ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಿಗೊಮ್ಮೆ ಕೃಷಿ ಸಂವಾದ

ವಿಚಾರ ಸಂಕಿರಣಕ್ಕೆ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಚಾಲನೆ
Last Updated 7 ಡಿಸೆಂಬರ್ 2022, 4:26 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯು ಕೃಷಿಯಲ್ಲಿ ಪ್ರಸಿದ್ಧಿ ಪಡೆಯಬೇಕು. ಹೀಗಾಗಿ, ರೈತರು ಪರ್ಯಾಯ ಕೃಷಿಯಲ್ಲಿ ತೊಡಗಿ ಸಮೃದ್ಧಿ ಹೊಂದಬೇಕು. ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಮೂರು ತಿಂಗಳಿಗೊಮ್ಮೆ ಕೃಷಿ, ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ‌ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ, ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕೃಷಿಕ ಸಮಾಜದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಡ್ರ್ಯಾಗನ್ ಫ್ರೂಟ್, ಬಟರ್‌ ಫ್ರೂಟ್‌, ಸ್ಟ್ರಾಬೆರಿ ಸೇರಿದಂತೆ ಹಲವು ಹಣ್ಣು, ತರಕಾರಿಗೆ ಬೆಂಗಳೂರು, ಆಂಧ್ರ‌‌‌ ಸೇರಿದಂತೆ ಹಲವೆಡೆ ದೊಡ್ಡ ಮಾರುಕಟ್ಟೆ ಇದೆ. ಮೌಲ್ಯವೂ ಇದೆ. ಜಿಲ್ಲೆಯಲ್ಲಿ ಉತ್ತಮ ಸಂಪರ್ಕ ವ್ಯವಸ್ಥೆಯೂ ಇದೆ. ಮಾಲ್‌ ಸೇರಿದಂತೆ ವಿವಿಧೆಡೆ ಬೇಡಿಕೆಯೂ ಚೆನ್ನಾಗಿದೆ. ಮಧ್ಯವರ್ತಿಗಳು ಇಲ್ಲದೆ‌ ಮಾರಾಟ ನಡೆಯಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, 'ಕೃಷಿ ಪದ್ಧತಿಗಳು ಸಮಯಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಫಸಲು ಹೆಚ್ಚು‌ ಕೊಡಬೇಕು. ಜೊತೆಗೆ ಪರಿಸರ ಸ್ನೇಹಿಯಾಗಿರಬೇಕು. ಪ್ಲಾಂಟೇಷನ್‌ಗೆ ರೈತರ ಮುಂದೆ ‌ಬಂದರೆ ಪಂಚಾಯಿತಿಯಿಂದ ಸಹಾಯ ಮಾಡಲಿದ್ದೇವೆ' ಎಂದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ನಾಗರಾಜ್‌, 'ಬೇರೆ, ಬೇರೆ ಬೆಳೆ ಬೆಳೆದು ಸಮೃದ್ಧಿ ಕಾಣೋಣ. ಬರೀ ಟೊಮೆಟೊ ಬೆಳೆದು ಬೀದಿಗೆ ಸುರಿಯುವುದು ಬೇಡ. 2 ಎಕರೆ ಜಮೀನಿದ್ದರೆ ಗೆಜೆಟೆಡ್ ಅಧಿಕಾರಿಗಿಂತ ಚೆನ್ನಾಗಿ ಬದುಕುಬಹುದು. ವಲಸೆ ಹೋಗದೆ ಜಮೀನಿನಲ್ಲಿ ಲಾಭದಾಯಕ ಕೃಷಿಯಲ್ಲಿ ತೊಡಗಬೇಕು' ಎಂದು ಹೇಳಿದರು.

ಬೆಳೆಗಳ ಪ್ರಾತ್ಯಕ್ಷಿಕೆಯನ್ನು ಟಮಕದ ತೋಟಗಾರಿಕೆ ಮಹಾವಿದ್ಯಾಲಯ ವಿದ್ಯಾರ್ಥಿಗಳು ‌ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿದರು. ರೈತರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಉಪಯುಕ್ತ ಮಾಹಿತಿ ನೀಡಿದರು.

ಕೃಷಿಕ ಸಮಾಜದ ಉಪಾಧ್ಯಕ್ಷ ಉಪಾಧ್ಯಕ್ಷ ರಾಜರೆಡ್ಡಿ, ಕೃಷಿ ಇಲಾಖೆ ಜಂಟಿ ಉಪನಿರ್ದೇಶಕಿ ವಿ.ಡಿ.ರೂಪಾದೇವಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ, ಉಪ ಕೃಷಿ ನಿರ್ದೇಶಕರಾದ ಪಂಕಜಾ, ಭವ್ಯರಾಣಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ವಿನಾಯಕ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ.ಶಿವರಾಮ್‌, ವಕೀಲ ಕೆ.ವಿ‌.ಶಂಕರ್, ಹೋರಾಟಗಾರ್ತಿ ಗೀತಾ, ರೈತ ಮುಖಂಡರಾದ ಅಬ್ಬಣಿ ಶಿವಪ್ಪ, ನಳಿನಿ, ಕೋಟಿಗಾನಹಳ್ಳಿ ಗಣೇಶ್‍ಗೌಡ, ಪ್ರಗತಿಪರ ಯುವ ರೈತ ಕಾರ್ತಿಕ್‌ ಗೌಡ, ಜಿಲ್ಲೆಯ ಪ್ರಗತಿಪರ ರೈತರು ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT