ಸೋಮವಾರ, ಏಪ್ರಿಲ್ 6, 2020
19 °C

ಜನರ ಅಲೆದಾಟ ತಪ್ಪಿಸಲು ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತಾಲ್ಲೂಕು ಕಚೇರಿಗೆ ಜನರ ಅಲೆದಾಟ ತಪ್ಪಿಸುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ಕಂದಾಯ ಹಾಗೂ ಪಿಂಚಣಿ ಅದಾಲತ್ ನಡೆಸಲಾಗುತ್ತಿದ್ದು, ಜನರು ಇದರ ಸದುಪಯೋಗ ಪಡೆಯಬೇಕು’ ಎಂದು ತಹಶೀಲ್ದಾರ್‌ ಆರ್.ಶೋಭಿತಾ ಸಲಹೆ ನೀಡಿದರು.

ತಾಲ್ಲೂಕಿನ ಸೀತಿ ಗ್ರಾಮದಲ್ಲಿ ಗುರುವಾರ ನಡೆದ ಕಂದಾಯ ಹಾಗೂ ಪಿಂಚಣಿ ಅದಾಲತ್‌ನಲ್ಲಿ ಸಾರ್ವಜನಿಕರ ಅರ್ಜಿ ಸ್ವೀಕರಿಸಿ ಮಾತನಾಡಿ, ‘ಪಹಣಿಗಳಲ್ಲಿ ಲೋಪದೋಷ, ಪವತಿ ವಾರಸುದಾರಿಕೆ ಖಾತೆ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸಗಳಲ್ಲಿ ದಾಖಲೆಪತ್ರ ಸಮೇತ ಅರ್ಜಿ ಸಲ್ಲಿಸಿದರೆ ನಿಮ್ಮ ಕೆಲಸ ಸುಲಭವಾಗಿ ಹಾಗೂ ಶೀಘ್ರವಾಗಿ ಆಗುತ್ತದೆ’ ಎಂದರು.

‘ರೈತರು ಜಮೀನಿನ ದಾಖಲಾತಿಗಾಗಿ ಅಲೆದಾಡುತ್ತಿರುವುದು, ಸಿಬ್ಬಂದಿಯಿಂದ ಕಿರುಕುಳ ಅನುಭವಿಸುತ್ತಿರುವುದನ್ನು ಗಮನಿಸಿದ ಸರ್ಕಾರ ಅದಾಲತ್ ಆಯೋಜಿಸುತ್ತಿದೆ. ರೈತರ ಸಮಸ್ಯೆಗಳಿಗೆ ಹೋಬಳಿ ಮಟ್ಟದಲ್ಲೇ ಪರಿಹಾರ ಸಿಗಬೇಕು ಎಂಬುದು ಇದರ ಉದ್ದೇಶ’ ಎಂದು ಹೇಳಿದರು.

‘ಕೆಲ ಸಂದರ್ಭಗಳಲ್ಲಿ ಜನರು ಕೊಡುವ ದಾಖಲೆಪತ್ರ ಸರಿಯಿಲ್ಲದಿದ್ದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗುವುದು ವಿಳಂಬವಾಗುತ್ತದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಗಮನಹರಿಸಿ ಕ್ರಮ ವಹಿಸಬೇಕಿರುವುದರಿಂದ ರೈತರು, ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಸಾರ್ವಜನಿಕರಿಂದ ಒಟ್ಟು 66 ಅರ್ಜಿ ಬಂದಿದ್ದು, ಈ ಪೈಕಿ 16 ಅರ್ಜಿಗಳು ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗೆ ಸಂಬಂಧಿಸಿದ ಅರ್ಜಿಗಳಾಗಿವೆ. ಉಳಿದಂತೆ 50 ಅರ್ಜಿಗಳು ಖಾತೆ ಬದಲಾವಣೆ, ಪವತಿ ವಾರಸುದಾರಿಕೆ ಖಾತೆ, ತಿದ್ದುಪಡಿಗೆ ಸಂಬಂಧಿಸಿವೆ. ಈ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರವೇ ಪರಿಹರಿಸುತ್ತೇವೆ’ ಎಂದು ಉಪ ತಹಶೀಲ್ದಾರ್ ಹೇಮಲತಾ ಭರವಸೆ ನೀಡಿದರು.

ಕಂದಾಯ ನಿರೀಕ್ಷಕ ರಮೇಶ್, ಗ್ರಾಮ ಲೆಕ್ಕಿಗರಾದ ಸುಬ್ರಹ್ಮಣ್ಯ, ಅರುಣ್‌ಕುಮಾರ್, ಮಂಜುನಾಥ್, ಹರ್ಷವರ್ಧನ, ರೇಖಾ, ನವ್ಯಾ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು