ಮಂಗಳವಾರ, ಅಕ್ಟೋಬರ್ 22, 2019
22 °C
ವಸ್ತು ಪ್ರದರ್ಶನದಲ್ಲಿ ರೈತರಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಸಲಹೆ

ನೂತನ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ

Published:
Updated:
Prajavani

ಕೋಲಾರ: ಹೂವಿನ ಬೆಳೆಗಳಲ್ಲಿ ಸಂರಕ್ಷಿತ ಬೇಸಾಯ ಕ್ರಮಗಳ ಕುರಿತು ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ವೀಕ್ಷಿಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

ತೋಟಗಾರಿಕಾ ಮಹಾವಿದ್ಯಾಲಯದ ಹೂವಿನ ಬೆಳೆ ಮತ್ತು ಉದ್ಯಾನ ಕಲೆಗಳ ವಿಭಾಗದಿಂದ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಸೇವಂತಿಗೆ ಬೆಳೆಯಲ್ಲಿ ಸಂರಕ್ಷಿತ ಬೇಸಾಯ ಕ್ರಮಗಳ ಪ್ರಾಯೋಗಿಕ ಪ್ರದರ್ಶನ, ಗುಲಾಬಿಯಲ್ಲಿನ ಬೇಸಾಯ ಕ್ರಮ ಹಾಗೂ ಮೌಲ್ಯವರ್ದನೆ, ಆಂಥೊರಿಯಂ ಬೆಳೆಯಲ್ಲಿನ ಬೇಸಾಯ ಕ್ರಮಗಳ ಕುರಿತ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಸೀತಾಳೆ ಹೂವುಗಳ ಪ್ರದರ್ಶನ ಹಾಗೂ ಸಂರಕ್ಷಿತ ಬೇಸಾಯದ ಮಾಹಿತಿ, ಜರ್ಬೆರಾ ತಳಿ ಹೂವುಗಳ ಪ್ರದರ್ಶನ, ರಜಾವರಿ ಹಾಗೂ ಇತರ ಬೇಸಾಯ ಕ್ರಮ, ಕಾರ್ನೇಶನ್ ಬೆಳೆ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಹೂವುಗಳಲ್ಲಿನ ಮೌಲ್ಯವರ್ಧಿತ ಉತ್ಪನ್ನಗಳು, ವಿವಿಧ ರೀತಿಯ ಹಸಿರು ಮನೆ ಆಕಾರಗಳು ಮತ್ತು ಅವುಗಳ ಉಪಯೋಗ, ಹಸಿರು ಮನೆಯಲ್ಲಿ ಸೆನ್ಸರ್‌ ಆಧಾರಿತ ಹೂವಿನ ಬೇಸಾಯ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತಯಾರಿಸಿದ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ‘ರೈತರು ತೋಟಗಾರಿಕಾ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ವಿವಿಧ ರೀತಿಯ ನೂತನ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ವಿವಿಧ ಬಗೆಯ ಹೂಗಳನ್ನು ಬೆಳೆಯಲು ಸೂಕ್ತ ವಾತಾವರಣ, ಹೆಚ್ಚು ಫಸಲು ಬೆಳೆಯಲು ಅನುಸರಿಸಬೇಕಾದ ಕ್ರಮಗಳನ್ನು ತಿಳಿಯಬೇಕು’ ಎಂದು ಕಿವಿಮಾತು ಹೇಳಿದರು.

‘ಪಾಲಿಹೌಸ್‌ಗಳಲ್ಲಿ ಸೆನ್ಸರ್ ಬಳಕೆ ಮಾಡಿ ತೇವಾಂಶ, ಉಷ್ಣಾಂಶ, ಬೆಳಕಿನ ವ್ಯವಸ್ಥೆ ನಿಯಂತ್ರಿಸಲು ಮೊಬೈಲ್ ಆ್ಯಪ್ ತಂತ್ರಜ್ಞಾನ ಅಳವಡಿಕೆ ಬಗ್ಗೆ ವಿದ್ಯಾರ್ಥಿಗಳು ಮಾದರಿಗಳನ್ನು ತಯಾರಿಸಿ ಅರಿವು ಮೂಡಿಸಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ರೀತಿಯ ಮಾದರಿಗಳನ್ನು ತಯಾರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಲಿದೆ’ ಎಂದು ಹೇಳಿದರು.

ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಬಿ.ಜೆ.ಪ್ರಕಾಶ್‌, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತುಳಸಿರಾಮ್, ಬೇಸಾಯ ಶಾಸ್ತ್ರದ ಪ್ರಾಧ್ಯಾಪಕ ಟಿ.ಬಿ.ಬಸವರಾಜು, ಸಹಾಯಕ ಪ್ರಾಧ್ಯಾಪಕ ರಾಜೇಶ್, ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎನ್.ಅಶ್ವತ್ಥ್‌ನಾರಾಯಣರೆಡ್ಡಿ, ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ವಿ.ಎ.ರಾಮಚಂದ್ರ ಹಾಜರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)