ಕೋಲಾರ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ–75ರ ಟಮಕ ಬಳಿ ಸರ್ವಿಸ್ ರಸ್ತೆ ಬದಿಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾದ ಸೂಟ್‌ಕೇಸ್ ಸೃಷ್ಟಿಸಿದ ಆತಂಕದಿಂದಾಗಿ ಜಿಲ್ಲಾ ಪೊಲೀಸರು ಸತತ ಐದು ಗಂಟೆ ಕಾರ್ಯಾಚರಣೆ ನಡೆಸಬೇಕಾಯಿತು.
ಬೆಂಗಳೂರಿನ ಬಾಂಬ್ ನಿಷ್ಕ್ರಿಯ ದಳದವರು ಕಾರ್ಡೆಕ್ಸ್ ಮೂಲಕ ಲಘು ಸ್ಫೋಟ ಮಾಡಿ ನಾಶಗೊಳಿಸಿದರು. ಜೋರಾಗಿ ಶಬ್ದ ಬಂದು ಹೊಗೆ ಆವರಿಸಿಕೊಂಡಿತು. ಕೆಲ ನಿಮಿಷಗಳಲ್ಲಿ ಜನರು ನಿಟ್ಟುಸಿರು ಬಿಟ್ಟರು. ಸೂಟ್‌ಕೇಸ್‌ನೊಳಗೆ ಯಾವುದೇ ಸ್ಫೋಟಕವಾಗಲಿ, ಬಾಂಬ್ ಆಗಲಿ ಇರಲಿಲ್ಲ. ಇದು ಸ್ಮಾರ್ಟ್ ಸೂಟ್‌ಕೇಸ್ ಆಗಿದ್ದು, ಕೆಲ ಎಲೆಕ್ಟ್ರಿಕ್ ಉಪಕರಣ ಅಳವಡಿಸಿದ್ದು ಸ್ಫೋಟಕ್ಕೆ ಚೂರುಚೂರಾಗಿದ್ದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕಿಲ್ ಬಿ. ನೇತೃದಲ್ಲಿ ಜಿಲ್ಲಾ ಪೊಲೀಸರು, ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದವರು, ಅಗ್ನಿಶಾಮಕದ ದಳದವರು, ಬೆಸ್ಕಾಂ ಸಿಬ್ಬಂದಿ ಸಮಾರೋಪಾದಿಯಲ್ಲಿ ವಿವಿಧ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಆ್ಯಂಬುಲೆನ್ಸ್, ಜೆಸಿಬಿಯನ್ನೂ ಸ್ಥಳಕ್ಕೆ ತರಿಸಲಾಗಿತ್ತು.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಸೂಟ್‍ಕೇಸ್ ಕಂಡುಬಂದಿದ್ದು, ಅದರಲ್ಲಿ ಬೀಪ್ ಶಬ್ದವೂ ಬರುತ್ತಿತ್ತು. ಕೆಲ ಕಾಲ ಕುತೂಹಲದಿಂದ ನೋಡುತ್ತಿದ್ದ ಸಾರ್ವಜನಿಕರು ಕೂಡಲೇ ಪೊಲೀಸ್ ಕಂಟ್ರೋಲ್ ಕೊಠಡಿಗೆ ಮಾಹಿತಿ ನೀಡಿದರು. ತಕ್ಷಣವೇ ಗಲ್‍ಪೇಟೆ ಠಾಣೆ ಪೊಲೀಸರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ಥಳಕ್ಕೆ ಬಂದರು.
ಅಷ್ಟರಲ್ಲಿ ಸುತ್ತಮುತ್ತಲಿನ ನಿವಾಸಿಗಳು, ದಾರಿಯಲ್ಲಿ ಹೋಗುವವರು, ವಾಹನ ಚಾಲಕರು, ಸವಾರರು ಸೇರಿದ್ದರು. ಪೊಲೀಸರು ಸೇರಿದಂತೆ ಎಲ್ಲರಲ್ಲೂ ಆತಂಕ ಹೆಚ್ಚುತ್ತಲೇ ಹೋಯಿತು.
ಬಾಂಬ್ ಪತ್ತೆ ದಳದ ಸ್ಥಳೀಯ ಸಿಬ್ಬಂದಿ ಬಂದು ಉಪಕರಣಗಳ ಮೂಲಕ ಸ್ಕ್ಯಾನ್ ಮಾಡಿ ಮೆಟಲ್ ಇರುವ ಸಾಧ್ಯತೆಯಿದೆ, ಸ್ಫೋಟಕ ವಸ್ತುಗಳು ಇಲ್ಲ ಎನ್ನುವ ಮಾಹಿತಿ ನೀಡಿದರು. ಶ್ವಾನಗಳೂ ಸೂಟ್‌ಕೇಸ್ ಬಳಿ ಬಂದು ಪರಿಶೀಲಿಸಿದವು. ಆದರೂ ಅದನ್ನು ತೆರೆಯುವ ಸಾಹಸಕ್ಕೆ ಪೊಲೀಸರು ಕೈ ಹಾಕಲಿಲ್ಲ. ಬದಲಾಗಿ ಸೂಟ್‌ಕೇಸ್ ಸುತ್ತ ಬಾಂಬ್ ಸ್ಫೋಟ ನಿರೋಧಕ ಕವಚ ಇಡಲಾಯಿತು. ಸೂಟ್‌ಕೇಸ್ ಮೇಲ್ಭಾಗದಲ್ಲಿ ವಿದ್ಯುತ್ ಲೇನ್ ಇದ್ದ ಕಾರಣ ಬೆಸ್ಕಾಂನವರು ವಿದ್ಯುತ್ ಪೂರೈಕೆ ವ್ಯತ್ಯಯಗೊಳಿಸಿದರು.
ಆ ವೇಳೆಗಾಗಲೇ ಸ್ಥಳಕ್ಕೆ ಬಂದ ಸಂಪೂರ್ಣ ಮಾಹಿತಿ ಪಡೆದ ಎಸ್‌ಪಿ ನಿಖಿಲ್, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳವನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದರು.
ಸುಮಾರು 12 ಗಂಟೆಗೆ ಬಾಂಬ್ ನಿಷ್ಕ್ರಿಯ ದಳದ ವಾಹನ ಬಂತು. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯು ಸ್ಥಳದಲ್ಲೇ ಸಿದ್ಧತೆ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದರು.
ಭದ್ರತೆಗಾಗಿ ವಿಶೇಷ ಉಡುಪು ಧರಿಸಿ ಕಾರ್ಯಾಚರಣೆಗಿಳಿದ ಶಶಿಧರ್ ಮತ್ತು ಸಿಬ್ಬಂದಿಯು ಮೊದಲಿಗೆ ಎಕ್ಸರೇ ಮಾಡಲು ವೆಬ್ ಕ್ಯಾಮೆರಾವನ್ನು ಸೂಟ್‍ಕೇಸ್ ಬಳಿ ಇಟ್ಟರು. ಸ್ವಲ್ಪ ದೂರದಲ್ಲಿ ಲ್ಯಾಪ್‌ಟಾಪ್‌ಗೆ ಸಂಪರ್ಕ ಕಲ್ಪಿಸಿಕೊಂಡು ವಿಶ್ಲೇಷಣೆ ಮಾಡಿದರು. ಪುನಃ ಮತ್ತೊಮ್ಮೆ ಎಕ್ಸರೇ ತೆಗೆದು ಯಾವುದೇ ಸ್ಫೋಟಕ ವಸ್ತುಗಳು ಇಲ್ಲದಿರುವುದನ್ನು ಖಾತರಿಪಡಿಸಿಕೊಂಡರು.
ಕೊನೆಗೆ ಸೂಟ್‌ಕೇಸ್‌ಗೆ ವೈರ್ ಮೂಲಕ ಸಂಪರ್ಕ ಕಲ್ಪಿಸಿದರು. ಕಾರ್ಡೆಕ್ಸ್ ಮೂಲಕ ಲಘು ಸ್ಫೋಟ ಮಾಡಿದರು. ಸೂಟ್‍ಕೇಸ್ ಚೂರುಚೂರಾಯಿತು. ಸೆನ್ಸರ್ ಸೂಟ್‍ಕೇಸ್ ಆಗಿದ್ದರಿಂದಾಗಿ ಒಂದು ಶೆಲ್ ಸೇರಿದಂತೆ ಸಣ್ಣ ಎಲೆಕ್ಟ್ರಿಕ್ ಉಪಕರಣಗಳು ಪತ್ತೆಯಾದವು. ಅಂತೂ ಸತತ 5ಗಂಟೆ ನಡೆದ ಕಾರ್ಯಾಚರಣೆಯು ಯಾವುದೇ ಅಹಿತಕರ ಘಟನೆಯಿಲ್ಲದೆ ಸುಖಾಂತ್ಯಗೊಂಡಿತು. ಪೊಲೀಸರು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಎಸ್‌ಪಿ ನಿಖಿಲ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಆರ್.ರವಿಶಂಕರ್, ಎಚ್.ಸಿ.ಜಗದೀಶ್, ಡಿವೈಎಸ್ಪಿ ಎಂ.ಎಚ್.ನಾಗ್ತೆ, ಗುಪ್ತಚರ ಪೊಲೀಸರು, ಗಲ್‌ಪೇಟೆ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಲೋಕೇಶ್, ಪಿಎಸ್‌ಐ ಅರುಣ್ ಗೌಡ ಪಾಟೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಹನುಮಂತಚಾರ್ ಹಾಗೂ ಸಿಬ್ಬಂದಿ ಕೂಡ ಸ್ಥಳದಲ್ಲಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನವರೆಗೆ ಸ್ಥಳದಲ್ಲೇ ಇದ್ದು ನಿಗಾ ವಹಿಸಿದರು.
‘ಯಾರು, ಯಾವ ಉದ್ದೇಶಕ್ಕೆ ಸೂಟ್‌ಕೇಸ್ ಬಿಸಾಕಿ ಹೋಗಿದ್ದಾರೆ, ಕಳ್ಳತನವೇನಾದರೂ ನಡೆದಿದೆಯೇ, ಮಾಲೀಕರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು' ಎಂದು ನಿಖಿಲ್ ಹೇಳಿದರು.
ಕದ್ದ ಸೂಟ್‌ಕೇಸ್ ಇರಬಹುದು: ‘ಅಕಸ್ಮಾತ್ ಬಾಂಬ್ ಇಡುವ ಉದ್ದೇಶವಾಗಿದ್ದರೆ ವಸತಿ ಪ್ರದೇಶ, ಮಾರುಕಟ್ಟೆ, ಜನರು ಹೆಚ್ಚಿರುವ ಕಡೆ ಇಡುತ್ತಿದ್ದರು. ಇದು ಸೆನ್ಸರ್ ಆಧಾರಿತ ಸೂಟ್‌ಕೇಸ್ ಆಗಿದೆ. ಯಾರೂ ಮನೆಯಲ್ಲೋ, ಕಾರಿನಲ್ಲೋ ಕದ್ದುಕೊಂಡು ಬಂದು ಓಪನ್ ಮಾಡಲು ಹೋದಾಗ ಅಲರಾಂ ಶಬ್ದ ಬಂದಿದೆ. ಭಯಗೊಂಡ ರಸ್ತೆ ಬದಿಯಲ್ಲಿ ಬಿಸಾಡಿರಬಹುದು. ಜಿಲ್ಲಾ ಪೊಲೀಸರು ಘಟನೆಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಸುಮಾರು 24 ವರ್ಷಗಳ ಹಿಂದೆ ನಗರದ ಕಾರ್ ಸ್ಟ್ಯಾಂಡ್ ಬಳಿ ಚಿಕ್ಕ ಬ್ರೀಫ್‌ಕೇಸ್ ಅನ್ನು ಯಾರೋ ಬಿಟ್ಟು ಹೋಗಿದ್ದರು. ಆಗ ಪೊಲೀಸರು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ನೋಡಿದಾಗ ಟೂಲ್‌ಕಿಟ್ ಇತ್ತು’ ಎಂದು ಮಾಹಿತಿದಾರ ಸಿ.ಜೆ.ಮುರಳಿ ಸುದ್ದಿಗಾರರಿಗೆ ತಿಳಿಸಿದರು.
ತನಿಖೆಗಾಗಿ ಡಿವೈಎಸ್ಪಿ ನೇತೃತ್ವದ ತಂಡ
ಸ್ಮಾರ್ಟ್ ಸೂಟ್‍ಕೇಸ್ ಇದಾಗಿದ್ದು ತೆರೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಲರಾಂ ಶಬ್ದ ಬರುತಿತ್ತು. ಸೂಟ್‌ಕೇಸ್‌ನಲ್ಲಿ ಯಾವುದೇ ಸ್ಫೋಟಕ ಇಲ್ಲ ಎಂಬುದನ್ನು ಎಕ್ಸರೇ ಮೂಲಕ ದೃಢಪಡಿಸಿಕೊಂಡು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಕಾರ್ಡೆಕ್ಸ್ ಮೂಲಕ ಸ್ಫೋಟಗೊಳಿಸಿದ್ದಾರೆ. ಅಲರಾಂ ಬರುತ್ತಿದ್ದ ಸರ್ಕಿಟ್ ಸಹ ನಮಗೆ ದೊರೆತಿದೆ. ಘಟನೆಯು ಕುರಿತಾಗಿ ತನಿಖೆಗೆ ಡಿವೈಎಸ್ಪಿ ಮುಂದಾಳತ್ವದಲ್ಲಿ ತಂಡ ರಚಿಸಲಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬಾಂಬ್ ನಿಷ್ಕ್ರಿಯಕ್ಕೆ ಸಂಬಂಧಿಸಿದ ಉಪಕರಣಗಳು ಜಿಲ್ಲೆಯಲ್ಲಿ ಇಲ್ಲದ ಕಾರಣ ಬೆಂಗಳೂರಿನಿಂದ ನಿಷ್ಕ್ರಿಯ ದಳ ಕರೆಯಿಸಲಾಯಿತು –ನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸೆನ್ಸರ್ ಆಧಾರಿತ ಸ್ಮಾರ್ಟ್ ಸೂಟ್‌ಕೇಸ್!
ಕ್ರೌನ್ ಕಂಪನಿಯ ಸ್ಮಾರ್ಟ್ ಸೂಟ್‌ಕೇಸ್ ಇದಾಗಿದೆ. ಸೆನ್ಸರ್ ತಂತ್ರಜ್ಞಾನ ಆಧಾರಿತವಾಗಿದ್ದು ಎರಡು ಕೀಗಳಿದ್ದು ಫಿಂಗರ್ ಸ್ಕ್ಯಾನರ್ ಮೂಲಕ ಓಪನ್ ಆಗುತ್ತವೆ. ಯಾರೋ ತಪ್ಪಾಗಿ ಪಾಸ್‌ವರ್ಡ್ ನಮೂದಿಸಿದ್ದರಿಂದ ಅಲರಾಂ ಶಬ್ದ ಬಂದಿದೆ. ಸೂಟ್‌ಕೇಸ್‌ನ ಮಾಲೀಕರ ಮೊಬೈಲ್‌ಗೂ ಅಲರ್ಟ್ ಹೋಗಿರುತ್ತದೆ.
ಪೊಲೀಸರು ಬಾಂಬ್ ನಿಷ್ಕ್ರಿಯ ದಳಕ್ಕೆ ಶ್ಲಾಘನೆ
ಎಸ್‌ಪಿ ನಿಖಿಲ್ ಸಾರಥ್ಯದ ಜಿಲ್ಲಾ ಪೊಲೀಸರು ಹಾಗೂ ಬೆಂಗಳೂರಿನಿಂದ ಬಂದಿದ್ದ ಬಾಂಬ್ ನಿಷ್ಕ್ರಿಯ ದಳದವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಇನ್‌ಸ್ಟೆಕ್ಟರ್ ಸಬ್‌ಇನ್‌ಸ್ಪೆಕ್ಟರ್ ಸಿಬ್ಬಂದಿ ಉಪಕರಣಗಳೊಂದಿಗೆ ಬಂದು ಜನರ ಆತಂಕ ಹೋಗಲಾಡಿಸಿದರು. ಅದರಲ್ಲೂ ಬಾಂಬ್ ಸ್ಫೋಟ ನಿರೋಧಕ ಧರಿಸಿ ಸೂಟ್‌ಕೇಸ್ ಬಳಿ ಹೋಗಿ ಬರುತ್ತಿದ್ದ ಪೊಲೀಸರ ಧೈರ್ಯಕ್ಕೆ ಸ್ಥಳದಲ್ಲಿದ್ದವರು ಶಹಬ್ಬಾಸ್ ಎಂದರು.
ಜನರ ಕುತೂಹಲ ಆತಂಕ!
ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವವ ವಾಹನ ಚಾಲಕರು ಸವಾರರು ವಾಹನ ನಿಲ್ಲಿಸಿ ಬಗ್ಗಿ ಬಗ್ಗಿ ನೋಡುತ್ತಿದ್ದರು. ಪೊಲೀಸರು ಗದರಿಸಿ ಕಳುಹಿಸುತ್ತಿದ್ದರು. ಫಿಲ್ಮ್ ಶೂಟಿಂಗ್ ನಡೆಯುತ್ತಿದೆಯೋ ಅಪಘಾತವೇನಾದರೂ ಆಗಿದೆಯೋ ಯಾರಾದರೂ ಮೃತಪಟ್ಟಿದ್ದಾರೋ ಎಂದು ಕೇಳುತ್ತಿದ್ದರು. ಕೆಲವರಿಗೆ ಕುತೂಹಲ ಇನ್ನು ಕೆಲವರಿಗೆ ಆತಂಕ. ಅದಲ್ಲದೇ ಸುತ್ತಮುತ್ತಲಿನ ನಿವಾಸಿಗಳು ಉದ್ಯೋಗಿಗಳು ಕೂಲಿಕಾರರು ಬಂದು ಸೇರಿದ್ದರು. ಟಮಕ ಮೇಲ್ಸೇತುವೆಯಿಂದ ಬೇತಮಂಗಲ ರಸ್ತೆಯ ತಿರುವಿನವರೆಗಿನ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಸಾರ್ವಜನಿಕರ ಓಡಾಟವನ್ನು ಪೊಲೀಸರು ತಡೆದರು. ಯಾರೂ ಹತ್ತಿರಕ್ಕೆ ಬರದಂತೆ ನಿಯಂತ್ರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.