ಶನಿವಾರ, ಡಿಸೆಂಬರ್ 3, 2022
20 °C
ಬಿಗಿ ಬಂದೋಬಸ್ತ್‌ ನಡುವೆ ಶಿಕ್ಷಕರ ಅರ್ಹತಾ ಪರೀಕ್ಷೆ ಯಶಸ್ವಿ

ಟಿಇಟಿ ಪರೀಕ್ಷೆಗೆ 701 ಅಭ್ಯರ್ಥಿ ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಶಿಕ್ಷಕರಾಗಿ ನೇಮಕಾತಿ ಹೊಂದಲು ಕನಿಷ್ಠ ಅರ್ಹತೆಯಾಗಿ ಪರಿಗಣಿಸುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಭಾನುವಾರ ನಗರದ 23 ಕೇಂದ್ರಗಳಲ್ಲಿ ನಡೆದಿದ್ದು, ಒಟ್ಟು 701 ಅಭ್ಯರ್ಥಿಗಳು ಗೈರಾಗಿದ್ದರು.

ಪರೀಕ್ಷೆಯು ಬಿಗಿ ಬಂದೋಬಸ್ತ್ ನಡುವೆ ಯಶಸ್ವಿಯಾಗಿ ನಡೆಯಿತು. ಪರೀಕ್ಷೆಗೆ ಒಟ್ಟು 8,326 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು.

‘1ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗುವ ಅರ್ಹತೆ ಗಳಿಸಲು ನೋಂದಾಯಿಸಿದ್ದ 3,629 ಅಭ್ಯರ್ಥಿ ಪೈಕಿ 3,266 ಮಂದಿ ಹಾಜರಿ, 363 ಮಂದಿ ಗೈರು ಹಾಗೂ 6ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗುವ ಅರ್ಹತೆ ಗಿಟ್ಟಿಸಲು ನೋಂದಾಯಿಸಿದ್ದ 4,697 ಅಭ್ಯರ್ಥಿ ‍ಪೈಕಿ 4,371 ಮಂದಿ ಹಾಜರಿ, 338 ಮಂದಿ ಗೈರಾಗಿದ್ದರು’ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

ಪರೀಕ್ಷೆ ಸಮಯದಲ್ಲಿ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿತ್ತು.

ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್-1 (1ರಿಂದ 5ನೇ ತರಗತಿ) ಮತ್ತು ಮಧ್ಯಾಹ್ನ 1.30ರಿಂದ ಸಂಜೆ 4.30 ರವರೆಗೆ ಪೇಪರ್-2 (6ರಿಂದ 8ನೇ ತರಗತಿ ) ಪರೀಕ್ಷೆ ನಡೆದವು.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕೋವಿಡ್ ಮಾರ್ಗಸೂಚಿ ಪಾಲಿಸಲಾಗಿದ್ದು, ಎಲ್ಲಾ ಪರೀಕ್ಷಾರ್ಥಿಗಳಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಿ ಒಳ ಬಿಡಲಾಯಿತು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಎರಡು ಹಂತದ ತಪಾಸಣೆಗೆ ಒಳಪಡಿಸಲಾಯಿತು.

ನಿಷೇಧವಿದ್ದರೂ ಕೆಲವು ಕೇಂದ್ರಗಳಲ್ಲಿ ಅಭ್ಯರ್ಥಿಗಳು ಶೂ, ಬೆಲ್ಟ್ ಹಾಕಿಕೊಂಡು ಒಳಬಂದಿದ್ದರು. ಅಂಥವರಿಗೆ ಪ್ರವೇಶ ನಿರಾಕರಿಸಲಾಯಿತು. ಪರೀಕ್ಷೆ ಬರೆದವರಲ್ಲಿ ಹೆಚ್ಚಿನವರು ಮಹಿಳಾ ಅಭ್ಯರ್ಥಿಗಳೇ ಇದ್ದದ್ದು ವಿಶೇಷವಾಗಿತ್ತು.

ಪರೀಕ್ಷಾ ಉಸ್ತುವಾರಿಯನ್ನು ಜಿಲ್ಲಾ ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಶಂಕರೇಗೌಡ, ಕೃಷ್ಣಪ್ಪ ವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು