ಶುಕ್ರವಾರ, ಸೆಪ್ಟೆಂಬರ್ 25, 2020
29 °C
ಅಧಿಕಾರಿಗಳಿಗೆ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್‌ ಸೂಚನೆ

ಅಂಬೇಡ್ಕರ್‌ ಭವನ: ವಿಳಂಬ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಏಕಕಾಲಕ್ಕೆ ಅಂಬೇಡ್ಕರ್‌ ಭವನಗಳ ಕಾಮಗಾರಿ ಪೂರ್ಣಗೊಳ್ಳಬೇಕು. ಕಾಮಗಾರಿ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್.ಅರುಣ್‌ಪ್ರಸಾದ್ ಸೂಚಿಸಿದರು.

ಇಲ್ಲಿ ಮಂಗಳವಾರ ನಡೆದ ಸ್ಥಾಯಿ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ‘ಅಂಬೇಡ್ಕರ್‌ ಭವನಗಳ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಜಿ.ಪಂ ಎದುರು ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ನಿರ್ಮಿತಿ ಕೇಂದ್ರ ಹಾಗೂ ಭೂಸೇನಾ ನಿಗಮದ ಅಧಿಕಾರಿಗಳು ಸಭೆಗೆ ಗೈರಾದರು. ಈ ವಿಷಯ ತಿಳಿದು ಕೆಂಡಾಮಂಡಲರಾದ ಅಧ್ಯಕ್ಷರು, ‘ಅಧಿಕಾರಿಗಳಿಗೆ ಸ್ವಲ್ಪವೂ ಜವಾಬ್ದಾರಿಯಿಲ್ಲ. ಸಭೆಗೆ ಬಾರದೆ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ’ ಎಂದು ಆದೇಶಿಸಿದರು.

ವರದಿ ನೀಡಬೇಕು: ‘ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಿನ ಸ್ಥಾಯಿ ಸಮಿತಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಅನುದಾನ ಬಳಕೆ ಮತ್ತು ಉಳಿಕೆ ಸಂಬಂಧ ಸಭೆಗೆ ಸಂಪೂರ್ಣ ಮಾಹಿತಿ ನೀಡಬೇಕು. ಅಲ್ಲದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಗತಿ ಕುರಿತು ವರದಿ ನೀಡಬೇಕು’ ಎಂದು ತಿಳಿಸಿದರು.

‘ವಕ್ಕಲೇರಿ ಹೋಬಳಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಸಂಬಂಧ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದಿದ್ದೇವೆ. ಆದರೆ, ಘಟಕ ಮಾತ್ರ ಆರಂಭಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಇನ್ನಾದರೂ ಗ್ರಾಮೀಣ ಭಾಗದಲ್ಲಿ ನೀರಿನ ಘಟಕ ಆರಂಭಿಸಬೇಕು. ಇಲ್ಲದಿದ್ದರೆ ಜಿ.ಪಂ ಸದಸ್ಯರ ಸ್ವಂತ ಹಣದಲ್ಲಿ ಘಟಕಗಳ ಸ್ಥಾಪನೆ ಮಾಡಿಕೊಳ್ಳುತ್ತೇವೆ. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಹಾಗೂ ಸುಸ್ಥಿತಿಯಲ್ಲಿರುವ ಘಟಕಗಳ ಸಂಬಂಧ ತಾಲ್ಲೂಕುವಾರು ಪಟ್ಟಿ ನೀಡಬೇಕು’ ಎಂದು ಸೂಚಿಸಿದರು.

ಅನುಮೋದನೆ ಪಡೆಯಿರಿ: ‘ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳ ಪಟ್ಟಿಗೆ ಜಿ.ಪಂ ಸಮಿತಿಯಿಂದ ಅನುಮೋದನೆ ಪಡೆಯಬೇಕು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಾಲ್ಲೂಕುವಾರು ವಿದ್ಯಾರ್ಥಿಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬಿಡುಗಡೆಯಾದ ಅನುದಾನ ದುರ್ಬಳಕೆ ಆಗಬಾರದು’ ಎಂದು ಹೇಳಿದರು.

ಸಮಿತಿ ಸದಸ್ಯರಾದ ಉಷಾ, ನಾಗವೇಣಿ, ಪಾರ್ವತಮ್ಮ, ಜಿ.ಪಂ ಯೋಜನಾಧಿಕಾರಿ ಕೃಷ್ಣಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.