ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಕುಟಿಕ ವೃತ್ತಿ: ಕಾನೂನಿಗೆ ತಿದ್ದುಪಡಿ

ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಪಾಟೀಲ ಹೇಳಿಕೆ
Last Updated 31 ಡಿಸೆಂಬರ್ 2020, 15:30 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಹಲವು ಜಾತಿಯ ಜನರು ಕಲ್ಲು ಕುಟಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಇವರ ವೃತ್ತಿ ಮುಂದುವರಿಕೆಗೆ ಅವಕಾಶ ಕಲ್ಪಿಸಲು ಕಾನೂನಿಗೆ ತಿದ್ದುಪಡಿ ತರುತ್ತೇವೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕೋಲಾರವು ಕಲ್ಲು ಗಣಿಗಾರಿಕೆ ನಡೆಯುವ ಪ್ರಮುಖ ಜಿಲ್ಲೆಯಾಗಿದೆ. ಕಲ್ಲು ಗಣಿಗಾರಿಕೆಯಿಂದ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಒದಗಿಸಿದಂತಾಗಿದೆ’ ಎಂದು ಹೇಳಿದರು.

‘ಜಿಲ್ಲೆಯ 5 ಗಣಿಗಾರಿಕೆ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದು, ಒಂದು ಕಡೆ ಅನುಮತಿ ನೀಡಲಾದ ಪ್ರದೇಶಕ್ಕಿಂತ ಹೆಚ್ಚು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಲಾಗಿದೆ. ಈ ಸಂಬಂಧ ಗಣಿಗಾರಿಕೆ ಪರವಾನಗಿದಾರರಿಗೆ ನೋಟಿಸ್ ಜಾರಿ ಮಾಡಿ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ರೈಲ್ವೆ ಇಲಾಖೆಗೆ ಅಗತ್ಯವಿರುವ 40 ಎಂ.ಎಂ ಜಲ್ಲಿ ತಯಾರಿಸಿ ನೀಡಲು ಕ್ರಷರ್‌ ಒಂದಕ್ಕೆ ಅನುಮತಿ ಕೊಡಲಾಗಿತ್ತು. ಆದರೆ, ಆ ಕ್ರಷರ್‌ನಲ್ಲಿ ಹೆಚ್ಚಾಗಿ 20 ಎಂ.ಎಂ ಮತ್ತು ಎಂ ಸ್ಯಾಂಡ್ ತಯಾರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಷರ್‌ ಮಾಲೀಕರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

‘ಜಿಲ್ಲೆಯ 69 ಕ್ರಷರ್‌ಗಳಲ್ಲಿ 47 ಮಾತ್ರ ಚಾಲ್ತಿಯಲ್ಲಿವೆ. ಉಳಿದ 22 ಕ್ರಷರ್‌ ನಿಷ್ಕ್ರಿಯವಾಗಿದ್ದು, ಇವುಗಳನ್ನು ಪುನರಾರಂಭಿಸಬೇಕು. ಕ್ರಷರ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುರಕ್ಷತೆಗೆ ಒತ್ತು ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸಲಹೆ ನೀಡಿದರು.

ಸ್ಥಳದಲ್ಲೇ ಜಿಪಿಎಸ್: ‘ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಕಲ್ಲು ಕುಟಿಕ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿವೆ. ಈ ಕುಟುಂಬಗಳಿಗೆ ಅನುಕೂಲ ಮಾಡಿಕೊಡಲು ಸ್ಥಳದಲ್ಲೇ ಜಿಪಿಎಸ್ ಮಾಡಿ ಶುಲ್ಕ ಕಟ್ಟಿಸಿಕೊಂಡು ಕಲ್ಲು ಕುಟಿಕ ಕೆಲಸ ಮುಂದುವರಿಸಲು ಅನುಮತಿ ನೀಡಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಮನವಿ ಮಾಡಿದರು.

‘ಕಲ್ಲು ಗಣಿಗಾರಿಕೆಗೆ ಅನುಮತಿ ನೀಡುವಾಗ ಸಂಘಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಕಾನೂನಿನಲ್ಲಿ ಇದೆ. ನಂತರ ವೈಯಕ್ತಿವಾಗಿ ಅರ್ಜಿ ಹಾಕಿದವರಿಗೆ ಲಾಟರಿ ಮೂಲಕ ಅನುಮತಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್‌ ಶೋಭಿತಾ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಷಣ್ಮುಗ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT