ಸಮ ಸಮಾಜಕ್ಕೆ ದಾರಿ ತೋರಿದ ಅಂಬೇಡ್ಕರ್‌

ಭಾನುವಾರ, ಮೇ 26, 2019
27 °C

ಸಮ ಸಮಾಜಕ್ಕೆ ದಾರಿ ತೋರಿದ ಅಂಬೇಡ್ಕರ್‌

Published:
Updated:
Prajavani

ಕೋಲಾರ: ‘ಅಂಬೇಡ್ಕರ್ ಸಮ ಸಮಾಜ ನಿರ್ಮಾಣಕ್ಕೆ ದಾರಿ ತೋರಿಸಿಕೊಟ್ಟರು. ಆದರೆ, ಸರ್ಕಾರಗಳು ಅವರ ವಿಚಾರಧಾರೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಹಿಂದೇಟು ಹಾಕುತ್ತಿವೆ’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಬಸವಶ್ರೀ ಕಾನೂನು ಕಾಲೇಜಿನಲ್ಲಿ ಗುರುವಾರ ನಡದ ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಮಹನೀಯರ ಆಶಯ, ವಿಚಾರಗಳನ್ನು ಸಮಾಜಕ್ಕೆ ಉಪಯೋಗವಾಗುವ ರೀತಿ ಅನುಷ್ಠಾನಗೊಳಿಸದಿದ್ದರೆ ಭವಿಷ್ಯದಲ್ಲಿ ದೇಶಕ್ಕೆ ಉಳಿಗಾಲವಿಲ್ಲ’ ಎಂದರು.

‘ಅಂಬೇಡ್ಕರ್‌ ಪ್ರತಿ ವಿಷಯದಲ್ಲೂ ಅಪಾರ ಜ್ಞಾನ ಹೊಂದಿದ್ದರು. ಕಾರ್ಮಿಕರ ಕೆಲಸದ ಅವಧಿ ನಿಗದಿ, ಮಹಿಳೆಯರಿಗೆ ಆಸ್ತಿ ಹಕ್ಕು, ರೈತರಿಗೆ ಶಿಕ್ಷಣ ಸೇರಿದಂತೆ ಅಂಬೇಡ್ಕರ್‌ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

‘ದೇಶದಲ್ಲಿ ಬುದ್ಧ ನಡೆಯ ಮೂಲಕ ಬಸವಣ್ಣನವರು ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಬೆಳಕು ಚೆಲ್ಲಿದರು. ಅಂಬೇಡ್ಕರ್‌ ಸಹ ಬುದ್ಧ, ಬಸವಣ್ಣನ ಹಾದಿಯಲ್ಲಿ ಸಾಗಿದರು. ಈ ಮೂವರ ತತ್ವಾದರ್ಶ ಮತ್ತು ವಿಚಾರಗಳನ್ನು ಮರೆತರೆ ದೇಶಕ್ಕೆ ಉಳಿಗಾಲವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ಮುಖ್ಯವಾಹಿನಿಗೆ ತರಲು ಅನೇಕರು ಹಗಲಿರುಳು ಹೋರಾಟ ನಡೆಸಿದರು. ಇದರ ಫಲವಾಗಿ ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ಸೌಕರ್ಯ ದೊರೆಯುವಂತಾಗಿದೆ. ಆದರೆ, ಬೆರಳೆಣಿಕೆ ಮಂದಿ ಸಕಲ ಸವಲತ್ತು ಅನುಭವಿಸುತ್ತಿದ್ದಾರೆ’ ಎಂದು ವಿಷಾದಿಸಿದರು.

ಕೈಗೊಂಬೆಯಾಗಿವೆ: ‘ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವು ಸರ್ಕಾರದ ಹಿಡಿತದಲ್ಲಿ ಇರಬೇಕು. ಜನ ದೇಶದಲ್ಲಿ ಊಟವಿಲ್ಲದೆ ಸಾಯುತ್ತಿದ್ದಾರೆ. ಸುಮಾರು 30 ಕೋಟಿ ಜನರಿಗೆ ಆಧಾರ್ ಕಾರ್ಡ್ ಇಲ್ಲವಾಗಿದೆ. ಬಡವರ ಪರವಾದ ಸಂಸ್ಥೆಗಳು ಖಾಸಗಿ ಕಂಪನಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಸಂವಿಧಾನವು ದಲಿತರಿಗೆ ಸೀಮಿತವೆಂಬ ಮನಸ್ಧಿತಿಯಿಂದ ಹೊರಬರಬೇಕು. ಸಾಮಾಜಿಕವಾಗಿ ಸ್ವಾತಂತ್ರ್ಯ ಸಿಗದಿದ್ದರೆ ಸಾಧನೆ ಅಸಾಧ್ಯ’ ಎಂದು ಉಪನ್ಯಾಸಕ ರಘುರಾಮಯ್ಯ ಹೇಳಿದರು. ಕಾಲೇಜಿನ ಉಪ ಪ್ರಾಂಶುಪಾಲ ಎಂ.ವಿ.ನಾಗರಾಜ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !