ಭಾನುವಾರ, ಜನವರಿ 24, 2021
28 °C

ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಅವರು ಸಮಾಜಮುಖಿಯಾಗಿ ಬೆಳೆಯುವಂತೆ ಪ್ರೇರಣೆ ನೀಡಬೇಕು ಎಂದು ಡಯಟ್ ಪ್ರಾಂಶುಪಾಲ ಕೆ.ಎನ್. ಜಯರಾಮರೆಡ್ಡಿ ಹೇಳಿದರು.

ತಾಲ್ಲೂಕಿನ ಇಮರಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ, ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಎ. ವೆಂಕಟರೆಡ್ಡಿ ದಂಪತಿಯನ್ನು ಸನ್ಮಾನಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಗುರಿಯತ್ತ ಸಾಗಲು ಹಾಗೂ ಶಿಸ್ತಿನಿಂದ ಕಲಿಯಲು ಪೂರಕ ವಾತಾವರಣ ಕಲ್ಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ಹೇಳಿದರು.

ವೆಂಕಟರೆಡ್ಡಿ ರಾಜ್ಯದಲ್ಲಿ ಮಾದರಿ ಶಿಕ್ಷಕರಾಗಿ ಕೆಲಸ ಸಲ್ಲಿಸಿದ್ದಾರೆ. ಅವರು ನೀಡಿದ ಪ್ರೇರಣೆ ಹಾಗೂ ವಿನೂತನ ಯೋಜನೆಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಯೋಜನವಾಗಿದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಿ ಉತ್ತಮ ಶಿಕ್ಷಣ ನೀಡಿದ್ದಾರೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಉಮಾದೇವಿ ಮಾತನಾಡಿ, ವೆಂಕಟರೆಡ್ಡಿ ಶಿಕ್ಷಣ ಇಲಾಖೆಯಲ್ಲಿ 36 ವರ್ಷ ಕೆಲಸ ಮಾಡಿದ್ದಾರೆ. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿದ್ದಾರೆ. ಉಳಿದ ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಭೈರವೇಶ್ವರ ವಿದ್ಯಾ ನಿಕೇತನದ ಕಾರ್ಯದರ್ಶಿ ಎಂ. ಶ್ರೀರಾಮರೆಡ್ಡಿ ಮಾತನಾಡಿ, ಶಿಕ್ಷಕರಿಗೆ ನಿವೃತ್ತಿ ಇರುವುದಿಲ್ಲ. ಇಲಾಖೆಯಿಂದ ಹೊರ ಬಂದರೂ ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡುವ ಶಕ್ತಿ ಅವರಲ್ಲಿರುತ್ತದೆ. ಸಮಾಜ ಅವರ ಸೇವೆಯನ್ನು ಪಡೆದುಕೊಳ್ಳಬೇಕು. ಸ್ವಸ್ಥ ಸಮಾಜ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಡಯಟ್‌ನ ಹಿರಿಯ ಉಪನ್ಯಾಸಕ ಗಂಗಪ್ಪ, ಪುರುಷೋತ್ತಮ್, ಬಿಆರ್‌ಸಿ ವಸಂತ, ಸಿಆರ್‌ಪಿ ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿರೆಡ್ಡಿ, ಮುಖಂಡ ಜಿ. ಮಂಜುನಾಥ ರೆಡ್ಡಿ, ಜಯರಾಮ ರೆಡ್ಡಿ, ಜಿ.ಸಿ. ಶಂಕರರೆಡ್ಡಿ, ವಿ. ಗೋವಿಂದಪ್ಪ, ಎಂ. ನಾಗರಾಜ್, ತಿಪ್ಪಣ್ಣ, ಮಂಜುನಾಥರೆಡ್ಡಿ, ಚೆನ್ನಾರೆಡ್ಡಿ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.