ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಹಬ್ಬದಲ್ಲಿ ಸಾಹಿತ್ಯಾಸಕ್ತರ ದಂಡು

ಸಮ್ಮೇಳನಾಧ್ಯಕ್ಷರ ಪಲ್ಲಕ್ಕಿ ಮೆರವಣಿಗೆ: ನಾಡು– ನುಡಿ ಪರ ಘೋಷಣೆ
Last Updated 16 ಜನವರಿ 2020, 19:45 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಗುರುವಾರ ಆರಂಭವಾದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದ ಸಾಹಿತ್ಯಾಸಕ್ತರ ದಂಡೇ ಹರಿದುಬಂದಿತು. ಜಿಲ್ಲೆಯ ಸಾಹಿತಿಗಳು, ಚಿಂತಕರು, ಶಿಕ್ಷಕರು ನುಡಿ ಹಬ್ಬಕ್ಕೆ ಮೆರುಗು ತುಂಬಿದರು.

ಟಿ.ಚನ್ನಯ್ಯ ರಂಗಮಂದಿರ ಆವರಣದಲ್ಲಿ ಬೆಳಿಗ್ಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಕೆ.ಪ್ರಹ್ಲಾದರಾವ್‌ ನಾಡಧ್ವಜ ಹಾಗೂ ಹಾಲಿ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಸಮ್ಮೇಳನಾಧ್ಯಕ್ಷರಾದ ಮಕ್ಕಳ ಸಾಹಿತಿ ಸಿ.ಎಂ.ಗೋವಿಂದರೆಡ್ಡಿ ಅವರನ್ನು ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಮೆರವಣಿಗೆ ಉದ್ಘಾಟಿಸಿದರು. ಡೊಳ್ಳು ಕಲಾವಿದರು, ಶಾಲಾ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಭಾರತ ಸೇವಾದಳ ಸದಸ್ಯರು ಮೆರವಣಿಗೆಗೆ ಮೆರುಗು ನೀಡಿದರು.

ಮೆರವಣಿಗೆಯು ಬಂಗಾರಪೇಟೆ ರಸ್ತೆ, ವಾಲ್ಮೀಕಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸರ್ವಜ್ಞ ಉದ್ಯಾನ, ಎಂ.ಜಿ.ರಸ್ತೆ ಮಾರ್ಗವಾಗಿ ಸಾಗಿ ಟಿ.ಚನ್ನಯ್ಯ ರಂಗಮಂದಿರದ ಬಳಿ ಅಂತ್ಯಗೊಂಡಿತು. ಸಮ್ಮೇಳನಾಧ್ಯಕ್ಷರ ಜತೆ ಪರಿಷತ್‌ನ ಪದಾಧಿಕಾರಿಗಳು ಹಾಗೂ ಸಾಹಿತಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆ ಉದ್ದಕ್ಕೂ ಕನ್ನಡ ನಾಡು ಹಾಗೂ ಸಮ್ಮೇಳನಾಧ್ಯಕ್ಷರ ಪರ ಘೋಷಣೆ ಕೂಗಲಾಯಿತು. ಕಣ್ಣು ಹಾಯಿಸದಲ್ಲೆಲ್ಲಾ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು.

ಪುಸ್ತಕ ಪ್ರದರ್ಶನ: ರಂಗಮಂದಿರವು ಸಾಹಿತ್ಯಾಸಕ್ತರಿಂದ ತುಂಬಿ ಹೋಗಿತ್ತು. ರಂಗಮಂದಿರದ ಹಾಗೂ ಮುಂಭಾಗದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು. ಸಾಹಿತ್ಯಾಸಕ್ತರು ಪುಸ್ತಕ ಕೊಳ್ಳಲು ಮಳಿಗೆಗಳಿಗೆ ಮುಗಿಬಿದ್ದರು. ಸಮೀಪದಲ್ಲೇ ಗೃಹಾಲಂಕಾರ ಸಾಮಗ್ರಿಗಳು, ಖಾದಿ ವಸ್ತ್ರಗಳು, ಆಯುರ್ವೇದ ಔಷಧಗಳ ಮಳಿಗೆಗಳನ್ನು ತೆರೆಯಲಾಗಿತ್ತು.

ಸಮ್ಮೇಳನಕ್ಕೆ ಬಂದಿದ್ದ ಗಣ್ಯರು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಹಾಲಿಸ್ಟರ್‌ ಸಭಾಂಗಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಉಪಹಾರಕ್ಕೆ ದೋಸೆ, ಪೊಂಗಲ್‌, ಮಧ್ಯಾಹ್ನದ ಊಟಕ್ಕೆ ಹೋಳಿಗೆ, ಅನ್ನ ಸಾಂಬರು, ಮುದ್ದೆ, ಕೋಸಂಬರಿ, ರಾತ್ರಿ ಊಟಕ್ಕೆ ಅನ್ನ ಸಾಂಬರು ಮತ್ತು ಪಲಾವ್‌ ಖಾದ್ಯಗಳನ್ನು ಮಾಡಿಸಲಾಗಿತ್ತು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾದಸ್ವರ ವಿದ್ವಾನ್‌ ಕೆ.ಎನ್‌.ಉಷಾ ಮತ್ತು ಕಲಾವಿದರು ವಾದ್ಯಗೋಷ್ಠಿ ನಡೆಸಿಕೊಟ್ಟರು. ಬೆಂಗಳೂರಿನ ರಂಗಮಂಟಪ ತಂಡದ ಕಲಾವಿದರು ‘ಮಲ್ಲಿಗೆ’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT