪಿ.ಭೋಗಿ ಹಾಗೂ ಹಿರಿಯ ಸಹಾಯಕ ನಿರ್ದೇಶಕ ಬಿ.ಎನ್‌.ಬರೇಗರ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ನಗರಸಭೆ ಸದಸ್ಯರಾದ ಕರಬಸಪ್ಪ ಹಳದೂರ, ಜಗದೀಶ ಮಲಗೋಡ್ರ ಹಾಗೂ ಮುಖಂಡರಾದ ಗೀರೀಶಗೌಡ ಸಂಗನಗೌಡ ಗೌಡರ, ಗುತ್ತಲ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನಾಗರಾಜ ಎರಿಮನಿ ಇದ್ದರು.

**
ಜೀವನದಲ್ಲಿ ಇಷ್ಟೊಂದು ಮಾವಿನ ತಳಿಯ ಹಣ್ಣುಗಳನ್ನು ಎಲ್ಲಿಯೂ ನೋಡಿರಲಿಲ್ಲ. ಅವುಗಳನ್ನು ನಮ್ಮ ಜಿಲ್ಲೆಯಲ್ಲಿಯೇ ನೋಡಿದಕ್ಕೆ ತುಂಬ ಸಂತೋಷವಾಯಿತು
- ಚೇತನ ಪಾಟೀಲ, ಗ್ರಾಹಕ

**
ಜಿಲ್ಲೆಯ ಮಾವಿಗೆ ‘ವರದಾ ಗೋಲ್ಡ್‌’ ಬ್ರಾಂಡ್‌ ಹೆಸರು ನೀಡಿದ್ದರಿಂದ, ಹೊರ ರಾಜ್ಯಗಳಲ್ಲಿ ಉತ್ತಮ ಹೆಸರು ಬರುತ್ತಿದೆ. ಉತ್ತಮ ಇಳುವರಿ ಬಂದಿದ್ದು, ಬೆಲೆ ಇಲ್ಲದಾಗಿದೆ
- ನಾಗಪ್ಪ ಮುದ್ದಿ ಬಸಾಪುರ, ಮಾವು ಬೆಳೆಗಾರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT