ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಚರಂಡಿ ನೀರಿನಲ್ಲಿ ಸಮಗ್ರ ಕೃಷಿ ಕ್ರಾಂತಿ

ಬರಪೀಡಿತ ಜಿಲ್ಲೆಯಲ್ಲಿ ಪಾರ್ಶ್ವಗಾನಹಳ್ಳಿ ರೈತನ ವಿನೂತನ ಪ್ರಯತ್ನ
Last Updated 21 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ಜೀವಜಲದ ನೆಪ ಮಾಡಿಕೊಂಡು ಊರು ಬಿಟ್ಟ ಅನ್ನದಾತರು ಹಲವರು... ಜಲಕ್ಷಾಮದ ಸವಾಲು ಗೆದ್ದು ದಡ ಸೇರಿದವರು ಕೆಲವರು... ಅಂತಹ ಸಾಧಕರ ಸಾಲಿನಲ್ಲಿ ನಿಲ್ಲುವ ತಾಲ್ಲೂಕಿನ ಪಾರ್ಶ್ವಗಾನಹಳ್ಳಿಯ ರೈತ ನಾರಾಯಣಪ್ಪ ಗ್ರಾಮದ ಚರಂಡಿ ನೀರಿನಲ್ಲೇ ಕೃಷಿ ಕ್ರಾಂತಿ ಮಾಡಿದ ಹರಿಕಾರ.

ನಾಡಿಗೆ ಚಿನ್ನ, ಹಾಲು, ರೇಷ್ಮೆ ಕೊಟ್ಟ ಜಿಲ್ಲೆಯಲ್ಲಿ ಕೃಷಿ ನಿರ್ವಹಣೆ ಸುಲಭದ ಮಾತಲ್ಲ. ಬರವನ್ನೇ ಬೆನ್ನಿಗೆ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಜೀವಜಲ ಅಮೃತಕ್ಕೆ ಸಮ. ಕುಡಿಯುವ ನೀರು ಸಿಗುವುದೇ ದುಸ್ತರವಾಗಿರುವಾಗ ಕೃಷಿ ನಿರ್ವಹಣೆ ಸಮುದ್ರ ಅಲೆಗಳಿಗೆ ವಿರುದ್ಧವಾಗಿ ಈಜಿದಷ್ಟೇ ಪರಿಶ್ರಮದ ಕೆಲಸ.

ಜಿಲ್ಲೆಯಲ್ಲಿ ನದಿ, ಹೊಳೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ಇಲ್ಲಿ ಅಂತರ್ಜಲವೇ ಕೃಷಿ ಮತ್ತು ಕುಡಿಯುವುದಕ್ಕೆ ಆಧಾರ. ಭೂಗರ್ಭದ ನೀರನ್ನು ಹೊರ ತೆಗೆದು ಕೃಷಿ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಜತೆಗೆ ಮಳೆಯಾಶ್ರಿತ ಕೃಷಿಯೂ ಇದೆ.

ಜಿಲ್ಲೆಯ ರೈತರು ಕೃಷಿ ಚಟುವಟಿಕೆಗೆ ಅಂತರ್ಜಲವನ್ನು ಮಿತಿ ಮೀರಿ ಬಳಸಿದ್ದು, ಭೂಗರ್ಭ ಬರಿದಾಗಿದೆ. 1,800 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಮತ್ತೊಂದೆಡೆ ಕೊಳವೆ ಬಾವಿಗಳಲ್ಲೂ ನೀರು ಬತ್ತಿದ್ದು, ಅನ್ನದಾತರು ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

ಆದರೆ, ರೈತ ನಾರಾಯಣಪ್ಪ ಅವರಿಗೆ ಆ ಚಿಂತೆಯಿಲ್ಲ. ಕೃಷಿ ಇಲಾಖೆ ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿರುವ ಅವರು ಕೃಷಿ ಚಟುವಟಿಕೆಗಳಿಗೆ ಬೇಕಾಗುವಷ್ಟು ಮಳೆ ನೀರು ಸಂಗ್ರಹ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಗ್ರಾಮದ ಮನೆಗಳಿಂದ ಹರಿದು ಬರುವ ಕೊಳಚೆ ನೀರನ್ನು ವ್ಯರ್ಥವಾಗಲು ಬಿಡದೆ ಕೃಷಿಗೆ ಬಳಸುತ್ತಿದ್ದಾರೆ.

ಕೃಷಿಯಿಂದ ವಿಮುಖ: ಸುಮಾರು 150 ಮನೆಗಳಿರುವ ಪಾರ್ಶ್ವಗಾನಹಳ್ಳಿಯ ಜನಸಂಖ್ಯೆ 600ರ ಗಡಿ ದಾಟಿಲ್ಲ. ದಶಕದ ಹಿಂದೆ ಈ ಗ್ರಾಮದಲ್ಲಿ 150ಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದವು. ಆದರೆ, ಈಗ ನೀರು ಲಭ್ಯವಿರುವ ಕೊಳವೆ ಬಾವಿಗಳ ಸಂಖ್ಯೆ ಕೇವಲ 20. ಜಿಲ್ಲೆಯ ಇತರೆ ಗ್ರಾಮಗಳಂತೆ ಇಲ್ಲಿಯೂ ನೀರಿನ ಸಮಸ್ಯೆ ಗಂಭೀರವಾಗಿದ್ದು, ದಿನದಿಂದ ದಿನಕ್ಕೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.

ನಾರಾಯಣಪ್ಪ ಸಹ ಒಂದು ಕಾಲಕ್ಕೆ ಇತರೆ ರೈತರಂತೆಯೇ 12 ಕೊಳವೆ ಬಾವಿ ಕೊರೆಸಿ ನಷ್ಟ ಅನುಭವಿಸಿದವರು. ಅಲ್ಲದೇ, ಕೊಳವೆ ಬಾವಿ ಕೊರೆಸಲು ಮಾಡಿದ್ದ ಬಡ್ಡಿ ಸಾಲ ತೀರಿಸಲು ಮಾವಿನ ತೋಟವನ್ನೇ ಮಾರಿ ಸಂಕಷ್ಟಕ್ಕೆ ಸಿಲುಕಿದವರು. ತುತ್ತಿನ ಚೀಲ ತುಂಬಿಸಲು ಬೇರೆ ದಾರಿ ಕಾಣದಾದಾಗ ಟೀ ಅಂಗಡಿ ಇಟ್ಟು, ಆ ಪ್ರಯತ್ನದಲ್ಲೂ ವಿಫಲವಾದರು. ಅಂತಿಮವಾಗಿ ಅವರ ತಲೆಗೆ ಬಂದಿದ್ದು ಮಳೆ ನೀರಿನ ಸಂರಕ್ಷಣೆ ಮತ್ತು ಗ್ರಾಮದ ಚರಂಡಿ ನೀರನ್ನು ಕೃಷಿಗೆ ಬಳಸುವ ಉಪಾಯ.

ಸಮಗ್ರ ಕೃಷಿ: ನಾರಾಯಣಪ್ಪ, ಗ್ರಾಮದ ಕೊಳಚೆ ನೀರಿನ ಕಾಲುವೆಯ ಅಂತ್ಯದಲ್ಲಿ ಪೈಪ್‌ ಅಳವಡಿಸಿ ತಮ್ಮ ಜಮೀನಿನ ಮಧ್ಯದ ಗುಂಡಿಗೆ ಹರಿದು ಬರುವಂತೆ ಮಾಡಿದ್ದಾರೆ. ಸುಮಾರು 10 ಅಡಿ ಆಳದ ಈ ಗುಂಡಿ ತುಂಬಿದಾಗ ಪಂಪ್‌ ಮತ್ತು ಮೋಟರ್‌ನ ಸಹಾಯದಿಂದ ಅಲ್ಲಿನ ನೀರನ್ನು ಪೈಪ್‌ನ ಮೂಲಕ ಕೃಷಿ ಹೊಂಡಕ್ಕೆ ಹರಿಸುತ್ತಾರೆ.

ಕೃಷಿ ಹೊಂಡದ ನೀರನ್ನೇ ಆಶ್ರಯಿಸಿ ತಮ್ಮ ಮನೆಯ ಪಕ್ಕದಲ್ಲೇ 6 ಎಕರೆ ಜಮೀನನಲ್ಲಿ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಹಿಪ್ಪು ನೇರಳೆ ಬೆಳೆದು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಅಲ್ಲದೇ, ಮಾವು, ರಕ್ತಚಂದನ, ಮಹಾಗನಿ, ನಿಂಬೆ, ಜಂಬು ನೇರಳೆ, ಸಪೋಟ, ಹೆಬ್ಬೇವು, ಹೊನ್ನೆ, ಕರಿಬೇವು ಬೆಳೆದಿದ್ದಾರೆ.

ಕೃಷಿಯ ಜತೆಗೆ ಹಸು, ಕುರಿಗಳನ್ನು ಸಾಕಿದ್ದಾರೆ. ಕೋಳಿ ಸಾಕಾಣಿಕೆಯೂ ನಡೆದಿದೆ. ಹಸು ಮತ್ತು ಕುರಿಗಳ ಮೇವಿಗಾಗಿ ಹಿಪ್ಪು ನೇರಳೆ ಗಿಡಗಳ ಮಧ್ಯೆ ರಾಗಿ ಹಾಗೂ ಜೋಳ ಬೆಳೆಯುತ್ತಿದ್ದಾರೆ. ಅಂತರ ಬೆಳೆಯಾಗಿ ಸಾಮೆ, ನವಣೆ, ಆಲೂಗಡ್ಡೆ, ಟೊಮೆಟೊ ಬೆಳೆಯುತ್ತಾರೆ. ಮಳೆಗಾಲದಲ್ಲಿ ಕೃಷಿ ಹೊಂಡದಲ್ಲಿ ಮಳೆ ನೀರಿನ ಸಂಗ್ರಹ, ಮಳೆಗಾಲ ಮುಗಿದಾಗ ಗ್ರಾಮದ ಚರಂಡಿ ನೀರಿನ ಶೇಖರಣೆ ಸದ್ದಿಲ್ಲದೆ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT