ಮಂಗಳವಾರ, ನವೆಂಬರ್ 24, 2020
19 °C

ಬೆಮಲ್‌ ಬಳಸದ ಜಮೀನು: ಕೈಗಾರಿಕೆ ಸ್ಥಾಪನೆಗೆ ನಕ್ಷೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಕೈಗಾರಿಕೆ ಸ್ಥಾಪನೆ ಮಾಡಲು ಬೆಮಲ್‌ ಕಾರ್ಖಾನೆಯು ಉಪಯೋಗಿಸದೆ ಇರುವ ಪ್ರದೇಶಗಳನ್ನು ಗುರ್ತಿಸಲಾಗಿದ್ದು, ಸರ್ವೇ ನಡೆಸಿದ ಖಾಸಗಿ ಸಂಸ್ಥೆಯು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪ್ರದೇಶದ ವ್ಯಾಪ್ತಿಯ ನಕ್ಷೆ ನೀಡಿದೆ.

ಬೆಮಲ್‌ ಕಾರ್ಖಾನೆಗೆ ರಾಜ್ಯ ಸರ್ಕಾರ 1,800ಕ್ಕೂ ಹೆಚ್ಚು ಎಕರೆ ಜಮೀನು ನೀಡಿತ್ತು. ಈ ಪೈಕಿ ಕಾರ್ಖಾನೆಯು 976 ಎಕರೆ ಜಮೀನನ್ನು ಉಪಯೋಗಿಸದೆ ಇಟ್ಟುಕೊಂಡಿತ್ತು. ಈ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕಿ ಎಂ. ರೂಪಕಲಾ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸ್ಥಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದರು. ನಂತರ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ಕೈಗಾರಿಕೆಗೆ ಉದ್ದೇಶಿಸಲಾಗಿರುವ ಜಾಗದ ಪರಿಶೀಲನೆ ಮಾಡಿದ್ದರು.

ಉಪಯೋಗಿಸದೆ ಇರುವ ಜಾಗಗಳನ್ನು ನಿಖರವಾಗಿ ಗುರ್ತಿಸಿ, ನಕ್ಷೆ ನೀಡಲು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಸುಮಾರು ಎರಡು ತಿಂಗಳ ಕಾಲ ಸರ್ವೇ ಮಾಡಿದ ಖಾಸಗಿ ಸಂಸ್ಥೆಯು ಅಂತಿಮ ನಕ್ಷೆಯನ್ನು ಕಂದಾಯ ಇಲಾಖೆಗೆ ನೀಡಿದೆ. ಸರ್ವೇ ನಂಬರ್ 2 ಮತ್ತು 3ರಲ್ಲಿ ಸುಮಾರು 920 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಇನ್ನೂ ಕೆಲವು ಜಾಗಗಳ ನಿಖರ ಗುರ್ತಿಸುವಿಕೆ ಆಗಬೇಕಾಗಿದೆ.

ಬೆಮಲ್ ಎ ಟೈಪ್‌ ವಸತಿಗೃಹದ ಹಿಂಭಾಗದಿಂದ ಅಜ್ಜಪಲ್ಲಿ ಗ್ರಾಮದ ರಸ್ತೆವರೆಗೆ, ಬೆಮಲ್‌ ಕ್ರೀಡಾಂಗಣದ ಹಿಂಭಾಗ, ಗಾಲ್ಫ್ ಮೈದಾನದ ಪ್ರದೇಶ ಮತ್ತು ಬೆಮಲ್‌ ಆಫೀಸರ್ಸ್‌ ಕ್ವಾಟರ್ಸ್‌ ಬಳಿ ನೂತನವಾಗಿ ನಿರ್ಮಿಸಿರುವ ಉದ್ಯಾನ ಈ ಪ್ರದೇಶದ ವ್ಯಾಪ್ತಿಗೆ ಬರಲಿದೆ. ಈ ಜಾಗದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಕ್ಷೆ ಹಾಕಿದ್ದು, ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯು ಬಂಗಾರದ ಗಣಿ ಎಂಬ ಹೊಸ ಗ್ರಾಮವನ್ನು ಪಹಣಿಗೆ ಹತ್ತಿಸಲಾಗಿದೆ. ಪಹಣಿಯಲ್ಲಿರುವ ಪ್ರದೇಶ ಮತ್ತು ನಕ್ಷೆಯನ್ನು ಕೈಗಾರಿಕೆ ಇಲಾಖೆಗೆ ಶೀಘ್ರವೇ ಹಸ್ತಾಂತರಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು