ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಗುರುತಿನ ಚೀಟಿ ಕಡ್ಡಾಯ

ಚುನಾವಣಾ ಪ್ರಧಾನ ತರಬೇತುದಾರ ತಿಲಗಾರ್ ಹೇಳಿಕೆ
Last Updated 22 ಮಾರ್ಚ್ 2019, 14:18 IST
ಅಕ್ಷರ ಗಾತ್ರ

ಕೋಲಾರ: ‘ಗುರುತಿನ ಚೀಟಿ ಇಲ್ಲದ ಮತದಾರರು ಚುನಾವಣಾ ಆಯೋಗ ಸೂಚಿಸಿರುವ ಪರ್ಯಾಯ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು. ಇದಕ್ಕೆ ಅವಕಾಶ ನೀಡಬೇಕು’ ಎಂದು ಚುನಾವಣಾ ಪ್ರಧಾನ ತರಬೇತುದಾರ ಎಚ್.ಕೆ.ತಿಲಗಾರ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಚುನಾವಣಾ ಶಾಖೆಯು ಇಲ್ಲಿ ಶುಕ್ರವಾರ ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಭಾವಚಿತ್ರ ಇರುವ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಮತದಾರರು ಈ ಪಟ್ಟಿಗೆ ಹೊಂದಾಣಿಕೆಯಾಗುವ ಪರ್ಯಾಯ ಗುರುತಿನ ಚೀಟಿ ಕಡ್ಡಾಯವಾಗಿ ತೋರಿಸಬೇಕು’ ಎಂದರು.

‘ಏ.18ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯುತ್ತದೆ. ಮತಗಟ್ಟೆ ಅಧಿಕಾರಿಗಳು ಬೂತ್‌ಗಳಲ್ಲಿ 7 ಗಂಟೆಯೊಳಗೆ ಮತದಾನಕ್ಕೆ ಸಿದ್ಧತೆ ಪೂರ್ಣಗೊಳಿಸಬೇಕು. ಮತದಾನದ ಆರಂಭ ಹಾಗೂ ಮುಕ್ತಾಯದ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿಗಳ ಮೊಬೈಲ್‌ಗೆ ಸಂದೇಶ ಕಳುಹಿಸಬೇಕು. ಸಂಜೆ 6ರ ವೇಳೆಗೆ ಮತದಾನ ಮುಗಿಯದಿದ್ದರೆ ಸಾಲಿನಲ್ಲಿ ನಿಂತಿರುವ ಕಡೆ ಮತದಾರರಿಂದ ಆರಂಭಿಸಿ ಮೊದಲ ಮತದಾರರವರೆಗೆ ಚೀಟಿ ನೀಡಬೇಕು’ ಎಂದು ತಿಳಿಸಿದರು.

‘ಮತದಾನಕ್ಕೆ ತಡವಾಗಿ ಬಂದವರಿಗೆ ಅವಕಾಶ ನೀಡಬಾರದು. ಮತದಾನಕ್ಕೆ ಮುಂಚಿತವಾಗಿ ಮತದಾರರಿಗೆ ಬಿಎಲ್‍ಒಗಳು ವೋಟರ್ ಸ್ಲಿಪ್ ನೀಡುತ್ತಾರೆ. ಮತದಾರರು ವೋಟರ್‌ ಸ್ಲಿಪ್‌ ಜತೆಗೆ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಗುರುತಿನ ಚೀಟಿ ಇಲ್ಲದಿದ್ದರೆ ಚುನಾವಣಾ ಆಯೋಗ ಗುರುತಿಸಿರುವ ಭಾವಚಿತ್ರಸಹಿತ ಪರ್ಯಾಯ 11 ದಾಖಲೆಪತ್ರಗಳಲ್ಲಿ ಒಂದನ್ನು ತೋರಿಸಿ ಹಕ್ಕು ಚಲಾಯಿಸಬಹುದು’ ಎಂದು ವಿವರಿಸಿದರು.

ಬೂತ್‌ ಪ್ರವೇಶಿಸುವಂತಿಲ್ಲ: ‘ಅಭ್ಯರ್ಥಿಗಳ ಜತೆ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಬೂತ್ ಪ್ರವೇಶಿಸುವಂತಿಲ್ಲ. ಅಂಧ ಮತದಾರರಿದ್ದರೆ ಸಹಾಯಕರು ಘೋಷಣಾ ಪತ್ರದಲ್ಲಿ ಸಹಿ ಮಾಡಿಸಿಕೊಂಡು ಪ್ರತಿಜ್ಞೆ ಸ್ವೀಕರಿಸಿದ ನಂತರ ಹಕ್ಕು ಚಲಾಯಿಸಲು ಸಹಾಯ ಮಾಡಬಹುದು’ ಎಂದು ಮಾಹಿತಿ ನೀಡಿದರು.

‘ಮತ ಚಲಾಯಿಸಿದ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಬೇಕು. ತೋರು ಬೆರಳು ಇಲ್ಲದಿದ್ದರೆ ಪಕ್ಕದ ಬೆರಳಿಗೆ ಹಾಕಬೇಕು. ಮತದಾನ ಪ್ರಕ್ರಿಯೆ ಮುಗಿದ ನಂತರ ವಿದ್ಯುನ್ಮಾನ ಮತ ಯಂತ್ರ ಮತ್ತು ಮತ ಖಾತ್ರಿ ಉಪಕರಣಗಳನ್ನು ಡಿಮಸ್ಟರಿಂಗ್ ಕೇಂದ್ರಕ್ಕೆ ಸುರಕ್ಷಿತವಾಗಿ ತಲುಪಿಸಬೇಕು, ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು’ ಎಂದು ಸೂಚಿಸಿದರು.

ಉಪ ವಿಭಾಗಾಧಿಕಾರಿ ಸೋಮಶೇಖರ್, ಸಹಾಯಕ ಚುನಾವಣಾಧಿಕಾರಿ ವಿಠಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT