ಗುರುವಾರ , ಫೆಬ್ರವರಿ 20, 2020
21 °C
ಕುಂದು ಕೊರತೆ ಸಭೆ

ಎಸಿಬಿ ಮೇಲೆ ಜನರಿಗೆ ವಿಶ್ವಾಸ ಮೂಡಿದೆ: ಇನ್‌ಸ್ಪೆಕ್ಟರ್‌ ರಂಗಶಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಸಾರ್ವಜನಿಕರ ಕುಂದು ಕೊರತೆ ಸಭೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಜನರಿಗೆ ಸಂಸ್ಥೆ ಮೇಲೆ ವಿಶ್ವಾಸ ಮೂಡಿದೆ’ ಎಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಇನ್‌ಸ್ಪೆಕ್ಟರ್‌ ರಂಗಶಾಮಯ್ಯ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ಗುರುವಾರ ನಡೆದ ಸಾರ್ವಜನಿಕರ ಕೊಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಭ್ರಷ್ಟಾಚಾರದ ಸಂಬಂಧ ಕೆಲವೇ ದಿನಗಳಲ್ಲಿ 16 ಪ್ರಕರಣ ದಾಖಲಿಸಿದ್ದೇವೆ. ಲಂಚ ತೆಗೆದುಕೊಂಡರೆ ಎಸಿಬಿಯವರು ಬಂಧಿಸುತ್ತಾರೆ ಎಂಬ ಭಯ ಅಧಿಕಾರಿಗಳಲ್ಲಿ ಬಂದಿದೆ’ ಎಂದರು.

‘ಲೋಕಾಯುಕ್ತ ಮತ್ತು ಎಸಿಬಿ ಕುರಿತು ಜನರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಎಸಿಬಿ ಪೊಲೀಸರು ನಡೆಸುವ ದಿಟ್ಟ ಕಾರ್ಯಾಚರಣೆ ನೋಡಿ ಜನ ನಮ್ಮ ಕಚೇರಿಗೆ ಬರುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ನ್ಯಾಯ ಒದಗಿಸಲಾಗಿದೆ. ಜನಸಾಮಾನ್ಯರು ನಮ್ಮನ್ನು ನಂಬಿ ನೀಡಿದ ಅರ್ಜಿಗಳಿಗೆ ನ್ಯಾಯ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

ಮಾಹಿತಿ ನೀಡಬೇಕು: ‘ಸರ್ಕಾರಿ ಕಚೇರಿಗಳಲ್ಲಿ ಜನ ಲಂಚ ಕೊಡಬಾರದು. ಲಂಚ ಕೇಳುವುದು ಹಾಗೂ ಕೊಡುವುದು ಅಪರಾಧ. ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ, ಭ್ರಷ್ಟಾಚಾರದ ಸಂಬಂಧ ಎಸಿಬಿ ಠಾಣೆಗೆ ಮಾಹಿತಿ ನೀಡುವಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸೂಚನಾ ಫಲಕ ಹಾಕಲಾಗಿದೆ. ಸಾರ್ವಜನಿಕರು ಯಾವುದೇ ಸಂಶಯವಿಲ್ಲದೆ ಧೈರ್ಯವಾಗಿ ಮಾಹಿತಿ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ಅನಗತ್ಯ ವಿಳಂಬ ಮಾಡುವುದು ಮತ್ತು ಜನರನ್ನು ಅಲೆಸುವುದು ನಿಲ್ಲಬೇಕು. ಲಂಚದಾಸೆಗಾಗಿ ಜನರನ್ನು ಪದೇ ಪದೇ ಕಚೇರಿಗೆ ಅಲೆಸುವ ಪ್ರವೃತ್ತಿ ಕೊನೆಯಾಗಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಲ್ಲಿ ಸಂಪರ್ಕ ಕಲ್ಪಿಸಿಲ್ಲ: ‘ಹೊಸ ನಲ್ಲಿ ಸಂಪರ್ಕಕ್ಕಾಗಿ ಗ್ರಾಮ ಪಂಚಾಯಿತಿಗೆ ₹1,500 ಪಾವತಿಸಿ ವರ್ಷವಾಗಿದೆ. ಆದರೆ, ಈವರೆಗೂ ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ಪಕ್ಕದ ಮನೆಯ ವ್ಯಕ್ತಿ ರಸ್ತೆಯಲ್ಲಿ ನಲ್ಲಿ ಪೈಪ್ ಅಳವಡಿಸಲು ಅವಕಾಶ ಕೊಡುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ’ ಎಂದು ತಾಲ್ಲೂಕಿನ ವೇಮಗಲ್‌ ಗ್ರಾಮದ ನಾರಾಯಣಸ್ವಾಮಿ ಅಳಲು ತೋಡಿಕೊಂಡರು.

‘ರಸ್ತೆ ಸರ್ಕಾರಕ್ಕೆ ಸೇರಿದ್ದು. ಆದರೆ, ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ಪಕ್ಕದ ಮನೆಯಾತ ತೊಂದರೆ ಮಾಡುತ್ತಿದ್ದಾನೆ. ನೀರಿನ ಸೌಕರ್ಯವಿಲ್ಲದ ಕಾರಣ ಹಣ ಕೊಟ್ಟು ಖಾಸಗಿ ಟ್ಯಾಂಕರ್‌ ಮಾಲೀಕರಿಂದ ನೀರು ಖರೀದಿಸುತ್ತಿದ್ದೇವೆ. ನೀರಿಗಾಗಿ ತಿಂಗಳಿಗೆ ₹3 ಸಾವಿರ ಖರ್ಚಾಗುತ್ತಿದೆ. ನಾವು ಬಡವರು, ಅಷ್ಟು ಹಣ ಹೊಂದಿಸಲು ಕಷ್ಟವಾಗಿದೆ. ಗ್ರಾ.ಪಂ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರಿನ ಸೌಲಭ್ಯ ಕಲ್ಪಿಸಿಕೊಡಿ’ ಎಂದು ಮನವಿ ಮಾಡಿದರು.

‘ಹಿಂದಿನ ಸಭೆಯಲ್ಲೂ ಈ ಬಗ್ಗೆ ದೂರು ನೀಡಿದ್ದೆ. ನೀವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿ ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚಿಸಿದ್ದಿರಿ. ಆದರೆ, ಅಭಿವೃದ್ಧಿ ಅಧಿಕಾರಿ ನಿಮ್ಮ ಸೂಚನೆಗೆ ಸ್ಪಂದಿಸಿಲ್ಲ’ ಎಂದು ದೂರಿದರು.

ಸೋಮವಾರದ ಗಡುವು: ಇದಕ್ಕೆ ಪ್ರತಿಕ್ರಿಯಿಸಿದ ರಂಗಶಾಮಯ್ಯ ಪಿಡಿಒಗೆ ಕರೆ ಮಾಡಿ, ‘ಜನರಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಮತ್ತು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಗ್ರಾಮಸ್ಥ ನಾರಾಯಣಸ್ವಾಮಿ ಅವರು ಹೊಸ ನಲ್ಲಿ ಸಂಪರ್ಕಕ್ಕೆ ಹಣ ಕಟ್ಟಿ ಒಂದು ವರ್ಷವಾಗಿದೆ. ನೀವು ಏನು ಮಾಡುತ್ತಿದ್ದೀರಿ? ಸ್ವಲ್ಪವೂ ಜವಾಬ್ದಾರಿ ಇಲ್ಲವೇ? ಸೋಮವಾರದೊಳಗೆ ಎಲ್ಲಾ ಸಮಸ್ಯೆ ಬಗೆಹರಿಸಿ ಅವರ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಬೇಕು’ ಎಂದು ತಾಕೀತು ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು