ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಬೆಸುಗೆಗೆ ಮಸೀದಿ ದರ್ಶನ

ಜನಪ್ರತಿನಿಧಿಗಳು, ವಿವಿಧ ಧರ್ಮೀಯರು ಭಾಗಿ–ಮಸೀದಿ ಪದ್ಧತಿಯ ಮಾಹಿತಿ
Last Updated 7 ನವೆಂಬರ್ 2022, 5:35 IST
ಅಕ್ಷರ ಗಾತ್ರ

ಕೋಲಾರ: ಸೌಹಾರ್ದ ಬೆಸುಗಾಗಿ ಹಾಗೂ ತಪ್ಪು ಕಲ್ಪನೆ ದೂರ ಮಾಡುವ ಉದ್ದೇಶದಿಂದ ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಭಾನುವಾರ ಸಾರ್ವಜನಿಕರಿಗಾಗಿ ‘ನಮ್ಮೂರ ಮಸೀದಿ ನೋಡ ಬನ್ನಿ’ ಮಸೀದಿ ದರ್ಶನ ಕಾರ್ಯಕ್ರಮ ನಡೆಯಿತು.

ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಜಾಮಿಯಾ ಮಸೀದಿ ಸಹಯೋಗದಲ್ಲಿ ನಗರದ ಎಂ.ಬಿ.ರಸ್ತೆಯ ನಲ್ಲಗಂಗಮ್ಮ ದೇವಾಲಯ ಪಕ್ಕದಲ್ಲಿರುವ ಮಸೀದಿಯಲ್ಲಿ ಕಾರ್ಯಕ್ರಮ ನಡೆಯಿತು.

ವಿವಿಧ ಧರ್ಮೀಯರ ನಡುವೆ ಸಾಮರಸ್ಯ, ಸಹಬಾಳ್ವೆ ಮೂಡಿಸಲು, ಪರಸ್ಪರರನ್ನು ಅರಿಯಲು, ಅಪನಂಬಿಕೆ ದೂರ ಮಾಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ವಿವಿಧ ಧರ್ಮೀಯರು, ಮಹಿಳೆಯರು ಪಾಲ್ಗೊಂಡಿದ್ದರು. ಮಸೀದಿಗೆ ಭೇಟಿ ನೀಡಿ ನಮಾಜ್‌ ಆರಾಧನಾ ಪ್ರಕ್ರಿಯೆಗಳನ್ನು ವೀಕ್ಷಿಸಿದರು. ಅನುಮಾನ ಹಾಗೂ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿ ಮೊಹಮ್ಮದ್ ನವಾಜ್ ಉತ್ತರಿಸಿದರು.

‘ಹೃದಯ, ಮನಸ್ಸು ಬೆಸೆಯುವಿಕೆಯೇ ಮಸೀದಿ ದರ್ಶನ ಕಾರ್ಯಕ್ರಮವಾಗಿದೆ. ವಾಸ್ತವಾಂಶ ಅರಿತು ತಪ್ಪು ಕಲ್ಪನೆ ಹೋಗಲಾಡಿಸುವ ಪ್ರಯತ್ನವಾಗಿದೆ’ ಎಂದು ಹೇಳಿದರು.

ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಾತನಾಡಿ, ‘ವಿಶ್ವದ ಸೃಷ್ಟಿಯಲ್ಲಿ ನಾವೆಲ್ಲಾ ಮನುಷ್ಯರೇ. ಹೀಗಾಗಿ, ‍‍ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು. ಒಂದು ವೇಳೆ ನಿಮ್ಮ ವಿಚಾರದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಗೌರವ ಇಟ್ಟುಕೊಳ್ಳಬೇಕು. ತಪ್ಪು ತಿಳಿವಳಿಕೆಗಳಿಂದ ಸಾಮರಸ್ಯ, ಸೌಹಾರ್ದ ಕಳೆದುಕೊಂಡು ನೆಮ್ಮದಿ ಹಾಳು ಮಾಡಿ ಕೊಳ್ಳುತ್ತಿರುವುದು ಅನಾಗರಿಕತೆಯ ಪರಮಾವಧಿಯಾಗಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ ಕುಮಾರ್‌, ‘ಕೋಮು ಸೌಹಾರ್ದ ಕಾಪಾಡಲು ಇಂಥಹ ಕಾರ್ಯಕ್ರಮಗಳು ಸಹಾಯಕ. ಸಮುದಾಯಗಳ ನಡುವೆ ಇರುವಂಥ ಗೊಂದಲಗಳ ನಿವಾರಣೆ ಮಾಡಲು ಸಾದ್ಯವಾಗುತ್ತದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸಂದೇಶ ಸಾರುವಂತಿದೆ’ ಎಂದು ನುಡಿದರು.

ಜೆಡಿಎಸ್‌ ಮುಖಂಡ ಸಿಎಂಆರ್ ಶ್ರೀನಾಥ್, ‘ಅನ್ಯ ಸಮುದಾಯಗಳ ತಪ್ಪು ಕಲ್ಪನೆಗಳನ್ನು ಮಸೀದಿ ದರ್ಶನ ಕಾರ್ಯಕ್ರಮ ಹೋಗಲಾಡಿಸಿದೆ. ಸಮನ್ವಯ, ಸೌಹಾರ್ದದ ಬೆಸುಗೆಗೆ ಪೂರಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಮಸೀದಿಯ ಆವರಣದಲ್ಲಿ ಸಮುದಾಯದವರಿಗೆ ಅಗತ್ಯ ದಾಖಲಾತಿಗಳ ಉಚಿತ ಸೇವೆ ಕಲ್ಪಿಸಲು ಸ್ಥಾಪಿಸಿರುವ ಜಾಮೀಯ ಸೈಬರ್‌ ಸೆಂಟರ್‌ಗೆ ಶಾಸಕ ಕೆ.ಶ್ರೀನಿವಾಸಗೌಡ ಚಾಲನೆ ನೀಡಿದರು.

ವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್‌, ಸಮುದಾಯದ ಮುಖಂಡ ಅಜ್ಮದ್‌ ಅಲಿ, ನಫೀಜ್‌ ಅಹ್ಮದ್‌, ಸೈಯದ್‌ ರೂಉಲ್ಲಾ, ಮುಬಾರಕ್‌ ಬಗ್ಬಾನ್‌, ಅಬ್ದುಲ್‌ ಖಯ್ಯೊಂ, ಜಾಕೀರ್ ಹುಸೇನ್‌, ರಿಯಾಜ್ ಅಹ್ಮದ್‌, ಗೈಡ್‌ ರಾಹಿಲಾ, ನಗರಸಭಾ ಉಪಾಧ್ಯಕ್ಷ ಅಸ್ಲಾಂ ಪಾಷಾ, ಸದಸ್ಯರಾದ ಅಂಬರೀಷ್, ಶಫೀಯುಲ್ಲಾ, ಸಹ ಪ್ರಾಧ್ಯಾಪಕ ಡಾ.ಶಿವಪ್ಪ ಅರಿವು, ಹೋರಾಟಗಾರ ಹೆಬ್ಬಣಿ ಶಿವಪ್ಪ, ಪತ್ರಕರ್ತ ಕೆ.ಎಸ್‌.ಗಣೇಶ್‌ ಹಾಗೂ ಮಸೀದಿ ಆಡಳಿತ ಮಂಡಳಿ ಸದಸ್ಯರು, ಮಾರ್ಗದರ್ಶಿಗಳು ಇದ್ದರು.

ಮಸೀದಿಯಲ್ಲಿ ತಾರತಮ್ಯ ಇಲ್ಲ: ‘ಮಸೀದಿಯ ದರ್ಶನ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಮಸೀದಿಯ ಶಿಷ್ಟಾಚಾರಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿಉತ್ತಮ ಬಾಂಧವ್ಯ ರೂಪಿಸಿಕೊಳ್ಳುವುದುಇದರ ಉದ್ದೇಶವಾಗಿದೆ’ ಎಂದುವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್‌ ಹೇಳಿದರು.

‘ಮಸ್ಲಿಮರು ದಿನಕ್ಕೆ 5 ಬಾರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಧ್ವನಿವರ್ಧಕದ ಮೂಲಕ ಸಮುದಾಯದವರನ್ನು ಪ್ರಾರ್ಥನೆಗೆ ಆಹ್ವಾನಿಸುತ್ತೇವೆ’ ಎಂದರು.

‘ಮಸೀದಿಯ ಗರ್ಭದ್ವಾರವನ್ನು ಬಲಗಾಲಿಟ್ಟು ಪ್ರವೇಶಿಸಬೇಕು. ಪ್ರಾರ್ಥನೆ ಮಾಡುವ ಸ್ಥಳದಲ್ಲಿ ಬಡವ, ಶ್ರೀಮಂತ ಎಂಬ ಯಾವುದೇ ತಾರತಮ್ಯ ಇಲ್ಲ. ಎಲ್ಲಿ ಜಾಗ ಇರುತ್ತದೆಯೋ ಅಲ್ಲಿ ಪ್ರಾರ್ಥನೆ ಮಾಡಲು ನಿಲ್ಲಬೇಕು. ಅದು ಸಚಿವರಾದರೂ ಅಷ್ಟೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT