ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಸ್ಥೈರ್ಯ ಕುಗ್ಗಿಸಬೇಡಿ: ಡಿಡಿಪಿಐಗೆ ಸಹ ಶಿಕ್ಷಕರು-ವಿಶೇಷ ಶಿಕ್ಷಕರ ಮನವಿ

ಹೆಚ್ಚುವರಿ ಹುದ್ದೆ ಗುರುತು: ಅವೈಜ್ಞಾನಿಕ
Last Updated 5 ಏಪ್ರಿಲ್ 2022, 13:15 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರಿ ಪ್ರೌಢ ಶಾಲೆಗಳಲ್ಲಿನ ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವ ಅವೈಜ್ಞಾನಿಕ ಪ್ರಕ್ರಿಯೆ ಕೈಬಿಡಬೇಕು. ಸಹ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು’ ಎಂದು ಸಹ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು ಇಲ್ಲಿ ಮಂಗಳವಾರ ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

‘ಸರ್ಕಾರದ ಸುತ್ತೋಲೆಯಲ್ಲಿ 2022ನೇ ಸಾಲಿನ ಹೆಚ್ಚುವರಿ ಪ್ರಕ್ರಿಯೆಯಲ್ಲಿ ಅನೇಕ ನ್ಯೂನತೆಗಳಿದ್ದು, ಕರ್ನಾಟಕ ‍ಪಬ್ಲಿಕ್‌ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರ ಅನುಪಾತ 40:1 ಆಗಿದ್ದು, ಸರ್ಕಾರಿ ಪ್ರೌಢ ಶಾಲೆಗಳಲ್ಲಿ 70:1 ಮಾಡಿರುವುದು ಅವೈಜ್ಞಾನಿಕ. ಇದು ಮಕ್ಕಳ ನಡುವೆ ತಾರತಮ್ಯ ಮೂಡಿಸಿ, ಮಕ್ಕಳ ಹಕ್ಕುಗಳನ್ನು ದಮನ ಮಾಡುವ ಉದ್ದೇಶದಿಂದ ಕೂಡಿದೆ. ಮಾಧ್ಯಮವಾರು ಬೋಧನೆಗೂ ಅಡ್ಡಿಯಾಗಿದೆ’ ಎಂದು ಸಹ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು ಅಸಮಾಧಾನ ವ್ಯಕ್ತ‍ಪಡಿಸಿದರು.

‘2019-20ನೇ ಸಾಲಿನಲ್ಲಿ ಹೆಚ್ಚುವರಿ ಎಂದು ಗುರುತಿಸಿ ಸುಮಾರು ಶಿಕ್ಷಕರನ್ನು ಸ್ಥಳಾಂತರಿಸಲಾಗಿತ್ತು. ನಂತರ ವರ್ಗಾವಣೆ ಸಂದರ್ಭದಲ್ಲಿ ಸಂಬಂಧಿಸಿದ ಸುಮಾರು ಶಾಲೆಗಳಲ್ಲಿ ಹುದ್ದೆ ಸೃಷ್ಟಿಸಿ ವರ್ಗಾವಣೆ ನೀಡಲಾಯಿತು. 2022–23ನೇ ಸಾಲಿನ ಹೆಚ್ಚುವರಿ ಆದೇಶದ ಪ್ರಕಾರ ಜಿಲ್ಲೆಗಳಲ್ಲಿ ಗುರುತಿಸಿರುವಂತೆ ಶಾಲೆಗಳಲ್ಲೇ ಸದರಿ ಹುದ್ದೆಗಳನ್ನು ಹೆಚ್ಚುವರಿಯೆಂದು ಗುರುತಿಸಿರುವುದು ಶಿಕ್ಷಕ ವೃಂದಕ್ಕೆ ಮಾಡಿದ ಅನ್ಯಾಯ. ಇದರಿಂದ ಮಕ್ಕಳ ಕಲಿಕಾ ಪ್ರಗತಿಗೆ ಮಾರಕವಾಗಿದೆ’ ಎಂದು ತಿಳಿಸಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಕಲ ಸಿದ್ಧತೆ ನಡೆದಿದ್ದು, ಅದರಡಿ ಕೌಶಲಾಧಾರಿತ ಶಿಕ್ಷಣ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಇಂತಹ ಸಂದರ್ಭದಲ್ಲಿ ವೃತ್ತಿಯಾಧಾರಿತ ವಿಶೇಷ ಶಿಕ್ಷಕರ ಸೇವೆಯನ್ನು ಕಡೆಗಣಿಸುವುದು ಸರಿಯಲ್ಲ’ ಎಂದು ಹೇಳಿದರು.

ಮಾರಕ ಪರಿಣಾಮ: ‘ಶಾಲಾ ವಾತಾವರಣ, ಪರಿಸರ ಸಂರಕ್ಷಣೆಯಲ್ಲಿ ವೃತ್ತಿ ಶಿಕ್ಷಕರು, ವಿಶೇಷ ಶಿಕ್ಷಕರ ಪಾತ್ರ ನಿರ್ಣಾಯಕ. ಪರಿಸರ ಉಳಿಸುವ ಮೂಲಕ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವ ಈ ಹುದ್ದೆಗಳನ್ನು ರದ್ದು ಮಾಡಿದರೆ ಸಮಾಜದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಶಾಲೆಗಳಲ್ಲಿ ಗಿಡ ಮರ ಬೆಳೆಸುವುದರ ಜತೆಗೆ ಬಿಸಿಯೂಟಕ್ಕೆ ಅಗತ್ಯ ಸೊಪ್ಪು, ತರಕಾರಿ ಬೆಳೆಸುವಲ್ಲೂ ವಿಶೇಷ ಶಿಕ್ಷಕರ ಪಾತ್ರ ಮುಖ್ಯವಾಗಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ಅಭಿಪ್ರಾಯಪಟ್ಟರು.

‘ಪ್ರತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿರುವುದರಿಂದ ವೃತ್ತಿ ಆಧಾರಿತ ಶೈಕ್ಷಣಿಕ ತರಗತಿಗಳ ಕಲಿಕೆಗೆ ತೊಂದರೆಯಾಗುತ್ತದೆ. ಇಲಾಖೆ ಕೈಗೊಂಡಿರುವ ಈ ಅವೈಜ್ಞಾನಿಕ ನಿರ್ಧಾರ ಕೈಬಿಡಬೇಕು ಮತ್ತು ಶಿಕ್ಷಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಸೃಷ್ಟಿಸಬೇಕು’ ಎಂದು ಕೋರಿದರು.

ಶಿಕ್ಷಕರಾದ ಬಿ.ಎ.ಕವಿತಾ, ಶಿವಕುಮಾರ್, ಓ.ಮಲ್ಲಿಕಾರ್ಜುನ್, ಶೈಲಾ, ನಾರಾಯಣರೆಡ್ಡಿ, ಉಮೇರಾ ಫಾತಿಮಾ, ಜಯಂತಿ, ಜ್ಯೋತಿ, ರಾಮಲಿಂಗಪ್ಪ, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಧನಲಕ್ಷ್ಮಿ, ಪದಾಧಿಕಾರಿಗಳಾದ ಆಂಜನೇಯ, ಮುರಳಿ, ಶ್ರೀನಿವಾಸಲು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT