ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ರಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

ಯುವ ಸಂಸತ್ತು ಅಣಕು ಅಧಿವೇಶನದಲ್ಲಿ ಯುವಕ–ಯುವತಿಯರಿಗೆ ಕಿವಿಮಾತು
Last Updated 11 ಫೆಬ್ರುವರಿ 2021, 13:47 IST
ಅಕ್ಷರ ಗಾತ್ರ

ಕೋಲಾರ: ‘ಯುವಕ ಯುವತಿಯರು ಕ್ರಿಯಾತ್ಮಕವಾಗಿ ಕಾರ್ಯಪ್ರವೃತ್ತರಾದಾಗ ಮಾತ್ರ ಉದ್ದೇಶಿತ ಗುರಿ ಸಾಧನೆ ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ್‌ ಅಭಿಪ್ರಾಯಪಟ್ಟರು.

ಜಿಲ್ಲಾ ನೆಹರೂ ಯುವ ಕೇಂದ್ರ, ಭಾರತ್ ಸ್ಕೌಟ್ಸ್- ಮತ್ತು ಗೈಡ್ಸ್, ರಾಷ್ಟ್ರೀಯ ಸೇವಾ ಯೋಜನೆ, ಯಂಗ್ ಇಂಡಿಯಾ ಡೆವೆಲಪ್ಮೆಂಟ್‌ ಸಂಸ್ಥೆ ಹಾಗೂ ಜನವಿಕಾಸ ಯುವ ಜನ ಸೇವಾ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುವ ಸಂಸತ್ತು ಅಣಕು ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

‘ಸಾಧನೆಯಿಂದ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಸಾಧನೆಗೆ ಪರಿಶ್ರಮ ಅಗತ್ಯ ಎಂಬುದನ್ನು ಅರಿಯಬೇಕು. ಸಾಧನೆಯು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಯುವಕ ಯುವತಿಯರು ಸರ್ಕಾರದ ಯೋಜನೆಗಳನ್ನು ಅರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಯುವ ಜನತೆ ಮೊದಲು ಮಾಹಿತಿ ಸಂಗ್ರಹಿಸಿ ಧನಾತ್ಮಕವಾಗಿ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು. ಯುವಕ ಯುವತಿಯರು ಸ್ಥಳೀಯ ಸರ್ಕಾರ ರಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಯುವಜನರ ಆಶಯ ಈಡೇರುತ್ತವೆ. ಇದರಿಂದ ಸಮಾಜದಲ್ಲಿ ಪ್ರಗತಿ ಕಾಣಬಹುದು’ ಎಂದು ಹೇಳಿದರು.

‘ತಲಾ ಆದಾಯ ಹೆಚ್ಚಿಸುವಲ್ಲಿ ಎಲ್ಲರ ಪಾತ್ರ ನಿರ್ಣಾಯಕ. ಪೌಷ್ಟಿಕ ಆಹಾರ ಸೇವನೆ ಮೂಲಕ ಆರೋಗ್ಯವಂತರಾಗಬೇಕು. ಶ್ರಮ ಜೀವಿಗಳಾಗಿ ದುಡಿದು ಜೀವನ ಮಟ್ಟ ಸುಧಾರಿಸಿಕೊಂಡರೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ಜನರ ತಲಾ ಆದಾಯ ಹೆಚ್ಚಾದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ’ ಎಂದು ತಿಳಿಸಿದರು.

ಪ್ರಾಕೃತಿಕ ಅಸಮತೋಲನ: ಆಧುನಿಕತೆ ಬೆಳೆದಂತೆ ಬೃಹತ್ ಕಟ್ಟಡಗಳು ನಿರ್ಮಾಣಗೊಳುತ್ತಿವೆ. ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ. ಕೇಂದ್ರ ಸರ್ಕಾರ ಸ್ವಚ್ಛ ಭಾರತಕ್ಕಾಗಿ ಸ್ವಚ್ಛತಾ ಆಂದೋಲನ ಜಾರಿಗೊಳಿಸಿದೆ. ಜತೆಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್‌ ನಿಷೇಧಿಸಿದೆ. ಪ್ಪಾಸ್ಟಿಕ್‌ ವಸ್ತುಗಳ ದುಷ್ಪರಿಣಾಮದ ಬಗ್ಗೆ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಯುವಕ ಯುವತಿಯರು, ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಪರಿಸರ ಸಂರಕ್ಷಣೆಗೆ ಪೂರಕವಾದ ಸ್ವಚ್ಛತಾ ಆಂದೋಲನ, ಸಸಿ ನೆಡುವುದು, ನರೇಗಾ ಅನುಷ್ಠಾನ, ಜಲ ಸಂಪನ್ಮೂಲಗಳ ರಕ್ಷಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಕವರ್‌ ಬಳಕೆ ಕಡಿಮೆ ಮಾಡಬೇಕು’ ಎಂದರು.

ಯುವ ಸಂಸತ್ತು ಕಲಾಪದಲ್ಲಿ ಜಿಲ್ಲಾ ನೆಹರೂ ಯುವ ಕೇಂದ್ರದ ಪ್ರವೀಣ್‌ಕುಮಾರ್ ಸಭಾಪತಿ ಜವಾಬ್ದಾರಿ ನಿಭಾಯಿಸಿದರು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟಕ ಬಾಬು, ನಾರಾಯಣಸ್ವಾಮಿ ತೀರ್ಪುಗಾರರಾಗಿದ್ದರು. ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಸರಣ್ಯಾ, ರಾಷ್ಟ್ರೀಯ ಸೇವಾ ಯೋಜನೆ ನೋಡಲ್ ಅಧಿಕಾರಿ ಹರೀಶ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT