ಗುರುವಾರ , ಜನವರಿ 23, 2020
28 °C
ಮತದಾರರ ಮಿಂಚಿನ ನೋಂದಣಿಗೆ ಚಾಲನೆ

ಕೋಲಾರ: ಬಲಿಷ್ಠ ಭಾರತ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಯುವಕರು ಮಿಂಚಿನ ನೋಂದಣಿಯಲ್ಲಿ ಪಾಲ್ಗೊಂಡು ಪ್ರಜಾಸತ್ತಾತ್ಮಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಲಹೆ ನೀಡಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಾಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 3 ದಿನಗಳ ಮತದಾರರ ಮಿಂಚಿನ ನೋಂದಣಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

‘ಜಿಲ್ಲೆಯಲ್ಲಿ ಜ.೬ ರಿಂದ ಜ.೮ ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೂಳ್ಳುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಮೂಲಕ ಮಿಂಚಿನ ನೋಂದಣಿ ವಿಶೇಷ ಅಭಿಯಾದ ಯಶಸ್ವಿಗಾಗಿ ಎಲ್ಲರೂ ಸಹಕರಿಸಬೇಕು’ ಎಂದರು.

‘ಯುವಕ ಯುವತಿಯುರು 2020ರ ಜನವರಿ 1ಕ್ಕೆ 18 ವರ್ಷ ಪೂರೈಸಿದ ಯುವಕ ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಈಗಾಗಲೇ ಸೇರ್ಪಡೆಗೊಂಡಿರುವವರು ಯಾವುದಾದರೂ ತಿದ್ದುಪಡಿಗಳು ಇದ್ದಲ್ಲಿ ನಮೂನೆ -೮ ಅನ್ನು ಭರ್ತಿ ಮಾಡಿ ನೀಡುವ ಮೂಲಕ ಸರಿಪಡಿಸಿಕೊಳ್ಳಬಹುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿರುವ ಪ್ರತಿ ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೋಂದಣಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ವಿಳಾಸ ಮತ್ತು ವಯಸ್ಸಿನ ದೃಢೀಕರಣ, ಒಂದು ಪಾಸ್ ಪೋರ್ಟ್ ಅಳತೆ ಭಾವಚಿತ್ರ ಇದ್ದರೆ ಸಾಕು. ಮತದಾರರ ಪಟ್ಟಿಯಲ್ಲಿ ನಿಮ್ಮ ಮತ್ತು ಕುಟುಂಬದ ಸದಸ್ಯರ ಹೆಸರು ಇದೆಯೇ ಇಲ್ಲವೇ ಎಂಬುದರ ಬಗ್ಗೆ ಖಾತರಿ ಮಾಡಿಕೊಳ್ಳಬೇಕು’ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಗಳಾದ ಸೌಮ್ಯ, ಗೋವಿಂದಗೌಡ, ನಗರಸಭೆ ಪೌರಾಯುಕ್ತ ಶ್ರೀಕಾಂತ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು