ಯೋಜನೆಗಳ ಪ್ರಯೋಜನೆ ಪಡೆದುಕೊಳ್ಳಲು ಸಲಹೆ

ಗುರುವಾರ , ಜೂನ್ 27, 2019
29 °C

ಯೋಜನೆಗಳ ಪ್ರಯೋಜನೆ ಪಡೆದುಕೊಳ್ಳಲು ಸಲಹೆ

Published:
Updated:
Prajavani

ಕೋಲಾರ: ‘ಅಂಗವಿಕಲ ಮಕ್ಕಳಲ್ಲಿ ಕೌಶಲಾಭಿವೃದ್ಧಿ ಹೆಚ್ಚಿಸುವ ನಿಟ್ಟಿನಲ್ಲಿ ತಿಂಗಳಿಗೆ ಒಂದು ಕಾರ್ಯಕ್ರಮದಂತೆ ಹೆಚ್ಚಿನ ಕಾರ್ಯಚಟುವಟಿಕೆ ನಡೆಸುತ್ತೇವೆ’ ಎಂದು ಅಂಗವಿಕಲರು ಮತ್ತು ಸಬಲೀಕರಣ ಇಲಾಖೆ ಉಪ ನಿರ್ದೇಶಕ ವೆಂಕಟರಾಮ್ ಹೇಳಿದರು.

ಇಂಚರ ಸಂಸ್ಥೆ ಹಾಗೂ ಬೆಸ್ಟ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯು ಇಲ್ಲಿನ ಅಂತರಗಂಗೆ ಬುದ್ಧಿಮಾಂದ್ಯರ ವಸತಿ ಶಾಲೆಯಲ್ಲಿ ಶನಿವಾರ ವಿಶೇಷ ಅಂಗವಿಕಲ ಮಕ್ಕಳಿಗೆ ಹಮ್ಮಿಕೊಂಡಿದ್ದ ಚಿಲಿಪಿಲಿ ಮೇಳ, ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಮಾತಿಗಿಂತ ಕೆಲಸದ ಕಡೆಗೆ ಆಸಕ್ತಿ ವಹಿಸುವುದು ಉತ್ತಮ. ಅಂಗವಿಕಲರೆಂಬ ಕಾರಣಕ್ಕೆ ಕೊರಗಿಕೊಂಡಿರುವ ಅವಶ್ಯಕತೆಯಿಲ್ಲ. ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಇಲಾಖೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಕಲ್ಪಿಸಲಾಗುತ್ತಿದೆ. ಇಲಾಖೆಗೆ ಅರ್ಜಿ ಸಲ್ಲಿಸುವ ಮೂಲಕ ಸೌಕರ್ಯ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಅಂಗವಿಕಲರು ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು ವಿವಿಧ ಯೋಜನೆಗಳ ಮೂಲಕ ಬ್ಯಾಂಕ್‌ಗಳಿಂದ ಸಾಲ ನೀಡಲಾಗುತ್ತಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಜತೆಗೆ ಇಲಾಖೆಯಿಂದ ಸ್ವಯಂ ಉದ್ಯಮ ನಡೆಸುವವರಿಗೆ ಕೌಶಲ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

ಇಂಚರ ಸಂಸ್ಥೆಯ ಮುಖ್ಯಸ್ಥ ನಾರಾಯಣಸ್ವಾಮಿ ಮಾತನಾಡಿ, ‘ಜನಪ್ರತಿನಿಧಿಗಳು ಮಕ್ಕಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವರಿಗಾಗಿ ಪ್ರತ್ಯೇಕ ಬಜೆಟ್ ಇದುವರೆಗೂ ನೀಡದಿರುವುದು ವಿಷಾಧನೀಯ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಮಾಜದಿಂದ ದೂರ ಉಳಿದಿರುವ ಮಕ್ಕಳಿಗಾಗಿ ವಿಶೇಷ ತರಬೇತಿ, ಕಾರ್ಯಕ್ರಮ, ಶಿಬಿರ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷವೂ ಇಲಾಖೆಯಿಂದ ಬೇಸಿಗೆ ಶಿಬಿರ ನಡೆಸಲಾಗುತ್ತಿದ್ದು, ಹೆಚ್ಚು ಮಂದಿ ಪಾಲ್ಗೊಂಡು ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ಕೋರಿದರು.

ಮನ್ವಂತರ ಪ್ರಕಾಶನ ಟ್ರಸ್ಟ್ ಅಧ್ಯಕ್ಷ ಅನಂತರಾಮ್ ಮಾತನಾಡಿ, ‘ದೈಹಿಕ- ಮಾನಸಿಕವಾಗಿ ಆರೋಗ್ಯದಿಂದ ಇರುವವರ ಸಾಧನೆಗಿಂತ ಅಂಗವಿಕಲರ ಸಾಧನೆಗೆ ಬೆಲೆಕಟ್ಟಲಾರದು. ನಿಮ್ಮ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ್ದೇ ಆದಲ್ಲಿ ಭಾರತದ ಉತ್ತಮ ಪ್ರಜೆಗಳ ಸಾಲಿನಲ್ಲಿ ನೀವೂ ಸೇರಿಕೊಳ್ಳುತ್ತೀರಿ’ ಎಂದರು.

‘ಮನುಷ್ಯರು ಹೀಗೆ ಇರಬೇಕು ಎಂದು ದೇವರು ಸೃಷ್ಠಿಸಿಲ್ಲ. ಕಾರಣಾಂತರಗಳಿಂದಾಗಿ ಅಂಗವಿಕಲರಾಗಿದ್ದೀರಿ. ಇದಕ್ಕೆ ಸವಾಲಾಗಿ ನೀವು ಬೆಳೆಯಬೇಕೇ ಹೊರತು ಕೊರಗಬಾರದು. ನಿಮಗೆ ಬೇಕಾದ ಅಗತ್ಯ ನೆರವನ್ನು ನಮ್ಮ ಸಂಸ್ಥೆಯಿಂದ ಅಳಿಲುಸೇವೆಯಂತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಅಂತರಗಂಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಂಕರ್, ಬೆಸ್ಟ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ಅಧ್ಯಕ್ಷೆ ಅನುರಾಧ, ಕಾರ್ಯದರ್ಶಿ ಶಮ್ಗರ್, ಸಿ.ವಿ.ನಾಗರಾಜ್, ಮಹಿಮಾ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !