ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೋರೇಟ್ ಪರವಾದ ಕೇಂದ್ರ ಸರ್ಕಾರ: ಎ. ಜ್ಯೋತಿ ಆರೋಪ

ಅಖಿಲ ಭಾರತ ಯುವ ಜನ ಫೆಡರೇಷನ್‌ ತಾಲ್ಲೂಕು ಸಮ್ಮೇಳನ
Last Updated 8 ಫೆಬ್ರುವರಿ 2021, 1:13 IST
ಅಕ್ಷರ ಗಾತ್ರ

ಕೆಜಿಎಫ್‌: ಕಾರ್ಪೋರೇಟ್‌ ಕಂಪನಿಗಳ ಪರವಾಗಿರುವ ಕೇಂದ್ರ ಸರ್ಕಾರ ಲೂಟಿಕೋರ ಸರ್ಕಾರವಾಗಿದೆ. ಇಂತಹ ಸರ್ಕಾರವನ್ನು ಆರಿಸಿದ್ದಕ್ಕೆ ನಾವು ತಲೆತಗ್ಗಿಸಬೇಕು ಎಂದು ಅಖಿಲ ಭಾರತ ಮಹಿಳಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷೆ ಎ.ಜ್ಯೋತಿ ಆರೋಪಿಸಿದರು.

ನಗರದಲ್ಲಿ ಭಾನುವಾರ ಅಖಿಲ ಭಾರತ ಯುವ ಜನ ಫೆಡರೇಷನ್‌ (ಎಐವೈಎಫ್‌) ತಾಲ್ಲೂಕು ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿ, ಗೋಪೂಜೆ ಮಾಡುತ್ತೇವೆ ಎನ್ನುವವರು ಎರಡು ತಿಂಗಳಿಂದ ಚಳಿ, ಮಳೆಯನ್ನು ಲೆಕ್ಕಿಸದೆ ರಸ್ತೆಯಲ್ಲಿ ಕುಳಿತಿರುವ ರೈತರನ್ನು ಮಾತನಾಡಿಸಲು ಸಾಧ್ಯವಾಗಿಲ್ಲ. ರೈತರನ್ನು ಭಯೋತ್ಪಾದಕರು ಎನ್ನುತ್ತಾರೆ. ತಾನೇ ಹಾಕಿದ ರಸ್ತೆಗೆ ಮೊಳೆ ಹೊಡೆದು ತನ್ನ ರೈತರ ಪರವಾದ ಕಾಳಜಿಯನ್ನು ತೋರಿಸಿದೆ. ಇದೊಂದು ನಾಚಿಗೆಟ್ಟ ಸರ್ಕಾರ ಎಂದು ದೂರಿದರು.

ಸರ್ಕಾರವೆಂದರೆ ಪ್ರಜೆಗಳಿಗೆ ಅಪ್ಪ– ಅಮ್ಮ ಇದ್ದ ಹಾಗೆ. ಈ ಸರ್ಕಾರ ಜನರಿಗೆ ವಿರುದ್ಧವಾದ ಕೆಲಸಗಳನ್ನೇ ಮಾಡುತ್ತಿದೆ. ನಾಗಪುರದಿಂದ ರಿಮೋಟ್‌ ಆಗಿ ಕೆಲಸ ಮಾಡುತ್ತಿದೆ. ನಾವೆಲ್ಲರೂ ಆರ್‌ಎಸ್‌ಎಸ್‌ನ ಬಣ್ಣ ಬಯಲು ಮಾಡಬೇಕಾಗಿದೆ. ಮೋದಿ ಸರ್ಕಾರದ ರೈತ ವಿರೋಧ ಧೋರಣೆ ಮತ್ತು ಬಂಡವಾಳಶಾಹಿ ಪರವಾದ ನಿಲುವನ್ನು ವಿರೋಧಿಸಬೇಕಾಗಿದೆ ಎಂದರು.

ಅನ್ನ ಹಾಕುವ ರೈತರ ಪರ ಕಾಳಜಿ ಕೇಂದ್ರ ಸರ್ಕಾರಕ್ಕೆ ಇಲ್ಲ. ದುಡ್ಡುನಿಂದ ಬೆಳೆ ಬೆಳೆಯಬಹುದು ಎಂದುಕೊಂಡಿದ್ದಾರೆ. ಅದಾನಿ, ಅಂಬಾನಿಗೆ ದುಡ್ಡು ಇರಬಹುದು. ಅವರು ಹೊಟ್ಟೆಗೆ ತಿನ್ನುವುದು ಅನ್ನವನ್ನೇ ವಿನಃ ದುಡ್ಡನ್ನಲ್ಲ. ಈಗ ರೈತರನ್ನು ಒಕ್ಕಲೆಬ್ಬಿಸಲು ಎಲ್ಲಾ ರೀತಿಯ ಕುತಂತ್ರಗಳನ್ನು ಮಾಡಲಾಗುತ್ತಿದೆ. ಗುತ್ತಿಗೆ ಆಧಾರದ ಮೇರೆಗೆ ಅವರ ಜಮೀನು ಪರಭಾರೆ ಮಾಡಲು ಕಾನೂನುಬದ್ಧ ಶಾಸನ ಮಾಡಲು ಹೊರಟಿದ್ದಾರೆ. ರೈತರ ಮೇಲೆ ನಗರ ಪ್ರದೇಶದಲ್ಲಿರುವವರು ಕೂಡ ಕಾಳಜಿ ವಹಿಸಬೇಕು. ನಮಗೆ ಸಂಬಂಧ ಇಲ್ಲ ಎಂದು ಭಾವಿಸಬಾರದು. ರೈತರ ಬೆಳೆ ಕಾರ್ಪೋರೇಟ್ ಕುಳಗಳ ಕೈಗೆ ಹೋದರೆ ಮುಂದಿನ ದಿನಗಳಲ್ಲಿ ಅಕ್ಕಿ ಕೆಜಿಗೆ ₹200, ₹300 ಆಗುತ್ತದೆ. ರೇಷನ್‌ಪದ್ಧತಿ ಹಾಳಾಗುತ್ತದೆ. ಇಂತಹ ದುಷ್ಟ ವ್ಯವಸ್ಥೆಗೆ ಮೋದಿ ಸರ್ಕಾರ ಮಣೆ ಹಾಕುತ್ತಿದೆ ಎಂದು ಜ್ಯೋತಿ ಆರೋಪಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರನ್ನಾಗಿ ರಂಜಿತ್‌ಕುಮಾರ್ ಮತ್ತು ಕಾರ್ಯದರ್ಶಿಯಾಗಿ ಕಾಮೇಶ್ ಅವರನ್ನು ಆಯ್ಕೆ ಮಾಡಲಾಯಿತು. ಸಮ್ಮೇಳನದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮುಖಂಡರಾದ ರಾಮಸ್ವಾಮಿ, ಮೂರ್ತಿ, ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT