ಅಪೌಷ್ಟಿಕತೆ ನಿವಾರಣೆ: ಕೋಲಾರ ಅಗ್ರ, ವಿಜಯಪುರ, ಯಾದಗಿರಿ, ರಾಯಚೂರು ನಂತರದ ಸ್ಥಾನ

ಬುಧವಾರ, ಜೂಲೈ 17, 2019
25 °C
ರಾಜ್ಯಕ್ಕೆ ಮಾದರಿಯಾದ ‘ಪೌಷ್ಟಿಕ ಕೋಲಾರ ಅಭಿಯಾನ’

ಅಪೌಷ್ಟಿಕತೆ ನಿವಾರಣೆ: ಕೋಲಾರ ಅಗ್ರ, ವಿಜಯಪುರ, ಯಾದಗಿರಿ, ರಾಯಚೂರು ನಂತರದ ಸ್ಥಾನ

Published:
Updated:
Prajavani

ಕೋಲಾರ: 2018–19ನೇ ಸಾಲಿನಲ್ಲಿ ಅಪೌಷ್ಟಿಕತೆ ನಿವಾರಣೆಯ ಜಿಲ್ಲೆಗಳ ಪಟ್ಟಿಯಲ್ಲಿ ಕೋಲಾರ ಮೊದಲ ಸ್ಥಾನ ಪಡೆದಿದೆ. ವಿಜಯಪುರ, ಯಾದಗಿರಿ ಮತ್ತು ರಾಯಚೂರು ನಂತರದ ಸ್ಥಾನದಲ್ಲಿವೆ.

16 ಲಕ್ಷ ಜನಸಂಖ್ಯೆಯ ಜಿಲ್ಲೆಯಲ್ಲಿ ಬಹುತೇಕರು ಕೃಷಿ, ಪಶುಸಂಗೋಪನೆಯನ್ನು ಅವಲಂಬಿಸಿದ್ದಾರೆ. ಪ್ರತಿ ವರ್ಷ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಈ ಗಂಭೀರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2017–18ರಲ್ಲಿ ‘ಪೌಷ್ಟಿಕ ಕೋಲಾರ ಅಭಿಯಾನ’ ಆರಂಭಿಸಿತು.

2017–18ರಲ್ಲಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳ 90,420 ಮಕ್ಕಳನ್ನು ತೂಕ ಮಾಡಲಾಗಿತ್ತು. ಇವರಲ್ಲಿ 11,544 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಆಗ ‘ಪೌಷ್ಟಿಕ ಕೋಲಾರ ಅಭಿಯಾನ’ದ ಹೆಜ್ಜೆ ಇಡಲಾಯಿತು.

2018–19ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರಗಳ 83,366 ಮಕ್ಕಳನ್ನು ತೂಕ ಮಾಡಲಾಗಿದ್ದು ಇವರಲ್ಲಿ 4,556 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೀಗೆ ಒಂದೇ ವರ್ಷದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ.

‘ಪೌಷ್ಟಿಕ ಆಹಾರ ಶಿಬಿರ, ತಾಯಂದಿರ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರ ಫಲ ಇದು’ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೋಸ್ಲಿನ್ ಪಿ. ಸತ್ಯ ತಿಳಿಸಿದರು.

‘ಮಕ್ಕಳು ಅಪೌಷ್ಟಿಕ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದ ತಕ್ಷಣ ಅಪೌಷ್ಟಿಕತೆ ನಿವಾರಣಾ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೌಷ್ಟಿಕ ಆಹಾರ ಸೇವಿಸಲು ಒಂದು ವರ್ಷಕ್ಕೆ ಒಂದು ಮಗುವಿಗೆ ₹ 200 ನೀಡುತ್ತೇವೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಂ.ಮುನಿರಾಜು ಮಾಹಿತಿ ನೀಡಿದರು.

ಹೆಚ್ಚುವರಿ ಆಹಾರ ಪೂರೈಕೆ

‘ಪೌಷ್ಟಿಕ ಕೋಲಾರ ಅಭಿಯಾನ’ದ ಅಡಿ ಅಂಗನವಾಡಿ ಕೇಂದ್ರಗಳಿಗೂ ಹೆಚ್ಚುವರಿ ಆಹಾರ ಒದಗಿಸಲಾಗುತ್ತಿದೆ. ಸಾಮಾನ್ಯ ಮಗುವಿಗೆ 150 ಮಿ.ಲೀ. ಹಾಲು ನೀಡಿದರೆ ಅಪೌಷ್ಟಿಕ ಮಗುವಿಗೆ 200 ಮಿ.ಲೀ. ಹಾಲು ಕೊಡುತ್ತಿದ್ದೇವೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಂ.ಮುನಿರಾಜು ವಿವರಿಸಿದರು.

‘ಸಾಮಾನ್ಯ ಮಗುವಿಗೆ ಅಂಗನವಾಡಿಯಲ್ಲಿ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಿದರೆ, ಅಪೌಷ್ಟಿಕ ಮಕ್ಕಳಿಗೆ ಮೂರು ದಿನ ಕೊಡಲಾಗುತ್ತಿದೆ. ಶೀಘ್ರದಲ್ಲಿಯೇ ಜಿಲ್ಲೆಯನ್ನು ಅಪೌಷ್ಟಿಕ ಮುಕ್ತಗೊಳಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !