ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶ್ಚಲ ಬೊಂಬೆಯ ವರ್ಣಮಯ ಕಥನ

Last Updated 2 ಅಕ್ಟೋಬರ್ 2022, 5:14 IST
ಅಕ್ಷರ ಗಾತ್ರ

ಮಾಲೂರು: ಬೊಂಬೆಗಳ ಸಿಂಗಾರವಿಲ್ಲದೆ ನವರಾತ್ರಿಯ ಸಂಭ್ರಮವಿಲ್ಲ. ಪುರಾಣ–ವರ್ತಮಾನವನ್ನು ಬೆಸೆಯುವ ಬೊಂಬೆಗಳು ಆಯುಧ ಪೂಜೆ ಮತ್ತು ವಿಜಯದಶಮಿಯ ಕಥೆಗಳನ್ನಷ್ಟೇ ಹೇಳುವುದಿಲ್ಲ. ಬದಲಿಗೆ ಸಮಕಾಲೀನ ಜಗತ್ತಿನ ವ್ಯಾಖ್ಯಾನವನ್ನೂ ಹೇಳುತ್ತವೆ.

ಮಾಲೂರಿನಲ್ಲಿ ಬೊಂಬೆಗಳ ನವರಾತ್ರಿಯ ಸಂಭ್ರಮ ಮೇಳೈಸಿದೆ. ಕಣ್ಣು ಕೋರೈಸುವಂತೆ ಹೊಳೆಯದಿದ್ದರೂ, ಬೆಳದಿಂಗಳ ತಂಪಿನಂತೆ ಹತ್ತಾರು ಮನೆಗಳು ಬೊಂಬೆ ಮನೆಗಳಾಗಿ ಬದಲಾಗಿವೆ. ಬೊಂಬೆಗಳ ಸಮ್ಮುಖದಲ್ಲಿ ನವರಾತ್ರಿಯ ಪೂಜೆ ರಂಗೇರಿದ್ದು, ಭಕ್ತಿ, ಶ್ರದ್ಧೆ ಮೇಳೈಸಿದೆ.

ಪಟ್ಟಣದ ಗಾಂಧಿ ಸರ್ಕಲ್ ಬಳಿಯ ವಿಜಯಲಕ್ಷ್ಮಿ ಪ್ರಕಾಶ್ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಮೈಸೂರು ಸಾಂಪ್ರದಾಯಿಕ ದಸರಾ ಬೊಂಬೆಗಳು ನೋಡುಗರ ಮನ ಸೆಳೆಯುತ್ತಿವೆ. ಅವರ ಮನೆಯಲ್ಲಿ ಬೊಂಬೆಗಳ ಲೋಕ ಅನಾವರಣಗೊಂಡಿದೆ. ಅವು ಕೇವಲ ಬೊಂಬೆಗಳಲ್ಲ. ಭಾರತದ ಪೌರಾಣಿಕ ಮತ್ತು ಚಾರಿತ್ರಿಕ ಕಥನಗಳನ್ನು ಸದ್ದಿಲ್ಲದೆ ಹೇಳುತ್ತವೆ. ಅಲ್ಲಿ ಸಮಕಾಲೀನ ವಸ್ತುಸ್ಥಿತಿ ಮತ್ತು ಭವಿಷ್ಯದ ದರ್ಶನ ಕಾಣುತ್ತದೆ.

ರಾಮಾಯಣ, ಮಹಾಭಾರತ, ಶ್ರೀಕೃಷ್ಣ ಲೀಲೆ, ಗೀತೋಪದೇಶ, ಜಂಬೂಸವಾರಿ, ದಶಾವತಾರದ ಕಥನಗಳನ್ನು ಹೇಳುವ ಬೊಂಬೆಗಳ ಜೊತೆಗೆ, ತಿರುಪತಿಯ 9 ದಿನದ ಬ್ರಹ್ಮೋತ್ಸವ, ಭಾರತೀಯ ಸಮಾಜದ ಕುಟುಂಬ ಜೀವನದ ಚಕ್ರ, ವಿವಿಧ ರಾಜ್ಯದ ಮಹಿಳೆಯರ ಉಡುಪಿನ ವಿಶೇಷತೆ ಸಾರುವ ಬೊಂಬೆಗಳಿವೆ. ಇನ್ನೂ ಹತ್ತಿರ ಬಂದರೆ ಕೈಗಾರಿಕೀಕರಣಕ್ಕೆ ತೆರೆದುಕೊಂಡಿರುವ ತಾಲ್ಲೂಕು ಭವಿಷ್ಯದಲ್ಲಿ ಬದಲಾಗಬಹುದಾದ ರೀತಿಯ ಬಗ್ಗೆಯೂ ಬೊಂಬೆಗಳಲ್ಲಿಕಲ್ಪನಾ ವಿಲಾಸ ಮೈದಳೆದಿದೆ. ಗ್ರಾಮ ಸಂಸ್ಕೃತಿ ಮರೆಯಾಗಿ ಕೈಗಾರಿಕಾ ಸಂಸ್ಕೃತಿಯನ್ನು ವೈಭವವೀಕರಿಸುವ ನಗರ ಜೀವನಶೈಲಿ ಕುರಿತ ಸ್ಪಷ್ಟ ಚಿತ್ರಣವನ್ನೂ ತೆರೆದಿಟ್ಟಿವೆ.

ಈ ಮನೆಯಲ್ಲಿ ಒಪ್ಪವಾಗಿ ಜೋಡಿಸಲಾಗಿರುವ ಬೊಂಬೆಗಳು ಮೂರು ಕಾಲದ ಕಥೆಯನ್ನು ನೋಡುಗರ ಹೃದಯಕ್ಕೆ ಇಳಿಸುತ್ತವೆ.

1950ರಿಂದಲೂ ಬೊಂಬೆ ಕೂರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿರುವ ವಿಜಯಲಕ್ಷ್ಮಿ ಪ್ರಕಾಶ್ ಅವರ ಮನೆಯಲ್ಲಿ ಈಗ ಸುಮಾರು 2 ಸಾವಿರಕ್ಕೂ ಹೆಚ್ಚು ಗೊಂಬೆಗಳಿವೆ. ಇವುಗಳನ್ನು ಜೋಡಿಸುವುದರಲ್ಲಿ ಕುಟುಂಬದ ಸದಸ್ಯರ ಉತ್ಸಾಹ ಮತ್ತು ಶ್ರದ್ಧೆ ಎದ್ದು ಕಾಣುತ್ತದೆ.

‘ಬೊಂಬೆ ಕೂರಿಸುವುದು ಸಂಪ್ರದಾಯದ ಮುಂದುವರಿಕೆಯಷ್ಟೇ ಅಲ್ಲ. ಅದು ಹಬ್ಬದ ನೆಪದಲ್ಲಿ ಮನೆ ಮಂದಿ ಎಲ್ಲರೂ ಒಟ್ಟಾಗಿ ಸೌಹಾರ್ದವನ್ನು ಇನ್ನಷ್ಟು ಗಟ್ಟಿಗಳಿಸಿಕೊಳ್ಳುವುದಾಗಿದೆ’ ಎನ್ನುತ್ತಾರೆ ವಿಜಯಲಕ್ಷ್ಮಿ ಪ್ರಕಾಶ್.

ಇದು ಒಂದು ಕುಟುಂಬದ ಉದಾಹರಣೆ ಅಷ್ಟೇ. ಪಟ್ಟಣದಲ್ಲಿ ಇಂಥ ಹಲವು ಮನೆಗಳಲ್ಲಿ ಗೊಂಬೆಗಳ ಲೋಕವನ್ನು ವರ್ಷವಿಡೀ ಮನೆಯ ಪೆಟ್ಟಿಗೆಗಳಲ್ಲಿ ಬೆಚ್ಚಗಿಟ್ಟು ನವರಾತ್ರಿ ವೇಳೆ ತೆರೆದು ಹೊಸ ಬೆಳಕು, ಹೊಸ ಬದುಕಿಗೆ ತೋರಣ ಕಟ್ಟುತ್ತಾರೆ. ಎದ್ದು ಕಾಣುವ ವಿಜೃಂಭಣೆ ಇಲ್ಲಿಲ್ಲ ನಿಜ. ಆದರೆ, ಸಂಪ್ರದಾಯದ ನೆರಳಲ್ಲಿ ಭರವಸೆಯ ಕಿರಣವಿದೆ.

ಬರಗಾಲದ ನಡುವೆ ಮನೆಗೆ ನುಗ್ಗುವ ಮಳೆ ನೀರು, ರಾಜಕಾಲುವೆ ಕಸದ ದುರ್ವಾಸನೆ, ನೀರಿಗಾಗಿ ಪರದಾಟದ ಚಿತ್ರಗಳ ನಡುವೆಯೇ ಎಂದಿನ ಜಾಗವನ್ನು ಕಂಡುಕೊಂಡಿರುವ ನಿಶ್ಚಲ ಬೊಂಬೆಗಳ ವರ್ಣಮಯ ಕಥನ ಲೋಕವು ಹಲವು ಕುಟುಂಬಗಳನ್ನು ಆವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT