ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯ

Last Updated 20 ಜನವರಿ 2019, 13:17 IST
ಅಕ್ಷರ ಗಾತ್ರ

ಕೋಲಾರ: ‘ಬಿಡದಿಯ ಈಗಲ್‌ಟನ್ ರೆಸಾರ್ಟಿನಲ್ಲಿ ಗಲಾಟೆ ಮಾಡಿಕೊಂಡಿರುವ ಶಾಸಕ ವಿರುದ್ಧ ಪಕ್ಷದ ಹೈಕಮಾಂಡ್ ಕ್ರಮಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ರಾಜೇಶ್‌ ಸಿಂಗ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಣ್ಣ ಪುಟ್ಟ ವಿಚಾರಕ್ಕೆ ಶಾಸಕರು ಗಲಾಟೆ ಮಾಡಿಕೊಂಡಿದ್ದಾರೆ. ಇದರ ಮೂಲಕ ಜನಕ್ಕೆ ತಪ್ಪು ಸಂದೇಶ ಹೋಗುವ ಮೊದಲೇ ಪಕ್ಷದ ಹೈಕಮಾಂಡ್ ಕ್ರಮಜರುಗಿಸುವುದು ಸೂಕ್ತ’ ಎಂದರು.

‘ಬಳ್ಳಾರಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರಾದ ಜೆ.ಎನ್.ಗಣೇಶ್, ಭಿಮಾನಾಯ್ಕ್, ಆನಂದ್ ಸಿಂಗ್ ನಡುವೆ ಗಲಾಟೆಯಾಗಿದೆ. ಈ ವಿಚಾರವನ್ನೇ ವಿರೋಧ ಪಕ್ಷದ ಬಿಜೆಪಿಯವರು ದೊಡ್ಡದಾಗಿ ಬಿಂಬಿಸುತ್ತಿರುವುದು ಖಂಡನೀಯ’ ಎಂದು ದೂರಿದರು.

‘ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಚರ್ಚಿಸಲು ಈಗಲ್‌ಟನ್ ರೆಸಾರ್ಟ್‌ಗೆ ಕಾಂಗ್ರೆಸ್ ಪಕ್ಷದ ಶಾಸಕರು ಹೋಗಿದ್ದಾರೆ. ಶನಿವಾರ ರಾತ್ರಿ ನಡೆದ ಪಾರ್ಟಿಯಲ್ಲಿ ಆನಂದ್‌ ಸಿಂಗ್‌ ಮೇಲೆ ಗಣೇಶ್‌ ಮತ್ತು ಭಿಮಾನಾಯ್ಕ್‌ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಈ ಎರಡು ಶಾಸಕರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಇದೇ ಒಂದು ವಿಷಯವನ್ನು ಬಿಜೆಪಿಯವರು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದು, ಜನಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಈ ಇಬ್ಬರು ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷದ ನಾಯಕರು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಶಾಸಕರ ನಡುವೆ ಗಲಾಟೆಯಾಗಿ ಆನಂದ್‌ ಸಿಂಗ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೌಜನ್ಯಕ್ಕೂ ಭೇಟಿ ನೀಡಿ ವಿಚಾರಿಸಿಲ್ಲ’ ಎಂದು ಅಸಮಾಧಾನವ್ಯಕ್ತಪಡಿಸಿದರು.

ಮುಖಂಡರಾದ ಕೃಷ್ಣಸಿಂಗ್, ವಿರೇಂದ್ರಸಿಂಗ್, ಶಂಕರ್‌ಸಿಂಗ್, ಸಂಗ್ರಮ್ ಸಿಂಗ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT