ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಜೆಂಟರು ಗೊಂದಲಕ್ಕೆ ಆಸ್ಪದ ಕೊಡಬೇಡಿ

ಕಾರ್ಯಾಗಾರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಮುನಿಯಪ್ಪ ಸೂಚನೆ
Last Updated 20 ಮೇ 2019, 14:21 IST
ಅಕ್ಷರ ಗಾತ್ರ

ಕೋಲಾರ: ‘ಮತ ಎಣಿಕೆ ದಿನದಂದು ಏಜೆಂಟರು ಎದುರಾಳಿಗಳಿಂದ ಮೋಸ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಸೂಚಿಸಿದರು.

ಪಕ್ಷದ ಮತ ಎಣಿಕೆ ಏಜೆಂಟರಿಗೆ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ‘ಮತ ಎಣಿಕೆ ದಿನ ಏಜೆಂಟರು ಸಮಯ ಪಾಲನೆ ಮಾಡಬೇಕು. ಬೆಳಿಗ್ಗೆ 6.30ರೊಳಗೆ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು. ಯಾವುದೇ ಗೊಂದಲಕ್ಕೆ ಆಸ್ಪದ ಕೊಡಬೇಡಿ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಪಕ್ಷವು 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲ್ಲಿದೆ. ಇದರಲ್ಲಿ ಕೋಲಾರ ಲೋಕಸಭಾ ಕ್ಷೇತ್ರ ಸಹ ಒಂದು. ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಸಂಗತಿ ಬಯಲಾಗಿದೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಇದಕ್ಕೆ ಕೋಲಾರ ಕ್ಷೇತ್ರದಿಂದಲೂ ಪಕ್ಷದ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂಬ ಪಕ್ಷದ ಕಾರ್ಯಕರ್ತರ ಕನಸು ನನಸಾಗುವ ಕಾಲ ಬಂದಿದೆ. ಕ್ಷೇತ್ರದ ಹಾಲಿ ಸಂಸದ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

‘ಕ್ಷೇತ್ರದ ಎಲ್ಲ 8 ವಿಧಾನಸಭೆ ಕ್ಷೇತ್ರಗಳಲ್ಲಿ ಮತ ಎಣಿಕೆ ಏಜೆಂಟರಾಗಿ ನೇಮಕಗೊಂಡಿರುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಮತ ಎಣಿಕೆ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇದ್ದು ಮತ ವಿವರ ಬರೆದುಕೊಳ್ಳಬೇಕು. ಸ್ವಲ್ಪ ಯಾಮಾರಿದರೂ ಎದುರಾಳಿ ಅಭ್ಯರ್ಥಿ ಕಡೆಯವರಿಂದ ಮೋಸ ಹೋಗುವ ಸಾಧ್ಯತೆ ಇದೆ’ ಎಂದು ಕಿವಿಮಾತು ಹೇಳಿದರು.

ಪಕ್ಷ ವಿರೋಧಿ: ‘ಮಾಲೂರಿನಲ್ಲಿ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರು ಪಕ್ಷದ ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿದವರು. ನಂತರ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಯಾರನ್ನೋ ಬೆಂಬಲಿಸಿದರು. ಪಕ್ಷಕ್ಕೆ ಮರಳಿದ ನಂತರ ಚುನಾವಣೆ ವೇಳೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಮುಂದೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ’ ಎಂದರು.

‘ಇಡೀ ಕ್ಷೇತ್ರದಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಚುನಾವಣೆ ನಂತರ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿದ್ದೇನೆ. ಎಲ್ಲ ಕಡೆ ಶೇ 90ರಷ್ಟು ಮಂದಿ ಬಿಜೆಪಿಗೆ ಮತ ಹಾಕಿರುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ನನ್ನ ಗೆಲುವು ನಿಶ್ಚಿತ. ಆತಂಕಪಡುವ ಅಗತ್ಯವೇ ಇಲ್ಲ. ನಾನು ಜಿಲ್ಲೆಯ ಮಣ್ಣಿನ ಮಗ, ಇಲ್ಲೇ ಹುಟ್ಟಿ ಬೆಳೆದವರು, ಓಡಿ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಕೃಷ್ಣಾರೆಡ್ಡಿ, ಮಾಜಿ ಶಾಸಕರಾದ ವೈ.ಸಂಪಂಗಿ, ಎ.ನಾಗರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT