ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕತ್ತಲುಮಯ ರಾತ್ರಿಯ ದುಸ್ತರ ಬದುಕು

ಹಳಿ ತಪ್ಪಿದ ಬೀದಿ ದೀಪ ನಿರ್ವಹಣೆ ಪ್ರಕ್ರಿಯೆ: ನಗರವಾಸಿಗಳಲ್ಲಿ ಮನೆ ಮಾಡಿದ ಭಯ
Last Updated 27 ಜೂನ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ನಗರದ ಬಹುಪಾಲು ಬಡಾವಣೆಗಳಲ್ಲಿ ಬೀದಿ ದೀಪ ನಿರ್ವಹಣೆ ಪ್ರಕ್ರಿಯೆ ಹಳಿ ತಪ್ಪಿದ್ದು, ನಗರವಾಸಿಗಳಿಗೆ ರಾತ್ರಿಯ ಕತ್ತಲುಮಯ ಬದುಕು ದುಸ್ತರವಾಗಿದೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ ಸದ್ಯ 35 ವಾರ್ಡ್‌ಗಳಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿ ಬೆಳೆದಿದೆ. ನಗರ ವಿಸ್ತಾರವಾದಂತೆ ಹೊಸ ವಸತಿ ಬಡಾವಣೆಗಳು ತಲೆ ಎತ್ತುತ್ತಿದ್ದು, ಜನಸಂಖ್ಯೆ ವೃದ್ಧಿಸುತ್ತಿದೆ.

ನಗರಸಭೆಯ ಜನರ ಹಿತದೃಷ್ಟಿಯಿಂದ ಬಹುತೇಕ ವಸತಿ ಬಡಾವಣೆಗಳಲ್ಲಿ ಬೀದಿ ದೀಪ ಹಾಕಿದೆ. ನಗರಸಭೆ ವ್ಯಾಪ್ತಿಯಲ್ಲಿ 7 ಸಾವಿರಕ್ಕೂ ಹೆಚ್ಚು ಬೀದಿ ದೀಪಗಳಿದ್ದು, ಇವುಗಳ ನಿರ್ವಹಣೆಗೆ ಪ್ರತಿ ವರ್ಷ ಟೆಂಡರ್‌ ನಡೆಸಲಾಗುತ್ತದೆ. ಟೆಂಡರ್‌ ಪಡೆಯುವ ಗುತ್ತಿಗೆದಾರರು ನಿಯಮಿತವಾಗಿ ಬೀದಿ ದೀಪ ಪರಿಶೀಲಿಸಿ ದುರಸ್ತಿ ಮಾಡಬೇಕು. ಕೆಟ್ಟು ಹೋದ ಬಲ್ಬ್‌, ಚೋಕ್‌ ಮತ್ತು ಹಳೆಯ ವಿದ್ಯುತ್‌ ತಂತಿ ಬದಲಿಸುವುದು ಗುತ್ತಿಗೆದಾರರ ಜವಾಬ್ದಾರಿ.

ನಗರದ 1ನೇ ವಾರ್ಡ್‌ನಿಂದ 21ನೇ ವಾರ್ಡ್‌ವರೆಗೆ ಒಬ್ಬ ಗುತ್ತಿಗೆದಾರರಿಗೆ ಹಾಗೂ 22ನೇ ವಾರ್ಡ್‌ನಿಂದ 35ನೇ ವಾರ್ಡ್‌ವರೆಗೆ ಮತ್ತೊಬ್ಬ ಗುತ್ತಿಗೆದಾರರಿಗೆ ಬೀದಿ ದೀಪ ನಿರ್ವಹಣೆಯ ಟೆಂಡರ್‌ ನೀಡಲಾಗಿದೆ. ನಗರಸಭೆಯು ಬಿಲ್‌ ಪಾವತಿಸದ ಕಾರಣ ಗುತ್ತಿಗೆದಾರರು ಬೀದಿ ದೀಪ ನಿರ್ವಹಣೆಗೆ ಆಸಕ್ತಿ ತೋರುತ್ತಿಲ್ಲ.

ಬಹುತೇಕ ಬೀದಿ ದೀಪಗಳು ಕೆಟ್ಟು ವರ್ಷವೇ ಕಳೆದಿದ್ದು, ದುರಸ್ತಿಗೆ ಕಾಲ ಕೂಡಿ ಬಂದಿಲ್ಲ. ವಾಣಿಜ್ಯ ಪ್ರದೇಶ ಹಾಗೂ ಜನವಸತಿ ಪ್ರದೇಶಗಳಲ್ಲಿ ರಾತ್ರಿ ವೇಳೆ ಬೀದಿ ದೀಪಗಳಿಲ್ಲದೆ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಮಹಿಳೆಯರು ಹಾಗೂ ವಯೋವೃದ್ಧರೂ ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿಯಿದೆ.

ಅಪರಾಧ ಹೆಚ್ಚಳ: ನಗರದ ಕತ್ತಲುಮಯ ವಾತಾವರಣವು ಅಪರಾಧ ಕೃತ್ಯಗಳಿಗೆ ದಾರಿ ಮಾಡಿಕೊಟ್ಟಿದೆ. ಸರಗಳ್ಳರು, ಕಳ್ಳರು ಪರಿಸ್ಥಿತಿಯ ಲಾಭ ಪಡೆದು ಕೈಚಳಕ ತೋರುತ್ತಿದ್ದಾರೆ. ಅಪರಾದ ಕೃತ್ಯಗಳು ನಡೆಯುತ್ತಿದ್ದು, ನಗರವಾಸಿಗಳಲ್ಲಿ ಭಯ ಮನೆ ಮಾಡಿದೆ. ಪೊಲೀಸರು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದರೂ ಕತ್ತಲುಮಯ ವಾತಾವರಣ ಕಳ್ಳರಿಗೆ ವರದಾನವಾಗಿದೆ.

ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಹಾಗೂ ರಸ್ತೆ ಕಾಮಗಾರಿಯಿಂದ ರಸ್ತೆಗಳ ಚಿತ್ರಣವೇ ಬದಲಾಗಿದೆ. ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ರಸ್ತೆಗಳು ಗುಂಡಿಮಯವಾಗಿವೆ. ಬೀದಿ ದೀಪವಿಲ್ಲದ ಭಾಗದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಆಗಾಗ್ಗೆ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿವೆ.

ಹಣ ಪೋಲು: ಬೀದಿ ದೀಪಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿರುವ ಬೆಸ್ಕಾಂಗೆ ನಗರಸಭೆ ವತಿಯಿಂದ ತಿಂಗಳಿಗೆ ಸರಾಸರಿ ₹ 25 ಲಕ್ಷ ವಿದ್ಯುತ್‌ ಬಿಲ್‌ ಪಾವತಿಸಲಾಗುತ್ತಿದೆ. ಕೆಲ ಬಡಾವಣೆಗಳಲ್ಲಿ ದಿನದ 24 ತಾಸೂ ಬೀದಿ ದೀಪ ಉರಿಯುತ್ತಲೇ ಇರುತ್ತವೆ. ಹಗಲು ವೇಳೆಯಲ್ಲೂ ಅವುಗಳನ್ನು ಬಂದ್ ಮಾಡುವುದಿಲ್ಲ. ಹೀಗಾಗಿ ವಿದ್ಯುತ್‌ ಬಳಕೆ ಪ್ರಮಾಣ ಹೆಚ್ಚಿದೆ. ವಿದ್ಯುತ್‌ ಶುಲ್ಕ ಪಾವತಿಗೆ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ: ಕೆಟ್ಟಿರುವ ಬೀದಿ ದೀಪಗಳನ್ನು ಬದಲಿಸುವಂತೆ ಹಾಗೂ ಉರಿಯದ ಬೀದಿ ದೀಪಗಳನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ನಗರಸಭೆ ಸಹಾಯವಾಣಿಗೆ ಮೇಲಿಂದ ಮೇಲೆ ದೂರು ಕೊಡುತ್ತಿದ್ದಾರೆ. ಮತ್ತೊಂದೆಡೆ ನಗರಸಭೆ ಸದಸ್ಯರು ತಮ್ಮ ವಾರ್ಡ್‌ ವ್ಯಾಪ್ತಿಯ ಬೀದಿ ದೀಪಗಳ ದುರಸ್ತಿಗಾಗಿ ನಗರಸಭೆ ಬಾಗಿಲಿಗೆ ಅಲೆಯುವಂತಾಗಿದೆ. ಆದರೆ, ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ನಗರಸಭೆಯು ಬೀದಿ ದೀಪ ನಿರ್ವಹಣೆಯ ಗುತ್ತಿಗೆದಾರರಿಗೆ ಕೆಲ ಷರತ್ತು ವಿಧಿಸಿ ಟೆಂಡರ್‌ ನೀಡಿದೆ. ಆದರೆ, ಈ ಷರತ್ತುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಸಾರ್ವಜನಿಕರು ಬೀದಿ ದೀಪದ ಸಮಸ್ಯೆ ಹೇಳಿದರೂ ಗುತ್ತಿಗೆದಾರರು ಸಮಸ್ಯೆಗೆ ಸ್ಪಂದಿಸುವುದಿಲ್ಲ. ನಗರಸಭೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರೂ ಗುತ್ತಿಗೆದಾರರು ಬೀದಿ ದೀಪ ದುರಸ್ತಿಗೆ ಮೀನಮೇಷ ಎಣಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT