ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಮಾರುಕಟ್ಟೆಗೆ ಸೌಲಭ್ಯ ಒದಗಿಸಲು ಕ್ರಮ

Last Updated 21 ಸೆಪ್ಟೆಂಬರ್ 2022, 5:10 IST
ಅಕ್ಷರ ಗಾತ್ರ

ನಂಗಲಿ (ಮುಳಬಾಗಿಲು): ಎನ್. ವಡ್ಡಹಳ್ಳಿ ಎಪಿಎಂಸಿ ಟೊಮೆಟೊ ಉಪ ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯ ಇಲ್ಲದಿರುವ ಕುರಿತು‘ಸಮಸ್ಯೆಗಳ ಆಗರ ಟೊಮೆಟೊ ಮಾರುಕಟ್ಟೆ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ವರದಿಗೆ ಸ್ಪಂದಿಸಿದ ಎಪಿಎಂಸಿ ಅಧಿಕಾರಿಗಳು ಮಂಗಳವಾರ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ಮಾರುಕಟ್ಟೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಇಡೀ ಮಾರುಕಟ್ಟೆಯಲ್ಲಿದ್ದ ಕಸಕಡ್ಡಿಗಳನ್ನು ಕೆಲಸಗಾರರಿಂದ ಸ್ವಚ್ಛಗೊಳಿಸಿದರು. ಮುಚ್ಚಲ್ಪಟ್ಟಿದ್ದ ಶೌಚಾಲಯದ ಬೀಗ ತೆಗೆದು ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಬರುವ ಜನರ ಬಳಕೆಗೆ ಅನುವು ಮಾಡಿಕೊಟ್ಟರು.

ಮಾರುಕಟ್ಟೆಗೆ ಬರುವವರು ಬಯಲು ಶೌಚಾಲಯಕ್ಕೆ ಹೋಗುತ್ತಿದ್ದರು. ಶೌಚಾಲಯಗಳನ್ನು ಯಾರೂ ಬಳಕೆ ಮಾಡದ ಕಾರಣ ಮುಚ್ಚಲಾಗಿತ್ತು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಶೌಚಾಲಯ ಮುಚ್ಚುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ‘4.31 ಗುಂಟೆ ವಿಸ್ತೀರ್ಣದ ಮಾರುಕಟ್ಟೆಗೆ ಕಾಂಪೌಂಡ್ ವ್ಯವಸ್ಥೆ ಇಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಸೌಲಭ್ಯ ಒದಗಿಸಿದರೂ ಪ್ರಯೋಜನವಾಗುತ್ತಿಲ್ಲ. ಈಗಾಗಲೇ, ಕಾಂಪೌಂಡ್ ಮತ್ತು ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದರು.

ಪ್ರಸಕ್ತ ವರ್ಷದ ಕ್ರಿಯಾಯೋಜನೆಯಲ್ಲಿ ರೈತರ ವಿಶ್ರಾಂತಿ ಭವನ ನಿರ್ಮಾಣದ ಕಾಮಗಾರಿ ಸೇರಿಸಿ ಮಾರುಕಟ್ಟೆಯ ಆಡಳಿತ ಕಚೇರಿಯ ಮೇಲ್ಭಾಗದಲ್ಲಿ ರೈತ ವಿಶ್ರಾಂತಿ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈಗಿರುವ ಕಚೇರಿಯ ಆವರಣದಲ್ಲೇ ವಿಶ್ರಾಂತಿ ಭವನ ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾರುಕಟ್ಟೆ ಯಿಂದ ಈಗಾಗಲೇ ₹ 80 ಲಕ್ಷ ಕ್ರೋಡೀಕರಣವಾಗಿದೆ. ಇದರಲ್ಲಿ ₹ 35 ಲಕ್ಷವನ್ನು ಕಸ ವಿಲೇವಾರಿ ಘಟಕ ಸ್ಥಾಪಿಸಲು ಜಮೀನು ಖರೀದಿಗೆ ಸರ್ಕಾರಕ್ಕೆ ಪಾವತಿಸಲಾಗುವುದು. ಹೊರಗುತ್ತಿಗೆ ಸಿಬ್ಬಂದಿಗೆ ಸಂಬಳ ಮತ್ತು ಇನ್ನಿತರೆ ಕೆಲಸಗಳಿಗೆ ₹ 35 ಲಕ್ಷ ಬಳಕೆ ಮಾಡಿ ಉಳಿದ ಹಣವನ್ನು ಮಾರುಕಟ್ಟೆಯ ಇತರೇ ಚಟುವಟಿಕೆಗಳಿಗೆ ಬಳಸಲಾಗುವುದು. ₹ 60 ಲಕ್ಷ ಸಾಲವಿದೆ. ಮುಂದೆ ಕ್ರೋಡೀಕರಣವಾಗುವ ಹಣದಲ್ಲಿ ಸಾಲ ತೀರಿಸಿ ನಂತರ ಮಾರುಕಟ್ಟೆ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.

ಸಹಾಯಕ ಕಾರ್ಯದರ್ಶಿ ವೇಣುಗೋಪಾಲ್, ಎಪಿಎಂಸಿ ಮಾಜಿ ನಿರ್ದೇಶಕ ನಗವಾರ ಎನ್.ಆರ್. ಸತ್ಯಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT