ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್ ಯೋಜನೆ ತನಿಖೆಗೆ ಕ್ರಮ: ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ

Last Updated 12 ಜೂನ್ 2019, 13:43 IST
ಅಕ್ಷರ ಗಾತ್ರ

ಕೋಲಾರ: ‘ಅಮೃತ ಸಿಟಿ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಕಳಪೆಯಾಗಿದ್ದು, ತನಿಖೆ ನಡೆಸಿ ಗುತ್ತಿಗೆದಾರನ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಲಾಗುವುದು’ ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.

ನಗರಸಭೆ ಕಚೇರಿಗೆ ಬುಧವಾರ ಭೇಟಿ ನೀಡಿ ಅಮೃತ ಯೋಜನೆಯಡಿ ನಡೆದಿರುವ ಕಾಮಗಾರಿಗಳ ಕುರಿತು ಎಂಜಿನಿಯರ್‌ಗಳಿಂದ ಮಾಹಿತಿ ಪಡೆದ ಮುನಿಸ್ವಾಮಿ, ‘ಯೋಜನೆಯಡಿ 210 ಕೋಟಿ ವೆಚ್ಚದಲ್ಲಿ ನಡೆದಿರುವ ಕಾಮಗಾರಿಗಳ ತನಿಖೆ ನಡೆಸಲಾಗುವುದು. ಇದುವರೆಗು ಅಗಿರುವ ಕೆಲಸಕ್ಕೂ, ವೆಚ್ಚಕ್ಕೂ ತಾಳೆಯಾಗುತ್ತಿಲ್ಲ. ಹಣ ಏನು ಮಾಡಲಾಗಿದೆ’ ಎಂದು ಪ್ರಶ್ನಿಸಿದರು.

ಕ್ರಮಕ್ಕೆ ಶಿಫಾರಸ್ಸು: ‘ಪ್ರತಿ ಅಭಿವೃದ್ಧಿ ಕಾಮಗಾರಿಯ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ. ಕಾಲುವೆ ಅಗೆದು ಅರೆಬರೆ ಮುಚ್ಚಲಾಗಿದೆ. ಮಳೆ ನೀರು ಚರಂಡಿ ಕಾಮಗಾರಿ ಸರಿಯಾಗಿ ನಡೆದಿಲ್ಲ. ಮಳೆಗಾಲ ಆರಂಭವಾಗಿದ್ದರೂ ಚರಂಡಿಯಲ್ಲಿ ಹೂಳು ತೆಗೆದಿಲ್ಲ. ಬಿಡುಗಡೆಯಾದ ₹ 210 ಕೋಟಿ ಯಾವ ಮೂಲೆಯಲ್ಲಿ ಖರ್ಚಾಗಿದೆಯೋ ಗೊತ್ತಿಲ್ಲ. ಅವ್ಯವಸ್ಥೆ ನೋಡಿದರೆ ಅಕ್ರಮಗಳು ನಡೆದಿರುವ ಅನುಮಾನವಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಲಾಗುವುದು’ ಎಂದರು.

‘ಎರಡು ವರ್ಷಗಳ ಹಿಂದೆ ಕೋಲಾರ ಕ್ಲೀನ್ ಸಿಟಿ ಆಗಿತ್ತು, ಈಗ ಗಾರ್ಬೇಜ್ ಸಿಟಿ ಆಗಿದೆ, ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡುತ್ತಿರುವ ನಿಮಗೆ ನಾಚಿಕೆ ಆಗಲ್ವಾ.? ಇನ್ನೇನು ಕೆಲಸ ಮಾಡಿಸುತ್ತೀರಿ.? ಕಟ್ಟಡ ನಿರ್ಮಾಣ ಮಾಡುವವರ ಬಳಿ ಹಣ ವಸೂಲಿ ಮಾಡ್ಕೊಂಡು ಬರೋದಷ್ಟೇನಾ ಕೆಲಸ.? ಕುಡಿಯುವ ನೀರು ಸರಬರಾಜಿನಲ್ಲಿ ಜನರನ್ನು ಯಾಮಾರಿಸಲು ಆಗದು, ನಿಮ್ಮ ನಾಟಕ ಎಲ್ಲವೂ ಗೊತ್ತಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಒಂದು ವಾರದಲ್ಲಿ ಇಡೀ ನಗರ ಸ್ವಚ್ಛವಾಗಿರಬೇಕು. ಪ್ರಮುಖ ಸ್ಥಳದಲ್ಲಿ ಕಸ ವಿಲೇವಾರಿ ಮಾಡಬೇಕು. ಆರೋಗ್ಯ ನಿರೀಕ್ಷರು ಎಷ್ಟು ಮಾತ್ರ ಕೆಲಸ ಮಾಡುತ್ತಾರೆ ಎಂಬುದಕ್ಕೆ ಸಾರ್ವಜನಿಕರಿಂದ ಬಂದ ದೂರುಗಳೆ ಸಾಕ್ಷಿ. ಇನ್ನಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

ಅನುಷ್ಟಾನಗೊಳ್ಳದ ಪ್ಲಾಸ್ಟಿಕ್ ನಿಷೇಧ: ನಗರದಲ್ಲಿ ಪ್ಲಾಸ್ಟಿಕ್ ನಿಷೇಧೀಸಲಾಗಿದ್ದರೂ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ. ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇಧಿಸಿದಾಗ ಕಸ ಸಮಸ್ಯೆ ಶೇ.50ರಷ್ಟು ನಿವಾರಣೆಯಾಗುತ್ತದೆ. ಪ್ಲಾಸ್ಟಿಕ್ ಅಂಗಡಿಗಳವರಿಗೆ ಗಡವು ನೀಡಬೇಕು. ಅದಕ್ಕೆ ಮಣಿಯದಿದ್ದರೆ ಟ್ರೇಡ್ ಲೈಸನ್ಸ್ ರದ್ದು ಮಾಡಿದರೆ ಬೇರೆಯವರು ದಾರಿ ಬರುತ್ತಾರೆ’ ಎಂದು ಸಲಹೆ ನೀಡಿದರು.

ರಜೆ ಹಾಕಿದ ಪೌರಾಯುಕ್ತ: ನಗರಸಭೆ ಆಯುಕ್ತ ಟಿ.ಆರ್.ಸತ್ಯನಾರಾಯಣ ಮಧ್ಯಾಹ್ನದ ವೇಳೆಗೆ ದಿಢೀರ್ ಅನಾರೋಗ್ಯದ ಕಾರಣ ಹೇಳಿ 4 ದಿನಗಳ ಸಾಂದರ್ಭಿಕ ರಜೆ ಪಡೆದು ತೆರಳಿದ್ದಾರೆ.

ಸಂಸದ ಎಸ್.ಮುನಿಸ್ವಾಮಿ ಜತೆ ನಗರ ಪ್ರದಕ್ಷಿಣೆಯಲ್ಲಿ ಓಡಾಡಿಕೊಂಡಿದ್ದ ಸತ್ಯನಾರಾಯಣ ಕಸದ ರಾಶಿ ಕಂಡ ಸಂಸದರಿಂದ ತರಾಟೆಗೆ ಒಳಗಾಗಿದ್ದರು. ಬೆಳಿಗ್ಗೆ 11ಕ್ಕೆ ನಗರಸಭೆಯಲ್ಲಿ ಸಭೆ ನಡೆಸುವುದಾಗಿ ಹೇಳಿದ್ದ ಸಂಸದರು 11.30ಕ್ಕೆ ಆಗಮಿಸಿದಾಗ ಆಯುಕ್ತ ಕಚೇರಿಯಲ್ಲಿರಲಿಲ್ಲ.

ಎಂಜನಿಯರ್‌ಗಳಾದ ಸುಧಾಕರ್‌ಶೆಟ್ಟಿ, ಪೂಜಾರಪ್ಪ ಪೌರಾಯುಕ್ತರಿಗೆ ದೂರವಾಣಿ ಕರೆ ಮಾಡಿ ಸಂಸದರು ಆಗಮಿಸಿರುವ ಮಾಹಿತಿ ತಿಳಿಸಲಾಗಿ ಬರುತ್ತಿರುವುದಾಗಿ ಹೇಳಿದ್ದಾರೆನ್ನಲಾಗಿದೆ. ಈ ಮದ್ಯೆ ಪೌರಾಯುಕ್ತರನ್ನು ಕರೆದುಕೊಂಡು ಬರಲು ಸಿಬ್ಬಂದಿಯೊಬ್ಬರನ್ನು ಕಳುಹಿಸಲಾಗಿತ್ತು. ಮಧ್ಯಾಹ್ನ 12.15ರ ವೇಳೆಗೆ ಅನಾರೋಗ್ಯದ ಕಾರಣದಿಂದ 4 ದಿನಗಳ ಸಾಂದರ್ಭಿಕ ರಜೆ ಕೋರಿ ಖಾಸಗಿ ನರ್ಸಿಂಗ್ ಹೋಂನಲ್ಲಿ 11 ಗಂಟೆಗೆ ಹೊರರೋಗಿಯಾಗಿ ದಾಖಲಾದ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಸಂಸದರ ಲಭ್ಯವಾಗಿದೆ.

ಇದರಿಂದ ಗರಂ ಆದ ಸಂಸದ ಎಸ್.ಮುನಿಸ್ವಾಮಿ, ‘ಪೌರಾಯುಕ್ತ ಸತ್ಯನಾರಾಯಣ ಗ್ರಾಮ ಪಂಚಾಯಿತಿ ಅಭಿವೃದ್ಧಿಯಾಗಲು ನಾಲಾಯಕ್. ಪೌರಾಡಳಿತ ಸಚಿವರ ಗಮನಕ್ಕೆ ತರುತ್ತೇನೆ. ವರ್ಗಾವಣೆ ಮಾಡಿದಾಗ ಯಾರನ್ನೋ ಹಿಡಿದು ಇಲ್ಲಿಗೇ ಬಂದು ಜನರಿಗೆ ಮೋಸ ಮಾಡಿ ಈಗ ತಗಲಾಕ್ಕೊಂಡಿದ್ದಾರೆ. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಮಾತೃ ಇಲಾಖೆಗೆ ವಾಪಸ್ ತೆರಳಿ’ ಎಂದು ಆಕ್ರೋಶವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT