ಗುರುವಾರ , ಅಕ್ಟೋಬರ್ 22, 2020
23 °C
ದೌರ್ಜನ್ಯ ಖಂಡಿಸಿ ಅ.19 ರಂದು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ

ಮೈಕ್ರೊ ಫೈನಾನ್ಸ್‌ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಕೊರೊನಾ ಸಂಕಷ್ಟದ ನಡುವೆ ಸಾಲ ಪಡೆದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಸಾಲ ವಸೂಲಿ ಮಾಡುತ್ತಿರುವ ಮೈಕ್ರೊ ಫೈನಾನ್ಸ್‌ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರಿ ಆಗ್ರಹಿಸಿದರು.

ಪಟ್ಟಣದ ಕರ್ನಾಟಕ ಪ್ರಾಂತ ರೈತ ಸಂಘದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೈಕ್ರೊ ಫೈನಾನ್ಸ್‌ ಸಾಲಗಾರರ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೊ ಫೈನಾನ್ಸ್‌ ಕಂಪನಿಗಳು ಐವರ ಮಹಿಳೆಯರ ಗುಂಪನ್ನು ಮಾಡಿ, ತಲಾ ₹30 ಸಾವಿರದಿಂದ ₹50 ಸಾವಿರದವರೆಗೆ ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿವೆ. ಲಾಕ್‌ಡೌನ್‌ ಅವಧಿಯಲ್ಲಿ ಸಾಲ ವಸೂಲಿ ನಿಲ್ಲಿಸಿದ್ದ ಫೈನಾನ್ಸ್‌ ಕಂಪನಿಗಳು ಈಗ ಸಾಲದ ಮೇಲಿನ ಒಟ್ಟು ಬಡ್ಡಿ ಹಾಗೂ ಬಡ್ಡಿಗೆ ಬಡ್ಡಿ ನೀಡುವಂತೆ ಪೀಡಿಸುತ್ತಿವೆ ಎಂದು ಆಪಾದಿಸಿದರು.

ತಾಲ್ಲೂಕಿನಲ್ಲಿ ಸಾಲ ನೀಡಿ ಅಧಿಕ ಬಡ್ಡಿಗಾಗಿ ಬಡವರನ್ನು ಹಿಂಸಿಸುವ ಸಣ್ಣ ಆರ್ಥಿಕ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಕೊರೊನಾ ಸಂಕಷ್ಟದ ನಡುವೆ ಯಾವುದೇ ಆದಾಯವಿಲ್ಲದೆ ಸೊರಗಿರುವ ಸಾಲಗಾರರಿಂದ ಬಲವಂತವಾಗಿ ಸಾಲ ವಸೂಲು ಮಾಡಲಾಗುತ್ತಿದೆ. ಅದಕ್ಕಾಗಿ ಕೆಲವು ವ್ಯಕ್ತಿಗಳನ್ನು ನೇಮಿಸಲಾಗಿದೆ. ಸಾಲ ಪಡೆದುಕೊಂಡಿರುವ ಮಹಿಳೆಯ ಮನೆಗಳಿಗೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದ ಸಾಲ ಪಡೆದಿರುವ ಮಹಿಳೆಯರು ಮಾನಸಿಕ ಆಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾತಕೋಟ ನವೀನ್‌ ಕುಮಾರ್‌ ಮಾತನಾಡಿ, ‘ಮೈಕ್ರೊ ಫೈನಾನ್ಸ್‌ ಸಂಸ್ಥೆಗಳ ದೌರ್ಜನ್ಯದ ವಿರುದ್ಧ ಮಹಿಳಾ ಸಂಘಟನೆ ನಡೆಸುತ್ತಿರುವ ಪ್ರತಿಭಟನೆಗೆ ನಮ್ಮ ಸಂಘದ ಬೆಂಬಲವಿದೆ. ದೌರ್ಜನ್ಯದಿಂದ ಅಧಿಕ ಬಡ್ಡಿ ವಸೂಲು ಮಾಡುತ್ತಿರುವ ಆರ್ಥಿಕ ಸಂಸ್ಥೆಗಳನ್ನು ತಾಲ್ಲೂಕಿನಿಂದ ಹೊರಗೆ ತಳ್ಳಬೇಕಾಗಿದೆ’ ಎಂದು ಹೇಳಿದರು.

ಮುಖಂಡರಾದ ಮಂಜುಳಮ್ಮ, ಉಮಾ, ಆಶ್ವಿನಿ, ರತ್ನಮ್ಮ, ನಾಗಭೂಷಣ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು