ಶನಿವಾರ, ಅಕ್ಟೋಬರ್ 24, 2020
25 °C
ಕೃಷಿ ವಿ.ವಿ ರಾಜ್ಯ ಘಟಕದ ಅಧಿಕಾರಿ ಪೆನ್ನೋಬಳಿಸ್ವಾಮಿ ಅಭಿಪ್ರಾಯ

ಕೃಷಿ ಪರಿಕರ ಮಾರಾಟಗಾರರು ಮಾಹಿತಿ ಮೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಕೃಷಿ ಮಾಹಿತಿ ತಲುಪಿಸುವ ಪ್ರಾಥಮಿಕ ಮೂಲವಾಗಿದ್ದು, ಇವರಿಗೆ ಡಿಪ್ಲೊಮಾ ಕೋರ್ಸ್ ಅತ್ಯವಶ್ಯಕ’ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ರಾಜ್ಯ ಘಟಕದ ಅಧಿಕಾರಿ ಜಿ.ಆರ್.ಪೆನ್ನೋಬಳಿಸ್ವಾಮಿ ಅಭಿಪ್ರಾಯಪಟ್ಟರು.

ತೋಟಗಾರಿಕೆ ಮಹಾವಿದ್ಯಾಲಯ, ಕೃಷಿ ವಿ.ವಿ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೊಮಾ ಪ್ರಮಾಣಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ರೈತರು ಕೆಲ ಸಂದರ್ಭದಲ್ಲಿ ಕೃಷಿಯಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ವಿಜ್ಞಾನಿಗಳನ್ನು ಸಂಪರ್ಕಿಸದೆ ನೇರವಾಗಿ ಕೃಷಿ ಪರಿಕರ ಅಂಗಡಿಗೆ ಭೇಟಿ ಕೊಟ್ಟು ಪರಿಕರ ಖರೀದಿಸುತ್ತಾರೆ. ಆದ ಕಾರಣ ಕೃಷಿ ಪರಿಕರ ಮಾರಾಟಗಾರರು ಕೃಷಿ ತಾಂತ್ರಿಕ ಮಾಹಿತಿಯನ್ನು ತಿಳಿದು ರೈತರಿಗೆ ಸಲಹೆಯೊಂದಿಗೆ ಪರಿಕರ ಒದಗಿಸಲು ಡಿಪ್ಲೊಮಾ ಕೋರ್ಸ್‌ ಓದುವ ಅಗತ್ಯವಿದೆ’ ಎಂದು ಹೇಳಿದರು.

‘ಹೈದರಾಬಾದ್‌ನ ಕೃಷಿ ವಿಸ್ತರಣೆ ನಿರ್ವಹಣಾ ರಾಷ್ಟ್ರೀಯ ಸಂಸ್ಥೆಯು ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ಸಂಬಂಧಿತ ಜ್ಞಾನ ಹೆಚ್ಚಿಸಲು 2003ರಲ್ಲಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ ಆರಂಭಿಸಿತು. ಇದರ ಸಕಾರಾತ್ಮಕ ಬೆಳವಣಿಗೆ ಅವಲೋಕಿಸಿದ ಕೃಷಿ ಸಚಿವಾಲಯವು ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಕೋರ್ಸ್‌ ಅನುಷ್ಠಾನಗೊಳಿಸಲು ನಿರ್ಧರಿಸಿತು. ಈ ಕೋರ್ಸ್ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಕೃಷಿ ಮಾಹಿತಿ ನೀಡಲು ವರದಾನವಾಗಿದೆ’ ಎಂದರು.

ರೈತರ ಶ್ರೇಯೋಭಿವೃದ್ಧಿ: ‘ತೋಟಗಾರಿಕೆ ಮಹಾವಿದ್ಯಾಲಯದಲ್ಲಿನ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ನಲ್ಲಿ ಕೃಷಿ ಪರಿಕರ ಮಾರಾಟಗಾರರು ಪಡೆದ ತರಬೇತಿಯನ್ನು ರೈತರಿಗೆ ತಲುಪಿಸಬೇಕು. ಜತೆಗೆ ರೈತರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ವಿ.ಡಿ.ರೂಪಾದೇವಿ ಕಿವಿಮಾತು ಹೇಳಿದರು.

‘ಡಿಪ್ಲೊಮಾ ಪದವಿಯು ಕೇವಲ ಪ್ರಮಾಣಪತ್ರಕ್ಕೆ ಸೀಮಿತವಾಗಬಾರದು. ಬದಲಿಗೆ ರೈತರ ಅಭಿವೃದ್ಧಿಗೆ ಬಳಕೆಯಾಗಬೇಕು. ಆಗ ಮಾತ್ರ ಪದವಿ ಪಡೆದಿದ್ದಕ್ಕೆ ಸಾರ್ಥಕ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜ್ ಅಭಿಪ್ರಾಯಪಟ್ಟರು.

ಹೆಮ್ಮೆಯ ಸಂಗತಿ: ‘ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೊಮಾ ಕೋರ್ಸ್‌ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದರಿಂದ ಜಿಲ್ಲೆಯ ರೈತರಿಗೆ ಸದುಪಯೋಗವಾಗಬೇಕು’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಬಿ.ಜಿ.ಪ್ರಕಾಶ್ ಸಲಹೆ ನೀಡಿದರು.

ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಕೆ.ಎಸ್‌.ನಾಗರಾಜ್, ಬಿ.ದೊಡ್ಡಬಸಪ್ಪ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎಸ್‌.ಅನಿಲ್‌ಕುಮಾರ್‌ ಹಾಗೂ ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರು ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.