ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ಮೂರ್ತಿ ವಿಸರ್ಜನೆ ವೇಳೆ 6 ಮಕ್ಕಳು ಸಾವು | ಜವರಾಯನಾಗಿ ಕಾಡಿದ ಆಟಿಕೆ ಗಣಪ

Last Updated 11 ಸೆಪ್ಟೆಂಬರ್ 2019, 2:56 IST
ಅಕ್ಷರ ಗಾತ್ರ

ಕೋಲಾರ:ಜಿಲ್ಲೆಯ ಕೆಜಿಎಫ್‌ ತಾಲ್ಲೂಕಿನ ಮರದಘಟ್ಟ ಗ್ರಾಮದಲ್ಲಿ ಆಟಿಕೆಯ ಪುಟ್ಟ ಗಣಪನೇ 6 ಕಂದಮ್ಮಗಳ ಪ್ರಾಣಕ್ಕೆ ಎರವಾಗಿದ್ದಾನೆ. ಮಕ್ಕಳು ಅತಿ ಪ್ರೀತಿಯಿಂದ ಮಾಡಿದ ಗಣೇಶ ಮೂರ್ತಿಯೇ ಅವರನ್ನು ಜವರಾಯನಾಗಿ ಬಲಿ ಪಡೆದಿದೆ.

ವಾರದ ಹಿಂದೆ ಮರದಘಟ್ಟ ಗ್ರಾಮದಲ್ಲಿ ನಡೆದ ಗಣೇಶ ಹಬ್ಬದ ಆಚರಣೆಯಿಂದ ಪ್ರೇರಿತರಾಗಿ ಜೇಡಿ ಮಣ್ಣಿನಲ್ಲಿ ಗಣೇಶ ಮೂರ್ತಿ ಮಾಡಿದ 6 ಮಕ್ಕಳು ಊರ ಹೊರಗಿನ ನೀರಿನ ಕುಂಟೆಯಲ್ಲಿ ಮಂಗಳವಾರ ಮೂರ್ತಿ ವಿರ್ಸಜನೆ ಮಾಡಲು ಹೋಗಿ ಜಲಸಮಾಧಿಯಾಗಿದ್ದಾರೆ.

ಜೇಡಿ ಮಣ್ಣಿನಲ್ಲಿ ಗಣೇಶ ಮೂರ್ತಿ ಮಾಡಿ ಪೂಜೆ ಸಲ್ಲಿಸಿ ಸಾವಿನ ಹಾದಿಯಲ್ಲಿ ಸಂಭ್ರಮದಿಂದಲೇ ಮೆರವಣಿಗೆ ಬಂದು ನೀರಿಗಿಳಿದ ಮಕ್ಕಳು ಮೂರ್ತಿಯ ಜತೆಯೇ ದುರಂತ ಅಂತ್ಯ ಕಂಡಿದ್ದಾರೆ. ಮೃತ ಮಕ್ಕಳ ಪೈಕಿ ತೇಜಶ್ರೀ (11) ಮತ್ತು ರಕ್ಷಿತಾ (8) ಸಹೋದರಿಯರು. ಇವರ ತಂದೆ ಜಯರಾಮರೆಡ್ಡಿ 3 ವರ್ಷದ ಹಿಂದೆಯಷ್ಟೇ ಮೃತಪಟ್ಟಿದ್ದರು. ತಾಯಿ ಉಷಾ ಅವರು ಪತಿಯ ಸಾವಿನ ನೋವು ಮರೆಯುವ ಮುನ್ನವೇ ಮಕ್ಕಳ ಸಾವು ಸಿಡಿಲಿನಂತೆ ಬಂದೆರಗಿದೆ.

ಉಷಾ ಅವರು ಹೋಟೆಲ್‌ನಲ್ಲಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿದ್ದರು. ಪ್ರತಿನಿತ್ಯದಂತೆ ಮಂಗಳವಾರ ಬೆಳಿಗ್ಗೆ ಮಕ್ಕಳಿಗೆ ತಿಂಡಿ ತಿನ್ನಿಸಿ ಹೋಟೆಲ್‌ ಕೆಲಸಕ್ಕೆ ಹೋಗಿದ್ದ ಅವರು ಸಂಜೆ ಮನೆಗೆ ಮರಳುವಷ್ಟರಲ್ಲಿ ಮಕ್ಕಳು ಬಾರದ ಲೋಕಕ್ಕೆ ಹೋಗಿದ್ದಾರೆ.

ಘಟನೆಯಲ್ಲಿ ಮೃತಪಟ್ಟಿರುವ ಮತ್ತಿಬ್ಬರು ಮಕ್ಕಳಾದ ವೈಷ್ಣವಿ (12) ಹಾಗೂ ಆಕೆಯ ತಮ್ಮ ರೋಹಿತ್‌ರ (10) ತಂದೆ ರವಿನಾರಾಯಣರೆಡ್ಡಿ ಅವರು ಸಾಯಿ ಬಾಬಾ ದರ್ಶನಕ್ಕಾಗಿ ಶಿರಡಿಗೆ ಹೋಗಿದ್ದಾರೆ. ಕುಟುಂಬ ಸದಸ್ಯರು ಅವರಿಗೆ ಕರೆ ಮಾಡಿ ಮಕ್ಕಳ ಸಾವಿನ ಸುದ್ದಿ ತಿಳಿಸಲು ಪ್ರಯತ್ನಿಸಿದ್ದರೂ ರವಿನಾರಾಯಣರೆಡ್ಡಿ ಸಂಪರ್ಕಕ್ಕೆ ಸಿಕ್ಕಿಲ್ಲ.

ತೇಜಶ್ರೀ, ರಕ್ಷಿತಾ, ವೈಷ್ಣವಿ ಹಾಗೂ ರೋಹಿತ್‌ ಜತೆ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಹೋಗಿದ್ದ ವೀಣಾ (11) ಮತ್ತು ಧನುಷ್‌್ (7) ಎಂಬ ಮಕ್ಕಳು ಸಹ ಕುಂಟೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೊಹರಂ ಹಿನ್ನೆಲೆಯಲ್ಲಿ ಶಾಲೆಗೆ ರಜೆಯಿದ್ದ ಕಾರಣ ಈ ಆರೂ ಮಂದಿ ಮನೆಯಲ್ಲೇ ಇದ್ದರು. ಸ್ನೇಹಿತರಾದ ಇವರೆಲ್ಲರೂ ಸಾವಿನಲ್ಲೂ ಒಂದಾಗಿದ್ದಾರೆ.

ದುರ್ಘಟನೆ ನಡೆದಿರುವ ನೀರಿನ ಕುಂಟೆ ಕೆರೆ ಅಂಗಳದಲ್ಲಿದೆ. ಜೆಸಿಬಿಯಿಂದ ಕುಂಟೆಯಲ್ಲಿ ಇತ್ತೀಚೆಗೆ ಮಣ್ಣು ತೆಗೆಯಲಾಗಿತ್ತು. ಹೀಗಾಗಿ ಕುಂಟೆಯ ಆಳ ಮತ್ತು ಅಗಲ ಹೆಚ್ಚಿ, ಮಳೆ ನೀರು ತುಂಬಿಕೊಂಡಿತ್ತು. ಕುಂಟೆ ಸುಮಾರು 8 ಅಡಿ ಆಳವಿದೆ ಎಂದು ಅಂಡರ್ಸನ್‌ ಪೇಟೆ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT