ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಪುರಂನಿಂದ ನಂಗಲಿವರೆಗೆ 6 ಪಥ ರಸ್ತೆ

ರಾಷ್ಟ್ರೀಯ ಹೆದ್ದಾರಿ ಪರಿಶೀಲಿಸಿದ ಸಂಸದ ಮುನಿಸ್ವಾಮಿ l 45 ದಿನದೊಳಗೆ ಡಿಪಿಆರ್‌ ಸಲ್ಲಿಕೆಗೆ ನಿರ್ಧಾರ
Last Updated 2 ಜೂನ್ 2022, 5:27 IST
ಅಕ್ಷರ ಗಾತ್ರ

ಕೋಲಾರ: ‘ಕೆ.ಆರ್‌.‍ಪುರಂನಿಂದ ರಾಜ್ಯದ ಗಡಿ ನಂಗಲಿವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು 6 ಪಥಕ್ಕೆ ವಿಸ್ತರಿಸುವ ಯೋಜನೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದು, ಇನ್ನು 45 ದಿನಗಳಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಲಾಗುವುದು’ ಎಂದು ಸಂಸದ ಎಸ್‌. ಮುನಿಸ್ವಾಮಿ ಹೇಳಿದರು.

ಬುಧವಾರ ತಾಲ್ಲೂಕಿನ ಅರಾಭಿಕೊತ್ತನೂರಿನಲ್ಲಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಲ್ಯಾಣ ಗ್ರೂಪ್‌, ಲ್ಯಾಂಕೊ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನರಸಾಪುರದಿಂದ ನಂಗಲಿವರೆಗೆ ರಾಷ್ಟ್ರೀಯ ಹೆದ್ದಾರಿ–75 ಪರಿಶೀಲಿಸಿದ ಅವರು, ‘ರಾಜ್ಯದಿಂದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಸದ್ಯ 4 ಪಥಗಳಿದ್ದು, ವಾಹನ ಸಂಖ್ಯೆ ಅಧಿಕವಾಗಿರುವುದರಿಂದ ಒತ್ತಡ ಹೆಚ್ಚಿದೆ. ಹೀಗಾಗಿ, ವಿಸ್ತರಣೆ ಗಡ್ಕರಿ ಅವರಿಗೆ ಮನವಿ ಮಾಡಿದ್ದೆ’ ಎಂದರು.

‘ಈ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದ್ದು, ಜೀವ ರಕ್ಷಣೆಗಾಗಿ ಸದ್ಯ 40 ಕಿ.ಮೀ.ಗೆ ಒಂದರಂತೆ ಆಂಬುಲೆನ್ಸ್‌ ಇವೆ. ಅದನ್ನು 20 ಕಿ.ಮೀ.ಗೆ ಒಂದರಂತೆ ನೀಡಲು ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಕೆಲವೆಡೆ ಮೇಲ್ಸೇತುವೆ, ಅಂಡರ್‌ಪಾಸ್‌ ಬೇಕಿದೆ. ಕೆಲವೆಡೆ ಹೆದ್ದಾರಿ ಪಕ್ಕ ಕಟ್ಟಡ ತ್ಯಾಜ್ಯ ಸುರಿದಿದ್ದು, ವಿಲೇವಾರಿ ಮಾಡಬೇಕಿದೆ. 6 ಪಥದ ರಸ್ತೆಗೆ ವಿಸ್ತರಣೆಗೊಂಡರೆ ಕೋಲಾರ ಭಾಗಕ್ಕೆ ಮತ್ತಷ್ಟು ಕೈಗಾರಿಕೆಗಳು ಬರಲಿವೆ’ ಎಂದು ತಿಳಿಸಿದರು.

‘ಹೆದ್ದಾರಿಯುದ್ದಕ್ಕೂ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ, ಡಾಂಬರೀಕರಣ ಕಾಮಗಾರಿಗೂ ಚಾಲನೆ ನೀಡಲಾಗಿದೆ. ರಸ್ತೆ ಫಲಕ ಅಳವಡಿಕೆಗೆ ಕ್ರಮ ವಹಿಸಲಾಗಿದೆ’ ಎಂದರು.

‘ಅಮೃತ ಸರೋವರ ಯೋಜನೆಯಡಿ ಹೆದ್ದಾರಿ ಪ್ರಾಧಿಕಾರಕ್ಕೆ ಕೆರೆಗಳ ಪುನಶ್ಚೇತನ ಹೊಣೆ ನೀಡಿದ್ದು, ಸಿಎ ಆರ್‌ ನಿಧಿಯನ್ನು 2,800 ಕೆರೆಗಳಿಗೆ ಕೋಲಾರ ಜಿಲ್ಲೆಯಲ್ಲಿ ಬಳಸಿ’ ಎಂದು ಸಲಹೆ ನೀಡಿದರು.

ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ.ಕೆ. ವಾಥೋರ್‌ ಮಾತನಾಡಿ, ‘ಮಕ್ಕಳು ರಸ್ತೆ ಸುರಕ್ಷತೆ ನಿಯಮ ಪಾಲಿಸಬೇಕು. ಹೆತ್ತವರಿಗೂ ಅರಿವು ಮೂಡಿಸಬೇಕು. ಶಾಲೆಗೆ ಸಂಪರ್ಕ ಕಲ್ಪಿಸುವ ಅಂಡರ್‌ ಪಾಸ್‌ ದುರಸ್ತಿಗೆ ಕ್ರಮವಹಿಸುವೆ’ಎಂದರು.

ಅರಾಭಿಕೊತ್ತನೂರು ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್‌. ಪ್ರದೀಪ್ ಕುಮಾರ್ ಮಾತನಾಡಿದರು. ಕೋಲಾರ ತಹಶೀಲ್ದಾರ್‌ ನಾಗರಾಜ್‌, ನಗರಸಭಾ ಸದಸ್ಯ ಮುರಳೀಗೌಡ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಕರ್ನಲ್‌ ಎ.ಕೆ. ಜಾನ್‌ಬಾಜ್‌, ಕಲ್ಯಾಣ ಗ್ರೂಪ್‌ನ ಸತೀಶ್‌ ಎಂಗ್ಲೆ, ರಾಜೇಂದ್ರ ನವರತ್ನಭ್‌ ಇದ್ದರು.

ಜಿಆರ್‌ಎಸ್‌ ಮುಳಬಾಗಿಲು ಟೂಲ್‌ವೇಸ್‌ ಸಂಸ್ಥೆಯಲ್ಲಿ ಸಸಿ ನೆಡಲಾಯಿತು. ಮುಳಬಾಗಿಲು ತಹಶೀಲ್ದಾರ್ ಶೋಭಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT