ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆ

ಶನಿವಾರ, ಏಪ್ರಿಲ್ 20, 2019
27 °C
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ರಾಮರಾಜು ಹೇಳಿಕೆ

ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆ

Published:
Updated:

ಕೋಲಾರ: ‘ಕಾಂಗ್ರೆಸ್-–ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗದಂತೆ ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ರಾಮರಾಜು ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್‌– ಜೆಡಿಎಸ್ ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸಬೇಕಾದರೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಅಗತ್ಯ. ಹೀಗಾಗಿ ಉಭಯ ಪಕ್ಷಗಳ ಮುಖಂಡರು ಸಭೆ ನಡೆಸಿ ಮೈತ್ರಿ ಅಭ್ಯರ್ಥಿ ಸಂಸದ ಕೆ.ಎಚ್.ಮುನಿಯಪ್ಪರ ಪರ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

‘ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಕಡಿಮೆ ಸ್ಥಾನ ಗೆದ್ದರೂ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ. ಎಚ್.ಡಿ.ಕುಮಾರಸ್ವಾಮಿ 5 ವರ್ಷ ಮುಖ್ಯಮಂತ್ರಿಯಾಗಿ ಸರ್ಕಾರ ಮುನ್ನಡೆಸಬೇಕು. ರಾಜ್ಯದಲ್ಲಿ ರೈತಪರ, ಜನಪರ ಸರ್ಕಾರ ಮುಂದುವರಿಯಬೇಕು. 2 ಪಕ್ಷಗಳ ಮುಖಂಡರ ನಡುವೆ ಭಿನ್ನಾಭಿಪ್ರಾಯ ಏನೇ ಇದ್ದರೂ ಸರ್ಕಾರದ ಹಿತದೃಷ್ಟಿಯಿಂದ ಜಾತ್ಯತೀತ ಪಕ್ಷಗಳು ಒಟ್ಟಿಗೆ ಚುನಾವಣೆ ಎದುರಿಸಲು ತೀರ್ಮಾನಿಸಿವೆ’ ಎಂದು ವಿವರಿಸಿದರು.

‘ಲೋಕಸಭೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಪರಸ್ಪರ ಮಾತುಕತೆಯಿಂದ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಪರ ಕೆಲಸ ಮಾಡುತ್ತೇವೆ’ ಎಂದು ನುಡಿದರು.

ಒಟ್ಟಾಗಿ ಕೆಲಸ: ‘ಮುನಿಯಪ್ಪ ಅವರನ್ನು ಬೆಂಬಲಿಸುವಂತೆ ಎರಡೂ ಪಕ್ಷಗಳ ವರಿಷ್ಠರು ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಉಳಿದಿರುವ 10 ದಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ. ವಿಧಾನ ಪರಿಷತ್ ಸದಸ್ಯ ನಸೀರ್‌ ಅಹಮ್ಮದ್ ಸಹ ಮುನಿಯಪ್ಪರ ಪರ ಪ್ರಚಾರಕ್ಕೆ ಬರುತ್ತಾರೆ’ ಎಂದು ಮಾಜಿ ಸಚಿವ ಕೆ.ಎ.ನಿಸಾರ್ ಅಹಮ್ಮದ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ಜನ ನೆಮ್ಮದಿಯಾಗಿರಲು ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ಕೋಲಾರ ಕ್ಷೇತ್ರದ ಜನ ಮುನಿಯಪ್ಪ ಅವರಿಗೆ ಮತ ಹಾಕಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಮನವಿ ಮಾಡಿದರು.

ಪ್ರಚಾರದಲ್ಲಿ ಭಾಗಿ: ‘ಶಾಸಕ ಕೆ.ಶ್ರೀನಿವಾಸಗೌಡರು ನೇತೃತ್ವದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತರಲಾಗಿದೆ. ಪಕ್ಷದ ತಾಲ್ಲೂಕು ಅಧ್ಯಕ್ಷನಾಗಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದೇನೆ. ಮುಂದೆಯೂ ಪಕ್ಷದ ವತಿಯಿಂದ ನಡೆಸುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತೇನೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಾಬುಮೌನಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !